Advertisement
ನನಗೆ ರೂಮ್ ನಂಬರ್ ಲೆವೆನ್ ಅಲಾಟ್ ಆಗಿತ್ತು. ಮತ್ತೆ ಆ ರೂಮಿಗೆ ನಾನೇ ಮೊದಲನೆಯವಳಾಗಿ ಹೋದದ್ದು ಸಹ ವಿಚಿತ್ರವೆ. ಎಂದೂ ಮನೆ ಅಪ್ಪ-ಅಮ್ಮನನ್ನು ಬಿಟ್ಟಿರದ ನನಗೆ ಈ ಮೊದಲ ರಾತ್ರಿ ಹೇಗಪ್ಪಾ$ಕಳೆಯುವುದು ಎಂಬ ಚಿಂತೆಯಾಗಿಬಿಟ್ಟಿತ್ತು. ಅಂಜಂಜುತ್ತಾ ಹೋಗಿ ಊಟ ಮಾಡಿ ಬಂದು, ಇನ್ನೇನು ಮಲಗಬೇಕು ಅದೂ ಒಬ್ಬಳೇ ಏನು ಮಾಡುವುದು. ನನಗೋ ರಾತ್ರಿ ಭಯ. ಎಂದೂ ಒಬ್ಬಳೇ ಮಲಗಿದವಳಲ್ಲ. ಹಾವು, ದೆವ್ವಗಳು ಕನಸಿನಲ್ಲಿ ಬಂದರೂ ಹೆದರಿ ಕಂಗಾಲಾಗುತ್ತಿದ್ದವಳು ನಾನು.. ಅಂದು ಸರಿ ರಾತ್ರಿಯವರೆಗೂ ಕಣ್ಣುಗಳನ್ನು ಬಲ್ಪುಗಳನ್ನಾಗಿಸಿಕೊಂಡು ಸಣ್ಣ ಸರಪರ ಸದ್ದಿಗೂ ಬೆಚ್ಚುತ್ತ ಕೂತುಬಿಟ್ಟಿದ್ದೆ. ಅದ್ಯಾವಾಗ ನಿದ್ದೆ ಅಪ್ಪಿತ್ತೋ. ಮರುದಿನ ಎದ್ದಾಗ ಬೆಳಗಿನ ಒಂಬತ್ತು. ಅಂದು ಭಾನುವಾರವಾಗಿತ್ತಾದ್ದರಿಂದ ತೊಂದರೆ ಇರಲಿಲ್ಲ. ಕಿಚನ್‌ಗೆ ಹೋಗಿ ಪೂರಿ ತಿಂದು ಬಂದೆ. ಅವತ್ತೆಲ್ಲ ಎಂಥದೋ ಖಾಲಿತನ ಕವಿದು ಗುಪ್ಪೋ ಅನಿಸತೊಡಗಿತ್ತು.
