Advertisement
ನವದೆಹಲಿ: ಭಾರತವನ್ನು ವಿಶ್ವದ ಪ್ರವಾಸೋದ್ಯಮ ಭೂಪಟದಲ್ಲಿ ಗುರುತಿಸುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ನವದೆಹಲಿಯ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯ ದಿನ ಪ್ರಯುಕ್ತ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದರು. ಪ್ರತಿ ವರ್ಷ 20 ಮಿಲಿಯಕ್ಕಿಂತಲೂ ಹೆಚ್ಚಿನ ದೇಶವಾಸಿಗಳು ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಅದರ ಬದಲಾಗಿ ದೇಶದ ಪ್ರವಾಸೋದ್ಯಮಕ್ಕೆ ಬಲ ತರಲು 2022ರ ಒಳಗಾಗಿ ಕನಿಷ್ಠ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ಪೀಳಿಗೆಗೆ ದೇಶದ ಸ್ಥಳಗಳ ಪರಿಚಯ, ಮಹತ್ವದ ಅರಿವು ಉಂಟಾಗುತ್ತದೆ ಎಂದರು. 2022ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ತಿಗೊಳ್ಳುತ್ತದೆ ಎಂದರು. ಹೋಗುವ ಸ್ಥಳದಲ್ಲಿ ಉತ್ತಮ ಹೊಟೇಲ್ ಮತ್ತು ಇತರ ವ್ಯವಸ್ಥೆಗಳು ಇಲ್ಲದಿದ್ದರೂ, ಅಲ್ಲಿಗೆ ತೆರಳಬೇಕು. ಇದರಿಂದಾಗಿ ಆ ಸ್ಥಳದಲ್ಲಿ ಹೊಸ ಚಟುವಟಿಕೆಗಳು ನಿರ್ಮಾಣವಾಗುತ್ತವೆ ಎಂದಿದ್ದಾರೆ ಪ್ರಧಾನಿ.
Related Articles
Advertisement
ಭ್ರಷ್ಟಾಚಾರ ನಿರ್ಮೂಲನೆಗೆ ಪಣ: ‘ಭಾರತೀಯ ಜನರ ನಿತ್ಯ ಜೀವನದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳು ಎಂಬುವು ಗೆದ್ದಲು ಹುಳುಗಳಂತೆ ಹಾಸುಹೊಕ್ಕಿವೆ. ಭ್ರಷ್ಟಾಚಾರವಂತೂ ಒಂದು ಕಾಯಿಲೆಯಾಗಿ ಮಾರ್ಪಟ್ಟಿದೆ” ಎಂದು ಮೋದಿ ಅಭಿಪ್ರಾಯಪಟ್ಟರು.
ಶುಭಾಶಯ: ಆ. 19ರಂದು 100ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ಅಪ್ಗಾನಿಸ್ತಾನಕ್ಕೆ ಪ್ರಧಾನಿ ಶುಭಾಶಯ ಕೋರಿದರು. ”ಅಪ್ಗಾನಿಸ್ತಾನವು ಭಾರತದ ಅತ್ಯುತ್ತಮ ನೆರೆಯ ದೇಶಗಳಲ್ಲೊಂದಾಗಿದೆ. ಅವರ 100ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ನನ್ನ ಹಾರ್ದಿಕ ಶುಭಾಶಯಗಳು” ಎಂದರು. ಭಯೋತ್ಪಾದನೆಯ ಯಾವುದೇ ಕೃತ್ಯಗಳನ್ನು ಭಾರತ ಸಹಿಸು ವುದಿಲ್ಲ ಎಂದು ಪಾಕ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಯಾವ ಪದ ಎಷ್ಟು ಬಾರಿ ಬಳಕೆ?72 ನಿಮಿಷ- 1947ರಲ್ಲಿ ನೆಹರೂ ಮಾಡಿದ್ದ ಭಾಷಣ 2015ರ ವರೆಗೆ ದಾಖಲೆಯಾಗಿ ಉಳಿದಿತ್ತು.
ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಪಾಕಿಸ್ತಾನ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿರುವ ಭಾರತೀಯ ಮೂಲದವರು ಗುರುವಾರ 73ನೇ ಸ್ವಾತಂತ್ರ್ಯ ದಿನವನ್ನು ಹರ್ಷೋಲ್ಲಾಸದಿಂದ ಆಚರಿಸಿದ್ದಾರೆ. ಎಲ್ಲೆಡೆ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದೆ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಭಾರಿ ವಿಕ್ರಂ ಮಿಸ್ರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿರುವ ಹೈಕಮಿಷನ್, ಮೆಲ್ಬೊರ್ನ್, ಸಿಡ್ನಿ, ಪರ್ತ್‌ಗಳಲ್ಲಿರುವ ದೂತಾವಾಸ ಕಚೇರಿಗಳಲ್ಲಿ ಭಾರತೀಯ ಮೂಲದ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕೆಂಪುಕೋಟೆ ಸ್ವಚ್ಛ ಮಾಡಿದ ಮಕ್ಕಳು
ಪ್ರಧಾನಿ ಭಾಷಣ ಕೇಳಲು ಕೆಂಪುಕೋಟೆಗೆ ನೆರೆದಿದ್ದ ಮಕ್ಕಳು, ಕಾರ್ಯಕ್ರಮ ಮುಗಿದ ಬಳಿಕ ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸ, ಬಾಳೆ ಹಣ್ಣಿನ ಸಿಪ್ಪೆಯನ್ನು ಆರಿಸಿ, ಮೈದಾನವನ್ನು ಸ್ವಚ್ಛಗೊಳಿಸಿದ್ದು ಈ ಬಾರಿಯ ಸ್ವಾತಂತ್ರೋತ್ಸ ವದ ಪ್ರಮುಖವಾಗಿ ಗಮನ ಸೆಳೆದ ಸಂಗತಿಗಳಲ್ಲಿ ಒಂದು. ಈ ವಿದ್ಯಾರ್ಥಿಗಳೆಲ್ಲರೂ ರಾಜ್ಕೀಯ ಸರ್ವೋದಯ ವಿದ್ಯಾಲಯ ಶಾಲೆ ಮಕ್ಕಳು. ಅವರೆಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ಸ್ವಇಚ್ಛೆಯಿಂದ ಪಾಲ್ಗೊಂಡಿ ದ್ದಾರೆ ಎಂದು ಶಾಲೆಯ ಶಿಕ್ಷಕ ರಾಜ್ ಕುಮಾರ್ ಮೌರ್ಯ ತಿಳಿಸಿದ್ದಾರೆ.
ಸ್ಥಾನಮಾನಕ್ಕೆ ಧಕ್ಕೆ ಇಲ್ಲ: ಮಲಿಕ್
ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರೀಡಾಂಗಣದಲ್ಲಿ ಮಾತನಾಡಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಂವಿಧಾನದ 370ನೇ ವಿಧಿ ರದ್ದುಗೊಂಡ ಬಳಿಕ ರಾಜ್ಯದಲ್ಲಿರುವ ಮೂಲ ಜನರಿಗೆ ಇರುವ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕೇಂದ್ರ ಕೈಗೊಂಡಿರುವ ಈ ಐತಿಹಾಸಿಕ ಕ್ರಮದಿಂದ ಕಣಿವೆ ರಾಜ್ಯಕ್ಕೆ ಅನುಕೂಲವೇ ಆಗಲಿದೆ. ಈ ನಿರ್ಧಾರದಿಂದಾಗಿ ಅಭಿವೃದ್ಧಿಯ ಹೊಸ ಬಾಗಿಲುಗಳು ತೆರೆಯಲಿವೆ. ಹಿಂದಿನ ಚುನಾವಣೆಗಳಲ್ಲಿ ಉದ್ಯೋಗ, ಬಟ್ಟೆ, ವಸತಿ ಪ್ರಸ್ತಾಪವೇ ಆಗಿರಲಿಲ್ಲ ಎಂದು ಹೇಳಿದರು.
