Advertisement
ಯೋಗ ಚಿಕಿತ್ಸೆಯ ಉದ್ದೇಶವು (Concept) ರೋಗಿಯ ರಜಸ್ತಮೋಗುಣಗಳ ಉಲ್ಬಣತೆಯನ್ನು ಕಡಿಮೆಗೊಳಿಸಿ ಸತ್ವಾಧಿಕ್ಯತೆಯನ್ನು ಉಂಟು ಮಾಡಿ ಆರೋಗ್ಯವನ್ನು ತಂದು ಕೊಡುವುದು. ಇಂತಹ ಒಂದು ಔಷಧಿ ರಹಿತವಾದ ಶರೀರ ಪ್ರಕೃತಿಯನ್ನು ಅರಳಿಸಿದಂಥ ಚಿಕಿತ್ಸಾ ವಿಧಾನವು ಯೋಗದ ಒಂದು ಕೊಡುಗೆ. ರೋಗಿಯ ಪ್ರಕೃತಿ, ರೋಗದ ತೀವ್ರತೆಗೆ ಅನುಸಾರವಾಗಿ ಅದಕ್ಕೆ ಬೇಕಾಗುವಂಥ ನಿರ್ದಿಷ್ಟ ಯೋಗದ ಅಂಗಗಳನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಯೋಗ ಚಿಕಿತ್ಸೆಯು ಫಲಕಾರಿಯಾಗಬೇಕಾದರೆ ನಿರ್ದಿಷ್ಟ ಜೀವನ ವಿಧಾನ ಅತ್ಯಂತ ಅವಶ್ಯ. ಅವುಗಳೇ ಸಾತ್ವಿಕವಾದ ಯೌಗಿಕ ಆಹಾರ ಕ್ರಮ ಮತ್ತು ಯಮನಿಯಮಗಳ ಪಾಲನೆ. ಅಂದರೆ ಆಹಾರ, ವಿಹಾರ ಹಾಗೂ ತನ್ನ ಕೆಲಸಗಳಲ್ಲಿ ಸಮತೋಲನವಿರುವ, ಸರಿಯಾದ ಸಮಯದಲ್ಲಿ ನಿದ್ರೆ ಹಾಗೂ ಎಚ್ಚರವಿರುವ ರೋಗಿಯಲ್ಲಿ ಯೋಗ ಚಿಕಿತ್ಸೆಯು ರೋಗಗಳನ್ನು ನಿವಾರಿಸುತ್ತದೆ. ಆದ್ದರಿಂದ ಯೌಗಿಕ ಜೀವನ ವಿಧಾನವೇ ಚಿಕಿತ್ಸೆಯ ಮೊದಲ ಹಂತ. ಋಣಾತ್ಮಕ ಯೋಚನೆ, ಜೀವನ ಶೈಲಿಯನ್ನು ಧನಾತ್ಮಕವಾಗಿಸಿ ವ್ಯಕ್ತಿತ್ವ ವಿಕಸನಗೊಳಿಸುವ ಪ್ರಕ್ರಿಯೆ. ಶರೀರ ಶೋಧನ ಕ್ರಿಯೆಗಳು:
ಪಠಯೋಗ ಪರಂಪರೆಯ ಷಟ್‌ಕ್ರಿಯೆಗಳಿಂದ ರೋಗಿಯ ಶಾರೀರಿಕ ದೋಷ ವೈಷಮ್ಯಗಳನ್ನು ಮತ್ತು ಅಗ್ನಿಯನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಮಲ ಶೋಧನ ಮತ್ತು ಚಯಾಪಚಯ ಕ್ರಿಯೆಗಳನ್ನು ಉತ್ತಮಗೊಳಿಸುತ್ತದೆ.