Related Articles
Advertisement
ಒಮ್ಮೆ ನನ್ನ ರೂಮ್‌ಮೇಟ್ಸ್ ಹಬ್ಬಕ್ಕೆಂದು ಊರಿಗೆ ಹೋಗಿ ಬಿಟ್ಟರು. ಅವರಿಬ್ಬರೂ ಕಸಿ…. ನನಗೋ ಪೀಕಲಾಟಕ್ಕಿಟ್ಟುಕೊಂಡಿತು. ಅವತ್ತು ರಾತ್ರಿ ಕಳೆಯಲು ಪಕ್ಕದ ರೂಮಿನ ಗೆಳತಿಯರನ್ನೆಲ್ಲ ಅಂಗಲಾಚಿದ್ದಾಯಿತು. ಯಾರಿಗೂ ಕರುಣೆ ಬರಲಿಲ್ಲ. ಇನ್ನು ಆದದ್ದಾಗಲಿ ಎಂದು ಒಬ್ಬಳೇ ಮಲಗಲು ಸಿದ್ಧಳಾಗುತ್ತಿದ್ದೆ. ಸುಮಾರು ರಾತ್ರಿಯ ಎಂಟೂವರೆ ಇದ್ದಿರಬೇಕು. “ಟಪ ಟಪ ಟಪ ಟಪ’ ಎಂದು ಒಂದೇ ಸಮನೆ ಏಳೆಂಟು ಕಲ್ಲುಗಳು ಬಾಗಿಲಿಗೆ ಬಡಿದವು. ನಾನಂತೂ ಹೆದರಿಹೋದೆ. “ಯಾರದು?’ ಎಂದು ಕೂಗಿದೆ ಯಾರೂ ಮಾತಾಡಲಿಲ್ಲ. ಸಂಪೂರ್ಣ ನಿಶ್ಯಬ್ದ. ಯಾರದೊಂದು ಧ್ವನಿಯಾಗಲಿ ಹೆಜ್ಜೆ ಸಪ್ಪಳವಾಗಲಿ ಎಂತದ್ದೂ ಇಲ್ಲ. ಅದರಲ್ಲೂ ಗನ್‌ನಿಂದ ಹೊಡೆದ ಹಾಗೆ ಒಂದರ ಹಿಂದೊಂದು ಕಲ್ಲನ್ನು ಅಷ್ಟು ಕರಾರುವಾಕ್ಕಾಗಿ ಹೊಡೆಯಲು ಯಾರಿಂದಲಾದರೂ ಹೇಗೆ ಸಾಧ್ಯ? ಅದರಲ್ಲೂ ನಾವಿದ್ದದ್ದು ಆಯತಾಕಾರದಲ್ಲಿದ್ದ ನಾಲ್ಕಂತಸ್ತಿನ ದೊಡ್ಡ ಕಟ್ಟಡ. ಮೇಲಾಗಿ, ಹೊರಗೆ ಗೇಟ್ ಬಳಿ ಇಬ್ಬರು ವಾಚ್‌ಮನ್‌ಗಳಿರುತ್ತಾರೆ. ಹೊರಗಿನಿಂದ ಯಾರಾದರೂ ಬಂದು ಹೋಗುವುದು ಸುಲಭವಿರಲಿಲ್ಲ. ಕ್ಷಣಕಾಲ ಏನು ಮಾಡುವುದೆಂದೇ ತೋಚಲಿಲ್ಲ. ಕೊನೆಗೆ ಸಾವರಿಸಿಕೊಂಡು ಬಂದು ಬಾಗಿಲು ತೆರೆದೆ. ಬಾಗಿಲ ಮುಂದೆ ಕಲ್ಲುಗಳು ಬಿದ್ದಿದ್ದವು. ಸುತ್ತಲೂ ಯಾವೊಂದು ನರಪಿಳ್ಳೆಯೂ ಕಾಣಲಿಲ್ಲ. ಪಕ್ಕದ ರೂಮಿನ ಹಂಸಾಳನ್ನು ಕರೆದು ತೋರಿಸಿದೆ. ಅವಳಂತೂ ಇಂಥಾದ್ದನ್ನು ಇದುವರೆಗೂ ಈ ಹಾಸ್ಟೆಲ್‌ನಲ್ಲಿ ನೋಡಿಯೇ ಇಲ್ಲ.
“ಇಲ್ಲಿ ಯಾರೂ ಹೀಗೆಲ್ಲ ಮಾಡುವುದಿಲ್ಲ’ ಎಂದಳು. ನನಗೋ ದೆವ್ವ ಭೂತದ ನೆನಪಾಗಿ ಜೀವಬಾಯಿಗೆ ಬಂದುಬಿಟ್ಟಿತ್ತು. ಆದರೆ, ಆವತ್ತು ಏನಾಯಿತು, ಯಾರು ಮಾಡಿದರೆನ್ನುವ ವಿಚಾರ ನಾನಿದ್ದಷ್ಟು ದಿನದಲ್ಲಿ ಕೊನೆಗೂ ತಿಳಿಯಲಿಲ್ಲ. ಆಮೇಲೆ ಮತ್ತೆಂದೂ ಅಂತಹ ಘಟನೆಗಳು ನಡೆಯಲಿಲ್ಲವಾಗಿ ಆ ಘಟನೆ ಮರೆಯಾಗತೊಡಗಿತು.
