Advertisement

15 ವರ್ಷ ಹಳೇ ವೈರ್‌ಗಳಿಗೆ ಹೆಚ್ಚಿನ ಶುಲ್ಕ ಏಕೆ?

12:25 AM Feb 16, 2024 | Team Udayavani |

ಬೆಂಗಳೂರು: ನಿಗದಿತ ಶುಲ್ಕ ಪ್ರತಿ ವರ್ಷ ಏರಿಕೆ ಮಾಡಲಾಗುತ್ತದೆ. ಹಾಗಿದ್ದರೆ, ಪ್ರತಿ ವರ್ಷ ಹೊಸ ವೈರ್‌ಗಳನ್ನು ಹಾಕುತ್ತೀರಾ? ಇಲ್ಲ. ಹಾಗಿದ್ದರೆ, 10-15 ವರ್ಷಗಳ ಹಳೇ ವೈರ್‌ಗಳಿಗೆ ಹೆಚ್ಚಿನ ನಿಗದಿತ ಶುಲ್ಕ ಹೆಚ್ಚಿಸುವುದು ಯಾವ ನ್ಯಾಯ? – ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ನಡೆಸಿದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ವಿವಿಧ ವರ್ಗಗಳ ವಿದ್ಯುತ್‌ ಗ್ರಾಹಕರು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.

Advertisement

ಆಯೋಗದ ಅಧ್ಯಕ್ಷ ಎನ್‌. ರವಿಕುಮಾರ್‌ ಮತ್ತು ಸದಸ್ಯ ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಕೀಲರು, ನಿವೃತ್ತ ಎಂಜಿನಿಯರ್‌ಗಳು, ಸಣ್ಣ ಮತ್ತು ಬೃಹತ್‌ ಉದ್ಯಮಗಳ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ವಿದ್ಯುತ್‌ ದರ ಹೆಚ್ಚಿಸಲು ಅನುಮತಿ ನೀಡಬಾರದು ಎಂದು ಆಯೋಗವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.

ಪ್ರತಿ ಗ್ರಾಹಕರು ವಿದ್ಯುತ್‌ ಬಳಸಲಿ ಬಿಡಲಿ ಅವರ ಮನೆಯವರೆಗೆ ವಿದ್ಯುತ್‌ ಸಂಪರ್ಕ ಇರಲೇಬೇಕು. ಈ ವಿದ್ಯುತ್‌ ಮಾರ್ಗವನ್ನು ನೋಡಿಕೊಳ್ಳಲು ಹಣ ಬೇಕು. ಅದನ್ನು ನಿಗದಿತ ಶುಲ್ಕದ ಮೂಲಕ ಪಡೆಯುವುದು ವಾಡಿಕೆ. ಆದರೆ ಇದೇ ನಿಗದಿತ ಶುಲ್ಕ ಪ್ರತಿ ವರ್ಷ ಪರಿಷ್ಕರಣೆ ಆಗುತ್ತಿದೆ. ಇದು ಗ್ರಾಹಕರ ಮೇಲೆ ಹೊರೆಯಾಗಿ ಪರಿಣಮಿಸುತ್ತಿದೆ. 10-15 ವರ್ಷಗಳ ಹಳೇ ವೈರ್‌ಗಳಿಗೆ ಹೆಚ್ಚಿನ ನಿಗದಿತ ಶುಲ್ಕ ವಿಧಿಸುವುದು ಯಾವ ನ್ಯಾಯ? ಪ್ರತಿ ವರ್ಷ ಹೊಸ ವೈರ್‌ಗಳನ್ನು ಹಾಕಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಎಫ್ಕೆಸಿಸಿಐ ಪರವಾಗಿ ಶ್ರೀಧರ್‌ ಪ್ರಭು ಮತ್ತು ಎಂ.ಜಿ. ಪ್ರಭಾಕರ್‌ ಮಾತನಾಡಿ, ಬೆಸ್ಕಾಂ ವಿದ್ಯುತ್‌ ಸರಬರಾಜು ಸಮರ್ಪಕವಾಗಿಲ್ಲ ಎಂಬ ಕಾರಣದ ಮೇಲೆ ಹಲವು ಉದ್ಯಮಿಗಳು ಮುಕ್ತ ಮಾರುಕಟ್ಟೆ (ಓಪನ್‌ ಎಕ್ಸೆಸ್‌) ಮೂಲಕ ವಿದ್ಯುತ್‌ ಪಡೆಯುತ್ತಾರೆ. ಅವರ ಮೇಲೂ ನಿಗದಿತ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಪ್ರತಿ ವರ್ಷ ಹೆಚ್ಚಿಸುತ್ತ ಹೋಗುವುದು ಸರಿಯಾದ ಕ್ರಮವಲ್ಲ. ಸರಕಾರ ಯಾರಿಗೆ ಬೇಕಾದರೂ ಉಚಿತ ವಿದ್ಯುತ್‌ ಕೊಡಲಿ. ನಮ್ಮ ಆಕ್ಷೇಪವಿಲ್ಲ. ಆದರೆ ಸರಕಾರದ ತೀರ್ಮಾನಕ್ಕೆ ಬೇರೆ ಗ್ರಾಹಕರ ಹಿತ ಬಲಿ ಕೊಡಬೇಡಿ’ ಎಂದರು.

ಹೊಂದಾಣಿಕೆ ಶುಲ್ಕ ಪರಿಷ್ಕರಣೆ ಯಾಕೆ?
ಪ್ರತಿ ತಿಂಗಳು ವಿದ್ಯುತ್‌ ಖರೀದಿ ದರ ಶುಲ್ಕದ ಹೊಂದಾಣಿಕೆ ದರ ಎಂದು ಹೆಚ್ಚಿನ ಶುಲ್ಕ ಸಂಗ್ರಹಿಸುವಾಗ ಪ್ರತಿ ವರ್ಷ ದರ ಪರಿಷ್ಕರಿಸುವ ಅಗತ್ಯ ಏನಿದೆ ಎಂದು ಕಾಸಿಯಾ ಸಂಘದ ವಿದ್ಯುತ್‌ ಸಮಿತಿಯ ಅಧ್ಯಕ್ಷ ಎಸ್‌.ಎಂ. ಹುಸೇನ್‌, ಕೆ.ಎಸ್‌. ಮಲ್ಲಪ್ಪ ಗೌಡ, ಜಿ.ಎನ್‌. ಕೃಷ್ಣಪ್ಪ ಪ್ರಶ್ನಿಸಿದರು.

Advertisement

ಇದಲ್ಲದೆ, ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಿರಲು ಐಪಿ ಸೆಟ್‌ ಮತ್ತು ಬೀದಿದೀಪ, ಕುಡಿಯುವ ನೀರಿಗೆ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು ಸರಕಾರ ಹೆಚ್ಚಿಸಬೇಕು. ಪ್ರಸ್ತುತ ಪ್ರತಿ ವರ್ಷ 17 ಸಾವಿರ ಕೋಟಿ ರೂ. ನೆರವು ನೀಡುತ್ತಿದೆ. 10 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ನೀಡಿದರೆ, ವಿದ್ಯುತ್‌ ದರ ಏರಿಕೆ ತಪ್ಪಿಸಬಹುದು. ಈಗಾಗಲೇ ಕೆಇಆರ್‌ಸಿ ಕೂಡ ಸರಕಾರಕ್ಕೆ ಪತ್ರ ಬರೆದು ಸಹಾಯಧನ ಪ್ರಮಾಣ ಹೆಚ್ಚಿಸಿ ಕ್ರಾಸ್‌ ಸಬ್ಸಿಡಿ ಇಲ್ಲದಂತೆ ಮಾಡಬಹುದು ಎಂದು ಹೇಳಿದೆ. ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next