Advertisement

ಜನರ ತೆರಿಗೆ ದುಡ್ಡಲ್ಲೇ ನಿರ್ಮಿಸಿದ ರಸ್ತೆಗೇಕೆ ಟೋಲ್‌?

10:50 AM Dec 31, 2019 | Suhan S |

ಕುಂದಗೋಳ: ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾಗರಿಕರು ನಿತ್ಯ ಪರದಾಡುವಂತಾಗಿದೆ. ಬೆಳೆ ಪರಿಹಾರ ಸಮರ್ಪಕವಾಗಿ ವಿತರಣೆಗೊಂಡಿಲ್ಲ. ಕೂಡಲೇ ಶೆರೆವಾಡ ಬಳಿ ನಿರ್ಮಿಸುತ್ತಿರುವ ಟೋಲ್‌ಗೇಟ್‌ನ್ನು ತೆರವುಗೊಳಿಸಬೇಕೆಂದು ತಾಲೂಕಾ ಹಿತರಕ್ಷಣಾ ಸಮಿತಿ ಮುಖಂಡ ಶಿವಾನಂದ ಬೆಂತೂರ ಆಗ್ರಹಿಸಿದರು.

Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಜನರು ಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಮನೆಗಳು ಬಿದ್ದಿದ್ದು, ಇದುವರೆಗೂ ಅಂತಹ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ. ಕೇವಲ ಬೆರಳೆಣಿಕೆ ಜನಕ್ಕೆ ಮಾತ್ರ 5,000 ರೂ. ಪರಿಹಾರ ನೀಡಿದ್ದಾರೆ. ಹೆಕ್ಟೇರ್‌ಗೆ ಕೇವಲ 16,800 ರೂ. ಪರಿಹಾರ ನೀಡುತ್ತಿದ್ದು, ರೈತರು ಲಕ್ಷಗಟ್ಟಲೇ ಹೊಲಕ್ಕೆ ಹಾಕಿ ಸಾಲದ ಕುಣಿಕೆಗೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.

ಸಂಪೂರ್ಣ ಮನೆ ಕಳೆದುಕೊಂಡು ಬೀದಿಯಲ್ಲಿರುವ ಕುಟುಂಬಗಳಿಗೆ ಶಾಶ್ವತ ಪರಿಹಾರ ಇದುವರೆಗೂ ದೊರೆಕಿಲ್ಲ. ಸಂಶಿ ಗ್ರಾಮದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳು ಎಪಿಎಂಸಿ ಆವರಣದಲ್ಲಿ ಭಯದಿಂದ ಜೀವನ ಕಳೆಯುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಹರಿಹಾಯ್ದರು.

ಅಲ್ಪ ಸ್ವಲ್ಪ ಬೆಳೆದ ಶೇಂಗಾ ಹಾಗೂ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಇದುವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ. ಇದರಿಂದ ರೈತರು ಕೈಗೆ ಬಂದ ದರಕ್ಕೆ ಮಾರಾಟ ಮಾಡುವಂತಾಗಿದೆ. ಕೂಡಲೇ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂದರು.

Advertisement

ಶೆರೆವಾಡದ ಬಳಿ ಯಾವ ಪುರುಷಾರ್ಥಕ್ಕೆ ಟೋಲ್‌ಗೇಟ್‌ ನಿರ್ಮಿಸುತ್ತಿದ್ದಾರೆ ಎಂಬುದು ತಿಳಿಯದಂತಾಗಿದೆ. 10 ವರ್ಷಗಳ ಹಿಂದೆ ತೆರಿಗೆ ಹಣದಲ್ಲಿಯೇ ನಿರ್ಮಿಸಿದ ರಸ್ತೆಗೆ ಟೋಲ್‌ ಹಾಸ್ಯಾಸ್ಪದವಾಗಿದೆ. ಕೂಡಲೇ ಟೋಲ್‌ಗೇಟ್‌ ನಿರ್ಮಾಣ ಬಂದ್‌ ಮಾಡದಿದ್ದರೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗಾಳಿ ಮರೆಮ್ಮ ದೇವಸ್ಥಾನದ ಹತ್ತಿರ ಸುಮಾರು ನಾಲ್ಕು ತಾಸು ಕಾಲ ರಸ್ತೆ ತಡೆ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕಚೇರಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ರಸ್ತೆ ತಡೆಯಿಂದಾಗಿ ಲಕ್ಷ್ಮೇಶ್ವರ ಕಡೆಗೆ ಹೋಗುವ ವಾಹನಗಳು ಶೆರೆವಾಡ- ಬೆಟದೂರ-ಕುಂದಗೋಳ ಮಾರ್ಗವಾಗಿ ಸುತ್ತಿ ಹೋಗುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಎನ್‌.ಎಫ್‌. ನದಾಫ, ಚನ್ನಬಸನಗೌಡ ಚಿಕ್ಕಗೌಡ್ರ, ಪ್ರಭುಗೌಡ ಶಂಕಾಗೌಡಶ್ಯಾನಿ, ಮಾರುತಿ ಕಲ್ಲೂರ, ಶಿದ್ದಪ್ಪ ಇಂಗಳಳ್ಳಿ, ದಿಲೀಪ ಕಲಾಲ, ಮಲಿಕ ಶಿರೂರ, ವಾಗೇಶ ಶಿಂಗಣ್ಣವರ, ಹನುಮಂತ ಜಾಡರ, ರಮೇಶ ಕತ್ತಿ, ಸಂಜು ತಿಮ್ಮನಗೌಡ್ರ, ಈಶ್ವರಗೌಡ ದ್ಯಾವನಗೌಡ್ರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next