Advertisement

ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕು;ನಾವು ಯಾಕೆ ಮತ ಹಾಕಬೇಕು ?

03:49 PM Mar 25, 2019 | keerthan |

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

Advertisement

ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕು
ಎಲ್ಲರೂ ತಪ್ಪದೇ ಮತದಾನ ಮಾಡುವುದು ಸಂವಿಧಾನದ ಆಶಯಕ್ಕೆ ತಲೆಬಾಗಿದಂತೆ. ನಾವು ಭಾರತೀಯರು ಎಂದು ಗುರುತಿಸಿಕೊಳ್ಳಲು ಎಷ್ಟು ಹೆಮ್ಮೆ ಪಡುತ್ತೆವೆಯೋ, ಅಷ್ಟೇ ಅಚಲ ನಂಬಿಕೆಯಿಂದ ಚುನಾವಣೆಯಲ್ಲಿ ಭಾಗಿಯಾಗಬೇಕು. ಭ್ರಷ್ಟಾಚಾರಿಗಳ ಹುಟ್ಟು ಅಡಗಿಸಲು, ಸಮರ್ಥರ ಕೈಯಲ್ಲಿ ಆಡಳಿತದ ಚುಕ್ಕಾಣಿ ನೀಡಲು ನಾವು ಯುವ ಜನತೆ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಬೇಕು.
ನೂರುನ್ನಿಸಾ, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು, ಕಾಪು

ಚುನಾವಣೆ ಒಂದು ಅವಕಾಶ
ನಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಹಿಂದೇಟು, ಸೋಮಾರಿತನ ತೋರಿಸಿದರೆ ನಮ್ಮಷ್ಟು ಮೂರ್ಖರು ಬೇರೆ ಇಲ್ಲ. ಸಂವಿಧಾನ ನಮಗೆ ನೀಡಿದ ಹಕ್ಕನ್ನು ಬಳಸಬೇಕು. ದೇಶದ ಅಭಿವೃದ್ಧಿ, ಜನರ ಆಶೋತ್ತರ ಈಡೇರಿಸುವ ಅಭ್ಯರ್ಥಿ ಆಯ್ಕೆ ಮಾಡುವ ಈ ಪ್ರಜಾಸತ್ತಾತ್ಮಕತೆಯನ್ನು ಜೀವಂತವಾಗಿಡುವ ಚುನಾವಣೆ ಒಂದು ಅವಕಾಶವಾಗಿದೆ.
ನಾಗಾರ್ಜುನ ಕೆ.ಆರ್‌.,ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು, ಕಾಪು

ಪ್ರಜಾಪ್ರಭುತ್ವ ಜೀವಂತವಾಗಿಡುವ ಅವಕಾಶ
ನಮ್ಮ ದೇಶದಲ್ಲಿ ಅಕ್ಷರಸ್ಥರು, ನಗರವಾಸಿಗಳಿಂತ ಹಳ್ಳಿ ಪ್ರದೇಶದ ಕಡಿಮೆ ಶಿಕ್ಷಣ ಪಡೆದ ಜನರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವುದು ಕಂಡು ಬರುತ್ತಿದೆ. ವಿದ್ಯಾವಂತರು ಮತ ಚಲಾಯಿಸಲು ಸೋಮಾರಿತನ ತೋರುವುದು ಅಕ್ಷಮ್ಯ. ನಿಜವಾದ ಅರ್ಥದಲ್ಲಿ ಭಾರತದ ಪ್ರಜೆಗಳಾಗಿ ಇರಬೇಕಾದರೆ ಮತವನ್ನು ತಪ್ಪದೇ ಚಲಾಯಿಸಬೇಕು. ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಮತದಾನ ನಡೆಯುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದರ್ಥ.
ರಂಜಿತ್‌, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು

ದೇಶದ ಸಮಗ್ರತೆಗೆ ನನ್ನ ಮತ
ನಾನು ಮೊದಲ ಬಾರಿಗೆ ಮತ ಚಲಾಯಿಸುವ ಒಬ್ಬ ಪ್ರಜ್ಞಾವಂತ ಮತದಾರ. ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರೊಂದಿಗೆ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಸರಕಾರದ ರಚನೆ ಪ್ರತಿಯೊಬ್ಬ ಮತದಾರನ ಕೈಯಲ್ಲಿದೆ. ದೇಶದ ಬಗ್ಗೆ ಚಿಂತಿಸಬಲ್ಲ ಯುವ ಮತದಾರರು ಕಡ್ಡಾಯ ಮತದಾನ ಮಾಡಿ ಸದೃಢ ಸರಕಾರ ರಚನೆಯಾಗುವಂತೆ ನೋಡಿಕೊಳ್ಳಬೇಕು.
ಆಶಿಷ್‌ ಪಾಟ್ಕರ್‌, ಎಂ.ಎಸ್‌.ಆರ್‌.ಎಸ್‌. ಕಾಲೇಜು, ಶಿರ್ವ