ಪಾಕ್‌ನಿಂದ ಸ್ವಾತಂತ್ರ್ಯ ಕೊಡಿಸಿ
ಪಾಕಿಸ್ತಾನದ ಬಲೂಚಿಸ್ತಾನ ಭಾಗದ ಜನರು ಗುರುವಾರ ಸೌಹಾರ್ದ ದಿನವನ್ನು ಆಚರಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಕೊಡಿಸಿ ಎಂದೂ ಭಾರತವನ್ನು ಕೇಳಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಬಲೂಚಿಸ್ತಾನದ ವಿಚಾರವನ್ನು ಭಾರತ ಪ್ರಸ್ತಾಪಿಸಬೇಕು ಎಂದು ಬಲೂಚಿಸ್ತಾನದ ಹೋರಾಟಗಾರರು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ನನ್ನ ಎಲ್ಲ ಭಾರತೀಯ ಸೋದರ ಸೋದರಿಯರಿಗೂ ಶುಭಾಶಯ ಕೋರುತ್ತೇನೆ. ಕಳೆದ 70 ವರ್ಷಗಳಲ್ಲಿ ಭಾರತದ ಯಶಸ್ಸಿನಿಂದಾಗಿ ಭಾರತೀಯರು ಹೆಮ್ಮೆ ಪಡುತ್ತಾರೆ. ಭಾರತೀಯರ ಸೌಹಾರ್ದತೆ ಮತ್ತು ಸಹಾಯಕ್ಕೆ ಬಲೂಚಿಯರು ಧನ್ಯವಾದ ತಿಳಿಸುತ್ತಿದ್ದೇವೆ. ಭಾರತವು ಸ್ವತಂತ್ರ ಬಲೂಚಿಸ್ತಾನದ ಧ್ವನಿಯನ್ನು ಎಲ್ಲ ವೇದಿಕೆಯಲ್ಲೂ ಪ್ರಸ್ತಾಪಿಸಬೇಕು ಎಂದು ಬಲೂಚಿ ಹೋರಾಟಗಾರ ಅಟ್ಟಾ ಬಲೂಚ್ ಹೇಳಿದ್ದಾರೆ.
ಸೋನಿಯಾರಿಂದ ಧ್ವಜಾರೋಹಣ
ಕಾಂಗ್ರೆಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಸೋನಿಯಾ ಗಾಂಧಿ ಪಕ್ಷದ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತಾಂಧತೆ ಮತ್ತು ಧರ್ಮಾಂಧತೆಗೆ ಭಾರತದಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ತಾರತಮ್ಯ, ಅಸಹಿಷ್ಣುತೆ ವಿರುದ್ಧ ಯಾವತ್ತೂ ಸಿಡಿದೇಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ದೇಶದಲ್ಲಿ ಸಹಜೀವನ ಮತ್ತು ಎಲ್ಲರನ್ನೂ ಸೇರಿಸಿಕೊಂಡ ಅಭಿವೃದ್ಧಿ ಅವಕಾಶಗಳು ಇರುವಂತಾಗಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಪಾಕ್‌ನಲ್ಲಿ ಕರಾಳ ದಿನ
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದು ದನ್ನು ಪ್ರತಿಭಟಿಸುತ್ತಿರುವ ಪಾಕಿಸ್ತಾನದಲ್ಲಿ ಆ.15ನ್ನು ಕರಾಳ ದಿನವಾಗಿ ಆಚರಿಸಲಾಗಿದೆ. ಆ ದೇಶದ ಪ್ರಮುಖ ನಗರಗಳಲ್ಲಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಧ್ವಜ ಕಟ್ಟಲಾಗಿತ್ತು. ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಪಿಎಂ ಇಮ್ರಾನ್ ಖಾನ್, ವಿದೇಶಾಂಗ ಸಚಿವಾಲಯ ಸೇರಿದಂತೆ ಪ್ರಮುಖ ಕಚೇರಿಗಳು ಮತ್ತು ನಾಯಕರ ಟ್ವಿಟರ್ ಖಾತೆಗಳಲ್ಲಿ ಕಪ್ಪು ಧ್ವಜ ಹಾಕಿಕೊಂಡಿದ್ದರು. ಬುಧವಾರ ಸ್ವಾತಂತ್ರ್ಯ ದಿನ ಜತೆಗೆ ‘ಕಾಶ್ಮೀರಿ ನಾಗರಿಕರಿಗೆ ಬೆಂಬಲ ಘೋಷಿಸುವ ದಿನ’ವನ್ನಾಗಿಯೂ ಆಚರಿಸಲಾಗಿತ್ತು.