Advertisement

Politics: ಮಠದಲ್ಲಿ ರಾಜಕಾರಣದ ಮಾತೇಕೆ?: ರೇಣು

10:25 PM Nov 26, 2023 | Team Udayavani |

ದಾವಣಗೆರೆ: ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಬಿಜೆಪಿಯ ವಿಚಾರಗಳನ್ನು ಮಠದಲ್ಲಿ ಮಾತನಾಡುವ ಅವಶ್ಯಕತೆ ಇರಲಿಲ್ಲ. ಡಿ.6ರ ನಂತರ ದೆಹಲಿಗೆ ಹೋಗುವುದಾಗಿ ಸೋಮಣ್ಣ ಹೇಳುತ್ತಿದ್ದಾರೆ. ಹೋಗುವುದಾದರೆ ಹೋಗಲಿ, ಅಲ್ಲಿ ನಾಯಕರಿಗೆ ಅದೇನು ಚಾಡಿ ಹೇಳುತ್ತಾರೋ ಹೇಳಲಿ. ಅವರೊಬ್ಬರಿಗೇ ಅಲ್ಲ, ನಮಗೂ ದೆಹಲಿ ನಾಯಕರು ಗೊತ್ತು. ನಾವೂ ಸಹ ದೆಹಲಿಗೆ ಹೋಗುತ್ತೇವೆ. ರಾಜ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲದಿರುವ ಸಂದಿಗ್ಧ ಸ್ಥಿತಿಯಲ್ಲಿ ಯಡಿಯೂರಪ್ಪ ಸೈಕಲ್‌ನಲ್ಲಿ ರಾಜ್ಯವನ್ನೆಲ್ಲ ಸುತ್ತಾಡಿ ಪಕ್ಷ ಕಟ್ಟಿ ಬೆಳೆಸಿದರು. ಯಾರೇ ಆಗಲಿ ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತನಾಡಿದರೆ ಸಹಿಸುವ ಮಾತೇ ಇಲ್ಲ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಯಡಿಯೂರಪ್ಪ ಅಧಿಕಾರಕ್ಕೆ ತಂದರು. ಅವರೇನು ರೆಡಿಮೇಡ್‌ ಫುಡ್‌ ಅಲ್ಲ, ಪಕ್ಷವನ್ನು ಕಟ್ಟಿ ಬೆಳೆಸಿದ ಮಹಾನ್‌ ನಾಯಕರು ಎಂದರು.

ಸೋಮಣ್ಣ ಕಾಂಗ್ರೆಸ್‌ನಲ್ಲಿ ಇದ್ದಂತಹವರು. ಅವರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ, ಕಾಂಗ್ರೆಸ್‌ ಬಿಟ್ಟು ಬಂದಿದ್ದರೂ ಅವರನ್ನು ಎರಡು ಬಾರಿ ಮಂತ್ರಿ ಮಾಡಲಾಯಿತು. ಸೋತಾಗ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರು ಮಾಡಿರುವ ತಪ್ಪಾ, ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಯಡಿಯೂರಪ್ಪ ಬಗ್ಗೆ ಕೀಳುಮಟ್ಟದ ಭಾಷೆ ಬಳಸುತ್ತೀರಾ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲು ಕಂಡು ದೆಹಲಿ ನಾಯಕರು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ರಾಜ್ಯವ್ಯಾಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗಿದೆ.

ಸೋಮಣ್ಣ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿರುವುದನ್ನು ಅವಮಾನಿಸುತ್ತಿದ್ದಾರೆ. ಅವರು ನನಗೆ ಹಿರಿಯಣ್ಣನ ಸಮಾನ. ಈಗಲೂ ಬಾರಲೇ ತಮ್ಮ ಅಂತಲೇ ಮಾತನಾಡುವ ಸೋಮಣ್ಣ ವಸತಿ ಸಚಿವರಾಗಿದ್ದಾಗ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮನೆಗಳನ್ನು ಮಂಜೂರು ಮಾಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು, ಹಾದಿ ರಂಪ, ಬೀದಿ ರಂಪ ಮಾಡುವುದು ಸರಿಯಲ್ಲ. ಮನೆಯನ್ನು ಕೂಡಿಸುವ ಕೆಲಸ ಮಾಡಲಿ. ಮನೆ ಒಡೆಯುವ ಕೆಲಸ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next