ಹಾಸ್ಟೆಲ್ನ ರೂಮ್ ನಂಬರ್ ಒನ್‌ನನ್ನು ಬಳಸುತ್ತಿರಲಿಲ್ಲ. ಅದನ್ನು ಸ್ಟೋರ್ ರೂಮ್ ಮಾಡಿಕೊಳ್ಳಲಾಗಿತ್ತು. ಅದರ ಹಿಂದೆ ಏನೋ ಒಂದು ಕಾರಣವಿದೆಯಂಥ ನನಗನಿಸಿರಲಿಲ್ಲ. ಒಂದಿನ ಗೆಳತಿಯೊಬ್ಬಳು ಒಂದು ಭಯಾನಕ ಕತೆ ಹೇಳಿದಳು. ಕೆಲವು ವರ್ಷಗಳ ಹಿಂದೆ ಆ ರೂಮಿನಲ್ಲಿದ್ದ ಒಂದು ಹುಡುಗಿ ಪರೀಕ್ಷೆ ಸರಿಯಾಗಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಈಗಲೂ ಸರಿರಾತ್ರಿಯಲ್ಲಿ ಆ ರೂಮಿನಿಂದ ಹುಡುಗಿಯೊಬ್ಬಳು ನರಳುತ್ತಿರುವ ಶಬ್ದ ಕೇಳಿಬರುತ್ತದೆ ಎಂದು ಹೇಳಿಬಿಟ್ಟಳು. ಥೂ ಯಾಕಾದರೂ ಹೇಳಿದಳ್ಳೋ. ಅಂದಿನಿಂದ ನನ್ನ ಸ್ಥಿತಿ ಹೇಗಾಗಿಬಿಟ್ಟಿತೆಂದರೆ ಹಗಲಿನಲ್ಲೂ ಶೌಚಕ್ಕೆ ಒಬ್ಬಳೇ ಹೋಗಲಾರದಷ್ಟು ಭಯವಾಗತೊಡಗಿತು. ಯಾರಾದರೊಬ್ಬರು ಜೊತೆಯಲ್ಲಿಲ್ಲವೆಂದರೆ ಅವತ್ತು ನನ್ನ ಸ್ನಾನವು ಇಲ್ಲ, ಶೌಚವೂ ಇಲ್ಲ. ಹಾಗಾಗಿಬಿಟ್ಟಿತು. ಬರಬರುತ್ತಾ ಅಲ್ಲೇನಿದೆ. ಎಂತದ್ದೂ ಇಲ್ಲ. ಎಲ್ಲ ಸುಳ್ಳು ಎನ್ನಿಸತೊಡಗಿ ಭಯ ಕೊಂಚ ಕಡಿಮೆಯಾಗುತ್ತ ಬಂದಿತು.
