Advertisement

Jammu Kashmir ಚುನಾವಣೆ ಮೊದಲು ಅಧಿಕಾರಿಗಳ ವರ್ಗಾವಣೆ ಯಾಕೆ?: ಕಿಡಿಕಾರಿದ ಒಮರ್‌ ಅಬ್ದುಲ್ಲಾ

06:25 PM Aug 16, 2024 | Team Udayavani |

ಶ್ರೀನಗರ: ಬರೋಬ್ಬರಿ ಹತ್ತು ವರ್ಷಗಳ ಬಳಿಕ ಜಮ್ಮು ಕಾಶ್ಮೀರ (Jammu Kashmir) ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಶುಕ್ರವಾರ (ಆ.16) ರಾಷ್ಟ್ರೀಯ ಚುನಾವಣೆ ಆಯೋಗ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಘೋಷಣೆ ಮಾಡಿದೆ. ಮೂರು ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.

Advertisement

ಇದರ ಮಧ್ಯೆ ಜಮ್ಮು ಕಾಶ್ಮೀರದ ಆಡಳಿತ ಮತ್ತು ಪೊಲೀಸ್‌ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರದ ನೇತೃತ್ವದ ಆಡಳಿತ ಮತ್ತು ಕೇಂದ್ರಾಡಳಿತ ಪ್ರದೇಶದ ಪ್ರಾದೇಶಿಕ ರಾಜಕೀಯ ಪಕ್ಷಗಳು ಬದಲಾವಣೆಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ.

ಗುರುವಾರ ಜಮ್ಮು ಕಾಶ್ಮೀರಕ್ಕೆ ಹೊಸ ಪೊಲೀಸ್ ಮಹಾನಿರ್ದೇಶಕರ (DGP) ನೇಮಕವಾಗಿತ್ತು. ಇದರ ಬೆನ್ನಲ್ಲೇ ಇಂದು 30ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆ ಘೋಷಣೆ ಮಾಡುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ (Omar Abdullah) ಅವರು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವರ್ಗಾವಣೆ ಆದೇಶದ ಹಿಂದೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ “ಪಕ್ಷಪಾತದ ಉದ್ದೇಶ” ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಒಮರ್‌ ಅಬ್ದುಲ್ಲಾ, “ನಿನ್ನೆ ಸಂಜೆ ಮತ್ತು ಇಂದು ಬೆಳಗ್ಗೆ ಯಾಕೆ ಇಷ್ಟು ಪೊಲೀಸ್‌ ಮತ್ತು ಆಡಳಿತಾತ್ಮಕ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಬಿಜೆಪಿಯಿಂದ ನೇಮಕಗೊಂಡ ಎಲ್‌ಜಿ ತನ್ನ ಪಕ್ಷ ಮತ್ತು ಅದರ ಮಿತ್ರಪಕ್ಷಗಳಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಿದಂತಿದೆ” ಎಂದು ಹೇಳಿದ್ದಾರೆ.

ಡಿಐಜಿ-ಎಸ್‌ ಎಸ್‌ ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಐಪಿಎಸ್‌ ಅಧಿಕಾರಿ ನಿತೀಶ್‌ ಕುಮಾರ್‌ ಅವರನ್ನು ಸಿಐಡಿ ಮುಖ್ಯಸ್ಥರನ್ನಾಗಿ ನೇಮಿಸಿದೆ.

“ಈ ಕ್ರಮವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಉದ್ದೇಶವನ್ನು ಸ್ಪಷ್ಟವಾಗಿ ತೋರುತ್ತದೆ, ಇದು ಆಡಳಿತ ಪಕ್ಷವು ಪ್ರತಿಪಕ್ಷದ ಮೇಲೆ ಅನಗತ್ಯ ಆಡಳಿತಾತ್ಮಕ ಲಾಭವನ್ನು ಪಡೆಯುವುದನ್ನು ತಡೆಯಲು ಅಂತಹ ವರ್ಗಾವಣೆಗಳನ್ನು ನಿರ್ಬಂಧಿಸುತ್ತದೆ. ಎಲ್‌ಜಿ (ಲೆಫ್ಟಿನೆಂಟ್‌ ಗವರ್ನರ್) ಸರ್ಕಾರವು ಸಂಪೂರ್ಣ ಆಡಳಿತಾತ್ಮಕ ವ್ಯವಸ್ಥೆಯನ್ನು ವ್ಯೂಹಾತ್ಮಕವಾಗಿ ಬುಡಮೇಲು ಮಾಡಿದೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವಗಳನ್ನು ರಾಜಿ ಮಾಡಿದೆ. ಈ ಅಬ್ಬರದ ಪ್ರಯತ್ನವನ್ನು ಕೂಲಂಕುಷವಾಗಿ ತನಿಖೆ ಮಾಡಲು ಮತ್ತು ಈ ಆದೇಶಗಳ ಅನುಷ್ಠಾನವನ್ನು ತಕ್ಷಣವೇ ಅಮಾನತುಗೊಳಿಸಲು @ECISVEEP ಗೆ ನಾವು ಕರೆ ನೀಡುತ್ತೇವೆ” ಎಂದು ಅಬ್ದುಲ್ಲಾ ಹೇಳಿದರು.

ರಾಷ್ಟ್ರೀಯ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದು, ಜಮ್ಮು ಕಾಶ್ಮೀರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದ ಮತದಾನ: ಸೆ.18

ಎರಡನೇ ಹಂತದ ಮತದಾನ: ಸೆ.25

ಮೂರನೇ ಹಂತದ ಮತದಾನ: ಅ.01

ಮತ ಎಣಿಕೆ: ಅ.04

ಮೊದಲ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದರೆ, ಎರಡನೇ ಹಂತದಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಮೂರನೇ ಹಂತದಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next