Advertisement
ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಸ್ನೇಹಿತೆಯ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ಸು ಬಂದ ಮೇಲೆ, ದಿವ್ಯಾಗೆ ಮನಸ್ಸು ವಿಹ್ವಲಗೊಂಡಿದೆ. ಮದುವೆಯಲ್ಲಿ ತಿಂದದ್ದು ವ್ಯತ್ಯಾಸವಾಯಿತೋ ಏನೋ, ಅಲ್ಲಿಂದ ಬಂದಾಗಿನಿಂದ ಹೊಟ್ಟೆಯಲ್ಲಿ ಬುಗುಬುಗು ಉರಿ. ಎರಡು ತಿಂಗಳಿನಿಂದ ವೈದ್ಯರಿಗೆ ತೋರಿಸುತ್ತಲೇ ಇದ್ದರೂ, ಹೊಟ್ಟೆಯುರಿ ಕಡಿಮೆಯಾಗಿಲ್ಲ. ಜೊತೆಗೆ ತಲೆನೋವೂ ಸೇರಿಕೊಂಡು, ಎದೆಬಡಿತ ಜಾಸ್ತಿಯಾಗಿದೆ.
Related Articles
Advertisement
ಹರೆಯದ ವಯಸ್ಸಿನಲ್ಲಿ, ದಿವ್ಯಾಗೆ ಜೀವದ ಗೆಳೆಯರೊಬ್ಬರಿದ್ದರು. ಮದುವೆಯಾಗಲು, ಗೆಳೆಯನ ತಂಗಿಯರ ಮದುವೆ ಆಗುವವರೆಗೂ ದಿವ್ಯಾ ಕಾಯಬೇಕಿತ್ತು. ದಿವ್ಯಾಳನ್ನು ಮದುವೆಯಾಗುತ್ತೇನೆಂದು ಹತ್ತು ವರ್ಷ ಕಾಲ ಕಾಯಿಸಿದ ಆತ, ಇದ್ದಕ್ಕಿದ್ದಂತೆ, ಅರ್ಥಪೂರ್ಣ ವಿದಾಯವನ್ನೂ ಹೇಳದೆ, ಬೇರೊಂದು ಹುಡುಗಿಯನ್ನು ಮದುವೆಯಾಗಿಬಿಟ್ಟರು. ಆತನ ಮೇಲೆ ದಿವ್ಯಾ ಇಟ್ಟಿದ್ದ ಅದಮ್ಯ ನಂಬಿಕೆ ಸುಳ್ಳಾಗಿತ್ತು. ದಿವ್ಯಾರ ತಾಯಿ, ಆಗಿ ಹೋಗಿದ್ದನ್ನು ಲೆಕ್ಕಕ್ಕಿಡಬಾರದೆಂದು, ನೈತಿಕ ಬೆಂಬಲಕ್ಕೆ ನಿಂತಿದ್ದರು.
ದೆಹಲಿಗೆ ಹೋಗಿ ಬಂದ ನಂತರ, ಜೀವನದಲ್ಲಿ ಹುದುಗಿದ್ದ ನೋವು ಮರುಕಳಿಸಿದೆ. ಪ್ರೇಮದಲ್ಲಿ ಮೋಸವಾಯಿತಲ್ಲ ಎಂಬ ಮನೋಕ್ಲೇಷೆಯಿಂದ ದಿವ್ಯಾ ನರಳತೊಡಗಿದರು. ಆ ಆರದ ಗಾಯದಿಂದ ಉದ್ವಿಗ್ನತೆ ಹೆಚ್ಚಾಗಿ, ಶಾರೀರಿಕ ಸಮಸ್ಯೆ ಕಾಡತೊಡಗಿತು. ಜೊತೆಗೆ, ಮೆನೋಪಾಸ್ ಸಮಯದಲ್ಲಿ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯಿಂದ ಒಟ್ಟಾರೆ ಆರೋಗ್ಯವೂ ಹದಗೆಟ್ಟಿತು.
ಮನೋಕ್ಲೇಷೆಯಿಂದ ಈ ರೀತಿ ಆಗಬಹುದೆಂದು ಅರ್ಥವಾದಮೇಲೆ, ದಿವ್ಯಾಗೆ ಕೊಂಚ ಸಮಾಧಾನವಾಯಿತು. ತಾಯಿಯೊಡನೆಯೂ ಹೇಳದ ಕೆಲವು ಸಂಗತಿಗಳನ್ನು ನನ್ನೊಡನೆ ಹಂಚಿಕೊಂಡ ಮೇಲೆ, ತೀವ್ರ ಪ್ರತಿಕ್ರಿಯೆ ಕಡಿಮೆಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯನ ಬದುಕಿನ ಆಗುಹೋಗುಗಳು ತಿಳಿಯದ ಹಾಗೆ, ಅವರನ್ನು ಬ್ಲಾಕ್ ಮಾಡಲಾಯ್ತು. ಕ್ರಮೇಣ ದಿವ್ಯಾ ಅವರು ಚೇತರಿಸಿಕೊಳ್ಳತೊಡಗಿದರು.
ಡಾ. ಶುಭಾ ಮಧುಸೂದನ್ಚಿಕಿತ್ಸಾ ಮನೋವಿಜ್ಞಾನಿ