Related Articles
ರೋಗಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಥಿರವಾಗಿಡುವಂತಹ ಕ್ರಮಬದ್ಧವಾದ ಶರೀರದ ಸ್ಥಿತಿಗಳ ಅಭ್ಯಾಸವೇ ಆಸನಗಳು. ಶರೀರ ಸುದೃಢ ವಾಗಿ ಅತಿತೂಕ, ಬೊಜ್ಜು ನಿವಾರಣೆಯಾಗುತ್ತದೆ. ಅಂಗಾಂಗಗಳ ಕ್ಷಮತೆ, ಜೀರ್ಣಕ್ರಿಯೆ ಉತ್ತಮ ಗೊಳ್ಳುತ್ತದೆ. ರಸಗ್ರಂಥಿಗಳನ್ನು ಪ್ರಚೋದಿಸುತ್ತದೆ.
Advertisement
ಪ್ರಾಣಾಯಾಮಗಳುಎಲ್ಲಾ ದೈಹಿಕ, ಮಾನಸಿಕ ಕ್ರಿಯೆಗಳಿಗೆ ಬೇಕಾಗುವ ಪ್ರಾಣಶಕ್ತಿಯ ಹರಿವನ್ನು ವೃದ್ಧಿಸಿ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಕ್ರಮಬದ್ಧವಾದ ಉಸಿರಾಟ ಕ್ರಮಗಳ ಅಭ್ಯಾಸವೇ ಪ್ರಾಣಾಯಾಮ. ರೋಗಿಯಲ್ಲಿ ಮಾನಸಿಕ ಸಮತೋಲನವನ್ನು ತಂದುಕೊಟ್ಟು, ಮಾನಸಿಕ ಒತ್ತಡದಿಂದ ಉಂಟಾಗುವ ಜೀವರಸಗಳ ಏರುಪೇರುಗಳನ್ನು ಸರಿಗೊಳಿಸುತ್ತದೆ. ರೋಗ ನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ. ಧ್ಯಾನದ ಕ್ರಮಗಳು
ಮನಸ್ಸಿನ ಏಕಾಗ್ರತೆಯ ಸ್ಥಿತಿಯನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವುದಕ್ಕೆ ಧ್ಯಾನ ಎನ್ನುತ್ತಾರೆ. ಭಾವಾತಿರೇಕಗಳನ್ನು ಹತೋಟಿಗೆ ತಂದು, ಮನಸ್ಸಿನ ಚಾಂಚಲ್ಯ ಹಾಗೂ ಅಜ್ಞಾನವನ್ನು ದೂರ ಮಾಡಿ ನೆಮ್ಮದಿಯನ್ನು ತಂದುಕೊಡುತ್ತದೆ. ಮನಸ್ಸು ಎಚ್ಚರವಾಗಿದ್ದು ಶರೀರವು ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ರೋಗಿಯ ನರಮಂಡಲದ ಮೇಲೆ ಪರಿಣಾಮವಾಗಿ ನರಸಂವಹನ ಕೆಲಸಗಳು ಸಮತೋನವಾಗಿರುತ್ತದೆ. ಈ ರೀತಿಯಾಗಿ ಯೋಗದ ತತ್ವಗಳನ್ನು ಚಿಕಿತ್ಸೆಯಲ್ಲಿ ರೋಗಿಗೆ ರೋಗದ ತೀವ್ರತೆಗೆ ಮುಕ್ತವಾಗಿ ಅಳವಡಿಸಿ ಅಭ್ಯಾಸ ಮಾಡಿಸಿದಾಗ ಯೋಗ ಚಿಕಿತ್ಸೆಯಾಗಿ ರೋಗ ಗುಣಪಡಿಸುವಲ್ಲಿ ಪರಿಣಾಮಕಾರಿಯಾಗುತ್ತದೆ. ಡಾ| ಅನ್ನಪೂರ್ಣ ಕೆ. ಆಚಾರ್ಯ,
ವಿಭಾಗ ಮುಖ್ಯಸ್ಥರು, ಯೋಗ ಚಿಕಿತ್ಸಾ ವಿಭಾಗ, ಕೆಎಂಸಿ