Advertisement

ಮತದಿಂದ ಭವಿಷ್ಯ ನಿರ್ಧಾರ
ನಾನು ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದೇನೆ. ದೇಶದ ಭವಿಷ್ಯವನ್ನು ಯೋಗ್ಯರ ಕೈಯಲ್ಲಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಚುನಾವಣೆ ಪ್ರಜಾಪ್ರಭುತ್ವದ ಉತ್ಸವ. ನಮ್ಮ ಒಂದು ಮತದಾನ ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಯೋಚಿಸಿ ಮತದಾನ ಮಾಡಬೇಕು. ತಪ್ಪದೆ ಮತದಾನ ಮಾಡಿ ಮಾಡಿ, ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಿ.
-ನಿಶ್ಮಿತಾ ರಾವ್‌, ಎಂ.ಎಸ್‌.ಆರ್‌.ಎಸ್‌.ಕಾಲೇಜು, ಶಿರ್ವ

ಉತ್ತಮ ಭವಿಷ್ಯಕ್ಕೆ ಭಾಷ್ಯ
ಮತದಾನ ಒಂದು ಪವಿತ್ರ ಹಕ್ಕು. ಇದೊಂದು ನನಗೆ ಸಂವಿಧಾನ ನೀಡಿದ ಸುವರ್ಣ ಅವಕಾಶ. ನನ್ನ ದೇಶವಾಸಿಗಳ ಹಿತ ಕಾಯಲು ಹಕ್ಕನ್ನು ಚಲಾಯಿಸುವುದು ನನಗೆ ಅತೀ ಮುಖ್ಯವಾಗಿದೆ. ದೇಶದ ಭವಿಷ್ಯ ನಿರ್ಧರಿಸುವ ಅಧಿಕಾರ ನಮ್ಮದೇ ಆಗಿರುತ್ತದೆ. ಅಭಿವೃದ್ಧಿಗೆ ಸಾಕ್ಷಿಯಾಗೋಣ. ಮತ ಚಲಾಯಿಸಿ ಭವಿಷ್ಯಕ್ಕೆ ಭಾಷ್ಯ ಬರೆಯೋಣ.
ಶೇಕ್‌ ಮುಹಮ್ಮದ್‌ ಸ್ವಾಲಿ, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು.

ಮತದಾನ ನಮ್ಮ ಹಕ್ಕು
ದೇಶದ ಅಭಿವೃದ್ಧಿ ಮಾಡುವಂತಹ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾವು ಮತಚಲಾಯಿಸಬೇಕು. ಇದು ಸಂವಿಧಾನ ನಮಗೆ ನೀಡಿರುವ ಪರಮೋತ್ಛ ಹಕ್ಕು. ನಮ್ಮ ಕರ್ತವ್ಯ ಕೂಡ. ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಿದ್ದು ಇದನ್ನು ಮುಂದಿಡದೇ ದೇಶದ ಬಗ್ಗೆ ಕಾಳಜಿಇರುವಂತಹ ಸಭ್ಯ, ಸ್ವತ್ಛ ವ್ಯಕ್ತಿಯನ್ನು ಗೆಲ್ಲಿಸುವ ಸಲುವಾಗಿ ನಾವು ಮತದಾನ ಮಾಡಬೇಕು.
ಕಾರ್ತಿಕ್‌ ಪ್ರಭು, ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ

ಮತದಾನದ ರಾಯಭಾರಿಗಳಾಗುತ್ತೇವೆ
5 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶವಾದರೆ, ಯಾರಿಗೆ ಮತ ಹಾಕಬೇಕು ಎನ್ನುವುದು ನಮಗಿರುವ ಅಧಿಕಾರ. ಅದರಲ್ಲೂ ಯುವಕರ ಜವಾಬ್ದಾರಿ ಮಹತ್ವದ್ದಾಗಿದೆ. ನಾವೇ ಮತದಾನದ ರಾಯಭಾರಿಗಳಾಗಿ, ಹಿರಿಯರನ್ನು ಕೂಡ ಮತದಾನ ಮಾಡಿಸಬೇಕಿದೆ. ನಾಡಿನ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ರಂಗಕ್ಕೆ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತಾರೆ ಅನ್ನುವುದನ್ನು ನೋಡಿಕೊಂಡು ಅಂತಹವರನ್ನು ಗೆಲ್ಲಿಸಬೇಕು.
ಶೀಲಾ ನಾವುಂದ, ಶಂಕರನಾರಾಯಣ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next