ಆದರೆ, ಅದು ಸಂಪೂರ್ಣ ಮರೆಯಾಗುವ ಮುನ್ನವೇ ಅದೊಂದು ಘಟನೆ ನಡೆದುಬಿಟ್ಟಿತ್ತು. ನಮ್ಮ ಹಾಸ್ಟೆಲ್ಲಿನ ಪಕ್ಕದ ಬ್ಲಾಕ್‌ನಲ್ಲಿ ಮೆಡಿಕಲ… ಮಾಡುತ್ತಿದ್ದ ಹುಡುಗಿಯೊಬ್ಬಳು ಇದ್ದಕ್ಕಿದ್ದ ಹಾಗೆ ಬೆಳ್ಳಂಬೆಳಗ್ಗೆ ಉಟ್ಟ ಬಟ್ಟೆಯಲ್ಲೇ ಸೀದಾ ಊರಿಗೆ ಹೋದವಳೇ ಮನೆಗೆ ಹೋಗಿ ಮಲಗುವ ಕೋಣೆ ಸೇರಿ ಬಾಗಿಲು ಮುಚ್ಚಿಕೊಂಡುಬಿಟ್ಟಿದ್ದಳಂತೆ. ಆಮೇಲೆ ಮನೆಯವರು ಹರಸಾಹಸಪಟ್ಟು ಬಾಗಿಲು ತೆರೆಯುವಷ್ಟರಲ್ಲಿ ಕುಣಿಕೆಯಲ್ಲಿ ಅವಳ ದೇಹ ತೂಗುತ್ತಿತ್ತಂತೆ. ಮತ್ತೆ ಹೇಗೋ ಕೆಳಗೆ ಇಳಿಸಿದರಂತೆ. ಅವತ್ತಿಂದ ರೂಮ್ ನಂಬರ್ ಒನ್‌ನ ಕತೆ ಮೊದಲೇ ಇದ್ದಿತ್ತಾಗಿ ಭಯ ಇಮ್ಮಡಿಯಾಗಿಬಿಟ್ಟಿತು. ಹಾಸ್ಟೆಲ್‌ನಲ್ಲಿ ಒಂದು ಸಣ್ಣ ಅಸಹಜ ಶಬ್ದವಾದರೂ ಬೆಚ್ಚುವ ಸರದಿ ನನ್ನದು.
ಇಂಥ ಭಯಗಳಿದ್ದರೂ ನಾವು ಹುಡುಗಿಯರಿಗೆ ಎಂತೆಂಥ ಕ್ರೇಜ…ಗಳಿರುತ್ತವೆ ಎಂದರೆ, ಒಮ್ಮೆ ಅದು ಪರೀಕ್ಷೆಗಳೆಲ್ಲ ಮುಗಿದಿದ್ದ ಸಮಯ. ಸರಿ, ಡಿವಿಡಿ ತಂದು ಒಂದಷ್ಟು ಮೂವಿಗಳನ್ನು ನೋಡಿ ಎಲ್ಲರೂ ಊರಿಗೆ ಹೊರಡುವುದು ಎಂದು ಮಾತಾಡಿಕೊಂಡೆವು. ಆಗ ಬಿಪಾಶಾ ಬಸು ನಟಿಸಿದ್ದ ರಾಜ್ ಚಲನಚಿತ್ರ ಹಿಟ್ ಆಗಿತ್ತು. ಎಲ್ಲರಿಗೂ ಎಂತದ್ದೋ ಕೆಟ್ಟ ಕುತೂಹಲ, ಆ ದೆವ್ವದ ಮೂವೀ ನೋಡಲಿಕ್ಕೆ ಗೆಳತಿಯರು ಕೊನೆಗೂ ತಂದೇ ಬಿಟ್ಟರು. ಅಂದು ಟಿವಿ ಹಾಲ್ ಸಿನೆಮಾ ಟಾಕೀಸಿನ ಹಾಗೆ ಕತ್ತಲಾಗಿತ್ತು ಮತ್ತು ಐವತ್ತು-ಅರವತ್ತು ಜನರಿಂದ ತುಂಬಿ ತುಳುಕುತ್ತಿತ್ತು. ಸರಿ, ಮೂವೀ ಯೇ ಶಹರ ಹೇ ಅಮನಕಾ ಅಂತ ಶುರುವಾಯಿತು. ಒಂದಷ್ಟು ಹಸಿಬಿಸಿ ದೃಶ್ಯಗಳಾದ ಮೇಲೆ ಚಿತ್ರ ಭಯಾನಕತೆಯ ಕಡೆ ಹೊರಳಿತ್ತು. ಇಡೀ ಟಿವಿ ಹಾಲ… ನಿಶ್ಯಬ್ದವಾಗಿತ್ತು- ಒಂದು ಸೂಜಿ ಬಿದ್ದರೂ ಕೇಳುವಷ್ಟು. ಒಂದಷ್ಟು ನನ್ನಂಥ ಪುಕ್ಕಲರು ಪಕ್ಕದಲ್ಲಿದ್ದ ಗೆಳತಿಯರನ್ನು ತಬ್ಬಿ ಹಿಡಿದಿದ್ದೆವು. ಆಗ ಇದ್ದಕ್ಕಿದ್ದಂತೆ ಗೆಳತಿಯೊಬ್ಬಳು ಕಿಟಾರನೆ ಕಿರುಚಿಬಿಟ್ಟಳು. ಅವಳು ಅದೆಷ್ಟು ಜೋರಾಗಿ ಚೀರಿದ್ದಳೆಂದರೆ, ಗೇಟ್ ಬಳಿ ಇದ್ದ ವಾಚ್‌ಮನ್ ಕೂಡಾ ಒಳಗೋಡಿ ಬಂದುಬಿಟ್ಟಿದ್ದ. ಅಂದು ಅಲ್ಲಿ ನಡೆದದ್ದು ಇಷ್ಟೇ, ಮೂವೀ ನೋಡುತ್ತಿದ್ದ ಗೆಳತಿಯೊಬ್ಬಳಿಗೆ ಫೇಸ್‌ಪ್ಯಾಕ್ ಹಾಕಿಕೊಳ್ಳುವ ಮನಸ್ಸಾಗಿದೆ. ನೇರ ರೂಮಿಗೆ ಹೋದವಳೇ ಮುಖಕ್ಕೆ ಮುಲ್ತಾನಿಮಟ್ಟಿ ಹಚ್ಚಿಕೊಂಡು ಬಂದು ಸುಮ್ಮನೆ ಮೂವೀ ನೋಡುತ್ತ ಕುಳಿತುಬಿಟ್ಟಿದ್ದಾಳೆ. ಆದರೆ, ಇದನ್ನು ಗಮನಿಸದೆ ಅವಳ ಪಕ್ಕ ಕುಳಿತಿದ್ದ ಗೆಳತಿ, ನಡುಗುತ್ತ ಸಿನೆಮಾ ನೋಡುತ್ತಿದ್ದವಳು, ಅಚಾನಕ್ ಒಮ್ಮೆ ಇವಳ ಕಡೆ ತಿರುಗಿದ್ದಾಳೆ ಅಷ್ಟೇ. ಇವಳ ಮುಲ್ತಾನಿ ಮುಖ ಕಂಡವಳೇ ದೆವ್ವವೆಂದು ಭಾವಿಸಿ ಕಿರುಚಿಬಿಟ್ಟಿದ್ದಳು. ಒಂದೆರಡು ಕ್ಷಣ ಎಲ್ಲರೂ ಭಯಭೀತರಾಗಿಬಿಟ್ಟಿದ್ದೆವು ಕೂಡ. ನಂತರ ಮುಲ್ತಾನಿ ಹಚ್ಚಿದ್ದವಳ ನಗು ಕಂಡು ಪರಿಸ್ಥಿತಿ ತಿಳಿಯಾಯಿತು. ನಾವೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಸಿನೆಮಾವನ್ನು ಪೂರಾ ನೋಡಿ ಬಂದು ಮಲಗಿದೆವು. ಆವತ್ತು ರಾತ್ರಿಯೆಲ್ಲ ಕನಸಿನ ತುಂಬ ದೆವ್ವಗಳದ್ದೇ ಹಾವಳಿ.
