ಮೈಸೂರು: ”ಸಂಪುಟದ ಕುರಿತಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸ್ಥೂಲವಾಗಿ ಚರ್ಚೆ ಆಗಿದ್ದು, ಅವರು ಇನ್ನಷ್ಟು ವಿವರ ಪಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಿದ ನಂತರ ವಿಸ್ತರಣೆ ಇಲ್ಲ ಪುನಾರಚನೆ ಎನ್ನುವ ಕುರಿತು ತೀರ್ಮಾನ ಆಗುತ್ತದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ,’ಹಲವಾರು ಇಲಾಖೆಗಳ ವಿಚಾರಗಳ ಕುರಿತು ಚರ್ಚೆ ಮಾಡಲು ದೆಹಲಿಗೆ ತೆರಳಿದ್ದೆ, ಇಂಧನ, ರಕ್ಷಣೆ, ಪರಿಸರ, ಹಣಕಾಸು ಮತ್ತು ರಾಜ್ಯದ ಹಲವಾರು ವಿಚಾರಗಳ ಕುರಿತು ಚರ್ಚಿಸಲು ಹೋಗಿದ್ದೆ. ಸಕಾರಾತ್ಮಕ ಸ್ಪಂದನೆ ದೊರಕಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹಲವಾರು ಯೋಜನೆಗಳು ಸಿಗುವ ಆಶಾವಾದ ಇದೆ’ ಎಂದರು.
ಆಶ್ಚರ್ಯ ಏನಿದೆ ?
ಮಂಡ್ಯದ ಮುಸ್ಕಾನ್ ಗೆ ಬೆಂಬಲ ಸೂಚಿಸಿರುವ ಅಲ್ ಖೈದಾ ನಾಯಕನ ವಿಡಿಯೋ ಕುರಿತು ಪ್ರಶ್ನಿಸಿದಾಗ, ‘ಇದರಲ್ಲಿ ಆಶ್ಚರ್ಯ ಏನಿದೆ? ಹಲವಾರು ವಿಚಾರಗಳನ್ನು ನೆಲದ ಕಾನೂನಿನ ವಿರುದ್ಧವಾಗಿ ಮಾಡಲಾಗಿದೆ. ಇದರ ಹಿಂದೆ ಕೆಲ ಶಕ್ತಿ ಇದ್ದು, ಇದು ನಿರಂತರವಾಗಿ ನಡೆಯುತ್ತಿದೆ. ಅದರ ಭಾಗವಾಗಿ ಅಲ ಖೈದಾ ವಿಡಿಯೋದಲ್ಲಿ ಅಭಿಪ್ರಾಯ ಸ್ಪಷ್ಟವಾಗಿ ಹೊರ ಬಂದಿದೆ. ನಾವು ವಿಡಿಯೋ ಕುರಿತು ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.
‘ಅಲ್ ಖೈದಾ ನಾಯಕನ ವಿಡಿಯೋ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಅವರ ಹೇಳಿಕೆಯಲ್ಲಿ ಲಾಜಿಕ್ ಇಲ್ಲ, ಅಲ್ ಖೈದಾ ನಾಯಕನ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ. ಇದು ನಾನು ಕೇಳುವಂತಹ ಪ್ರಶ್ನೆ’ ಎಂದರು.