Advertisement
“ದೇವರ ಪೂಜೆ ಮಾಡಲು ರಜೆ ಘೋಷಣೆ ಮಾಡಬೇಕು ಎಂದು ಎಲ್ಲಿಯಾದರೂ ಇದೆಯೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಹಾಗೂ ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರೂ ಆದ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ನೋಡಿ, ನಾವು ಬಸವಣ್ಣನನ್ನು ನಂಬಿದವರು. ಅವರ ವಿಚಾರಧಾರೆಗಳನ್ನು ಗೌರವಿಸುವವರು. ಬಸವಣ್ಣ ಹೇಳಿದ್ದು ಕಾಯಕವೇ ಕೈಲಾಸ. ಸ್ವತಃ ತುಮಕೂರಿನ ಸಿದ್ದಗಂಗಾ ಮಠದ ಹಿಂದಿನ ಶ್ರೀಗಳು ಐಕ್ಯರಾದಾಗಲೂ ಮಠದಲ್ಲಿ ದಾಸೋಹ ನಡೆಯಿತು. ವಿಧಾನಸೌಧದ ಮುಂದೆಯೇ “ಸರಕಾರದ ಕೆಲಸ ದೇವರ ಕೆಲಸ’ ಅಂತ ಕೆತ್ತಲಾಗಿದೆ. ಇವರಿಗೆ (ಬಿಜೆಪಿಗೆ) ಬಸವ ತತ್ವದ ಪರಿಕಲ್ಪನೆ ಇದೆಯೇ? ದೇವರ ಪೂಜೆ ಮಾಡಲು ರಜೆ ಘೋಷಣೆ ಮಾಡಬೇಕು ಅಂತ ಎಲ್ಲಿಯಾದರೂ ಇದೆಯೇ? ಅಷ್ಟಕ್ಕೂ ಈಗ ದೇಶದಲ್ಲಿ ಎಷ್ಟೊಂದು ಐತಿಹಾಸಿಕ ಘಟನೆಗಳು ನಡೆದುಹೋಗಿದೆ. ಬಿಜೆಪಿ ಅದೆಲ್ಲದಕ್ಕೂ ರಜೆ ಘೋಷಣೆ ಮಾಡಿದೆಯೇ? ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಸುಪ್ರೀಂ ಕೋರ್ಟ್ ಆಶ್ರಯ ದಲ್ಲಿ. ಅದಕ್ಕೆಲ್ಲರೂ ತಲೆಬಾಗಬೇಕಲ್ಲವೇ?
Related Articles
ಬಿಜೆಪಿ ಒಂದೆಡೆ ಹೇಳುತ್ತದೆ, “ಈ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ ಅಂತ. ಹಾಗಿದ್ದರೆ, ಬಿಜೆಪಿ ಅಯೋಧ್ಯೆಯಲ್ಲಿ ಏನು ಮಾಡುತ್ತಿದೆ? ಅದು ಯಾಕೆ ಎಲ್ಲರಿಗೂ ಆಮಂತ್ರಣ ಕೊಡುತ್ತಿರುವುದು? ರಾಮ ಮಂದಿರ ಬಗ್ಗೆ ಟ್ರಸ್ಟ್ ನವರು, ಧಾರ್ಮಿಕ ವಿಚಾರಧಾರೆ ಉಳ್ಳವರು ಮಾತನಾಡಲಿ. ಇವರ್ಯಾಕೆ ಮಾತನಾಡುತ್ತಾರೆ? ದೇಶಭಕ್ತ ಮತ್ತು ರಾಮಭಕ್ತ ಎನ್ನುವ ಸರ್ಟಿಫಿಕೇಟ್‌ನ್ನು ಇವರ್ಯಾಕೆ ನೀಡುತ್ತಾರೆ? ಇದು ಒತ್ತಟ್ಟಿಗಿರಲಿ, ಪ್ರಧಾನಿ ನರೇಂದ್ರಿ ಮೋದಿ ನೇತೃತ್ವದ ಸರಕಾರ ಬಂದು ಹತ್ತು ವರ್ಷ ಆಗಿದೆ. ಇದುವರೆಗೆ ಇಷ್ಟು ಜನರಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದೇವೆ. ಇಂತಿಷ್ಟು ವಸತಿರಹಿತರಿಗೆ ಮನೆ ಕಟ್ಟಿಸಿಕೊಟ್ಟಿದ್ದೇವೆ. ಇಂತಿಷ್ಟು ಜನರನ್ನು ಬಡತನ ರೇಖೆಯಿಂದ ಆಚೆ ತಂದಿದ್ದೇವೆ ಅಂತ ಏನಾದರೂ ಹೇಳಿದ್ದಾರೆಯೇ? ಅದೂ ಇಲ್ಲ.
