Advertisement
ಕಳೆದ ವರ್ಷ ಮುಂಗಾರು-ಹಿಂಗಾರು ಎರಡೂ ಮಳೆಗಳು ಕೈ ಕೊಟ್ಟು ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿತ್ತು. ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿತ್ತು. ಕಳೆದ ಬೇಸಿಗೆ ಮಾರ್ಚ್‌ನಿಂದ ಮೇವರೆಗೆ ಈ ಬಾರಿ ಒಂದು ಹನಿ ಮಳೆ ಬಾರದೆ ಜಾನುವಾರುಗಳು ನೀರು, ಮೇವಿನ ತೀವ್ರ ಸಮಸ್ಯೆ ಎದುರಿಸಿದವು. ಜೂನ್ ತಿಂಗಳು ಕಳೆದರೂ ಮಳೆಯಾಗಲಿಲ್ಲ. ಆಗಲೂ ರೈತರ ನೆರವಿಗೆ ಬಾರದ ಪಶು ಇಲಾಖೆ ಈಗ ಮಳೆ ಬಿದ್ದು ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿರುವ ಸಂದರ್ಭದಲ್ಲಿ ಪಶು ಇಲಾಖೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಮೇವು ಬ್ಯಾಂಕ್ ಆರಂಭಿಸಿ ನಗೆಪಾಟಲಿಗೀಡಾಗಿದೆ.
Related Articles
Advertisement
ಪಶು ಇಲಾಖೆ ಮಳೆಗಾಲದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿದ್ದು,ಅದು ಯಾರಿಗೆ ಉಪಯೋಗವಾಗುತ್ತದೆ ಎಂಬುದೇ ಯಕ್ಷಪ್ರಶ್ನೆ. ಯಾರೂ ಮೇವು ಖರೀದಿಸದಿದ್ದರೆ ಸರ್ಕಾರದ ಹಣ ಅಕ್ಷರಶಃ ಪೋಲಾಗುವುದಂತೂ ಸತ್ಯ.
ಈಗೇಕೆ ಮೇವು ಬ್ಯಾಂಕ್: ಅಧಿಕಾರಿಗಳು ಮಳೆ ಬಿದ್ದ ಬಳಿಕ ಈಗ ಮೇವು ಬ್ಯಾಂಕ್ ತೆರೆಯಲು ಕಾರಣ ನ್ಯಾಯಾಲಯದ ಆಜ್ಞೆ ಎನ್ನಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಮೇವಿನ ಕೊರತೆ ಇದ್ದರೂ ಅಧಿಕಾರಿಗಳು ಜಾನುವಾರುಗಳಿಗಾಗಿ ಮೇವು ಬ್ಯಾಂಕ್ ತೆರೆದಿಲ್ಲ. ಹೀಗಾಗಿ ಜಾನುವಾರುಗಳು ಸಮರ್ಪಕ ಮೇವಿಲ್ಲದೇ ಸಾಯುತ್ತಿವೆ ಎಂದು ನಾಗರಿಕರೋರ್ವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಗ ಅಧಿಕಾರಿಗಳು ‘ಮೇವಿನ ಕೊರತೆ ಇಲ್ಲ. ಹಾಗಾಗಿ ಮೇವು ಬ್ಯಾಂಕ್ ಸ್ಥಾಪಿಸಿಲ್ಲ? ಎಂದು ವರದಿ ಸಲ್ಲಿಸಿದ್ದರು. ಈ ವರದಿಯ ವಿಶ್ವಾಸಾರ್ಹತೆಯನ್ನು ನ್ಯಾಯಾಲಯ ಮರು ಪ್ರಶ್ನಿಸಿದಾಗ, ಪಶು ಇಲಾಖೆ ಆಯುಕ್ತರು ಎಲ್ಲ ಬರಪೀಡಿತ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಸೂಚಿಸಿದರು. ಈ ಸೂಚನೆಯಂತೆ ಈಗ ಅಧಿಕಾರಿಗಳು ಮಳೆಗಾಲದಲ್ಲಿ ಮೇವು ಬ್ಯಾಂಕ್ ಆರಂಭಿಸಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳ ವಲಯದಿಂದಲೇ ಗೊತ್ತಾಗಿದೆ.
ಹಾವೇರಿ ಜಿಲ್ಲೆ ಬರಪೀಡಿತವಾಗಿದ್ದರೂ ಜಿಲ್ಲೆಯಲ್ಲಿ ಮೇವು ಕೊರತೆ ಕಂಡು ಬಂದಿಲ್ಲ. ಹೀಗಾಗಿ ಮೇವು ಬ್ಯಾಂಕ್ ತೆರೆದಿರಲಿಲ್ಲ. ಇಲಾಖೆ ಆಯುಕ್ತರು, ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಈಗ ಕಡ್ಡಾಯವಾಗಿ ಮೇವು ಬ್ಯಾಂಕ್ ತೆರೆಯಲು ಸೂಚಿಸಿದ್ದರಿಂದ ಈಗ ಮೇವು ಬ್ಯಾಂಕ್ ತೆರೆದಿದ್ದು ಅಗತ್ಯವಿದ್ದವರು ಇದರ ಪ್ರಯೋಜನ ಪಡೆಯಬಹುದು.•ಡಾ|ಪಾಲೇಕರ, ಪಶು ಇಲಾಖೆ ಅಧಿಕಾರಿ.
ಮೇವು ಬ್ಯಾಂಕ್‌ನಲ್ಲಿ ದಿನವೊಂದಕ್ಕೆ ಒಂದು ಜಾನುವಾರುವಿಗೆ 5 ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಖಾಲಿಯಾದ ನಂತರ ಮತ್ತೆ ಪಡೆಯಬಹುದು. ಒಂದು ಕೆ.ಜಿ ಮೇವಿಗೆ 2ರೂ. ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ. ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕು.•ಪಿ.ಎನ್. ಹುಬ್ಬಳ್ಳಿ, ಸಹಾಯಕ ನಿರ್ದೇಶಕರು, ಪಶು ಇಲಾಖೆ.
•ಎಚ್.ಕೆ. ನಟರಾಜ