ನನ್ನದು ಮತ್ತೂಂದು ಸಮಸ್ಯೆಯಿದೆ. ಅದೆಂದರೆ ನಿದ್ರೆಯಲ್ಲಿ ನಗುವುದು. ಅದೆಷ್ಟು ಬಾರಿ ನಿದ್ದೆಯಲ್ಲಿ ಗಹಗಹಿಸಿ ನಗುತ್ತಿದ್ದೆನೋ. ನನ್ನ ರೂಮ್‌ಮೇಟ್ಸ್‌ಗಳಂತೂ “”ಒಳ್ಳೆ ಮೋಹಿನಿ ನಕ್ಕಂಗೆ ನಗ್ತಿàಯ ಮಾರಾಯ್ತಿ ಎಷ್ಟು ಭಯ ಆಗುತ್ತೆ ಗೊತ್ತಾ” ಎಂದು ಹೇಳುತ್ತಿದ್ದರು. ಒಮ್ಮೆಯಂತೂ ಮಧ್ಯರಾತ್ರಿ ನಿದ್ದೆಯಲ್ಲಿ ಅದೆಷ್ಟು ಜೋರಾಗಿ ನಕ್ಕುಬಿಟ್ಟಿದ್ದೆನೆಂದರೆ ಗೇಟ… ಮುಂದಿದ್ದ ವಾಚ್‌ಮನ್ ನಮ್ಮ ರೂಮಿನ ಬಳಿ ಬಂದು ಲಾಠಿಯಿಂದ ಶಬ್ದ ಮಾಡಿ “ಯಾರದು? ಯಾರದು?’ ಅಂತ ಕೂಗಿದಾಗಲೇ ಎಚ್ಚರವಾಗಿ ನಗು ನಿಲ್ಲಿಸಿದ್ದು. ಆವತ್ತು ಪುಣ್ಯಕ್ಕೆ ರೂಮ್‌ಮೇಟ್ಸ್ ಇರಲಿಲ್ಲ. ಇದು ಯಾಕೆ ಹೀಗೆ ಅಂತ ನನ್ನನ್ನು ನಾನೇ ಸಾಕಷ್ಟು ಸಾರಿ ಪ್ರಶ್ನಿಸಿಕೊಂಡದ್ದಿದೆ. ಕಾರಣ, ಗೊತ್ತಾಗಿಲ್ಲ. ಆದರೆ, ನಗುವಾಗ ಎಂತ ಮಜಾ ಇರುತ್ತದೆಂದರೆ ಚಿಂಟು ಟಿವಿಯಲ್ಲಿ ಬರುತ್ತವಲ್ಲ ಅಂತಹ ಫನ್ನಿ ವೀಡಿಯೋಗಳು ಕನಸಿನಲ್ಲಿ ಓಡುತ್ತಿರುತ್ತವೆ. ಅದರೊಳಗೆ ನಾನೂ ಒಂದು ಪಾತ್ರವಾಗಿರುತ್ತೇನೆ. ಆಹಾ.. ಎಷ್ಟು ಮಜಾ… ಈ ರೀತಿಯ ನಿದ್ರೆಯ ನಗು ಈಗಲೂ ನಿಂತಿಲ್ಲ. ಅದೆಷ್ಟು ಬಾರಿ ಗಂಡ, “”ಎಂತ ತೊಂದ್ರೆ ಕೊಡ್ತಿ ಮಾರಾಯ್ತಿ. ನಿದ್ದೆ ಎಲ್ಲ ಹಾಳು” ಅಂತ ಗೊಣಗಿಕೊಂಡಿದ್ದಾನೋ ಲೆಕ್ಕವೇ ಇಲ್ಲ.
ಇತ್ತೀಚೆಗೆ ಈ ನಗು ಒಂಚೂರು ಕಡಿಮೆಯಾಗಿದೆ. ಹೆದರುವ ನನ್ನ ಸ್ವಭಾವವೂ ಬದಲಾಗಿದೆ. ಹೆದರುತ್ತಿದ್ದ ಮತ್ತು ಹೆದರಿಸುತ್ತಿದ್ದ ಆ ದಿನಗಳು ಮಾತ್ರ ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ಹಚ್ಚಹಸಿರಾಗಿ ಉಳಿದು ಹೋಗಿವೆ.
ಆಶಾ ಜಗದೀಶ್