Advertisement
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಒಟ್ಟಾಗಿವೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ನಿಮ್ಮ ತಂತ್ರಗಾರಿಕೆ ಏನು?ಒಟ್ಟಾಗಿಲ್ಲ; ವಿಲೀನ ಆಗಿವೆ. ಈ ಮೈತ್ರಿಯು ಎರಡು ಅಂಶಗಳನ್ನು ಬಯಲುಗೊಳಿಸುತ್ತದೆ. ಒಂದು- ತಾನು ಅತ್ಯಂತ ಬಲಿಷ್ಠ ಎಂದು ಹೇಳಿಕೊಳ್ಳುವ ಬಿಜೆಪಿಗೆ ಈ ಮೈತ್ರಿ ಯಾಕೆ? ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಸಾಕು ಎಂದು ಹೇಳಿಕೊಳ್ಳುವ ನಿಮಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಯಾಕೆ ಬೇಕಿತ್ತು? ರಾಜ್ಯದ ವಿಚಾರಕ್ಕೆ ಬಂದರೆ, ಮೇಲ್ಮನೆ ಮತ್ತು ಕೆಳಮನೆ ವಿಪಕ್ಷದ ನಾಯಕರನ್ನು ಆಯ್ಕೆ ಮಾಡಲು ಆರು ತಿಂಗಳು ಬೇಕಾಯ್ತು. ಇದು ನಾಯಕತ್ವದ ಕೊರತೆಯನ್ನು ಎತ್ತಿತೋರಿಸುತ್ತದೆ. ಮತ್ತೂಂದು- ಅತ್ತ ಜಾತ್ಯತೀತತೆಯನ್ನು ಕಳಚಿಕೊಂಡ ಜೆಡಿಎಸ್ ಬಳಿ ಜನತೆಯೂ ಇಲ್ಲ; ದಳವೂ ಉದುರಿವೆ. ತನ್ನ ಅಸ್ತಿತ್ವಕ್ಕೆ ಉಳಿಸಿಕೊಳ್ಳಲು ಈ ಮೈತ್ರಿ ಮಾಡಿಕೊಂಡಿದೆ. ಇದೆಲ್ಲದಕ್ಕೂ ಕಾರಣ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರಿಂದ ತಳಮಳಗೊಂಡಿರುವುದು. ಬೇಸಗೆ ಶುರುವಾಗುತ್ತಿದೆ. ನೀರು ಮತ್ತು ಮೇವಿನ ಕೊರತೆ ಕಾಡಬಹುದು. ಇದಕ್ಕೆ ಏನು ತಯಾರಿ ಮಾಡಿಕೊಳ್ಳಲಾಗಿದೆ?
ಈಗಾಗಲೇ ಮೇವಿನ ಕಿಟ್ ವಿತರಿಸಲಾಗುತ್ತಿದೆ. ನೀರಿನ ಕೊರತೆಯೂ ಉಂಟಾಗದಂತೆ ಯೋಜನೆ ರೂಪಿಸಲಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲಾ ಪಂಚಾ ಯತ್ ಸಿಇಒಗಳ ಖಾತೆಗೆ ತಲಾ ಒಂದು ಕೋಟಿ ರೂ. ಹಾಕಲಾಗಿದೆ. ಮೊದಲ ಬಾರಿಗೆ ಕೃಷಿ ಸಚಿವರು, ತೋಟಗಾರಿಕೆ ಸಚಿವರು, ಕಂದಾಯ ಸಚಿವರು, ಪಶುಸಂಗೋಪನಾ ಸಚಿವರು, ನಾನು ಸೇರಿ ಬರ ನಿರ್ವಹಣೆ ಮಾಡುತ್ತಿದ್ದೇವೆ. ಈಗಾಗಲೇ 10-15 ಸಭೆಗಳನ್ನು ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಣಾಮ ಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದೆಲ್ಲದರ ನಡುವೆ ಕೇಂದ್ರದಿಂದ ನಮಗೆ ಅಗತ್ಯ ನೆರವು ಮಾತ್ರ ಸಿಗುತ್ತಿಲ್ಲ. ನಾಲ್ಕು ಬಾರಿ ಹೋಗಿ ಬಂದಿದ್ದೇವೆ. ಇನ್ನೆಷ್ಟು ಬಾರಿ ಹೋಗಬೇಕು? ಸರಕಾರದಲ್ಲಿ ಹಣ ಇಲ್ಲ ಅಂತಾರೆ?
43 ಪ್ರಾಜೆಕ್ಟ್ಗಳಿಗೆ ಈಚೆಗೆ ಮಂಜೂರಾತಿ ಪಡೆದುಕೊಳ್ಳಲಾಯಿತು. ದುಡ್ಡು ಇಲ್ಲಾಂದ್ರೆ ಅದು ಹೇಗಾಯ್ತು? 38 ಸಾವಿರ ಕೋಟಿ ಹಣ ಹೇಗೆ ಜನರಿಗೆ ನೇರವಾಗಿ ವರ್ಗಾವಣೆ ಆಗು ತ್ತಿದೆ? ಹಿಂದಿನ ಸರಕಾರ ಸಾಲ ಮಾಡಿ ತುಪ್ಪ ತಿಂದಿದೆ. ನಾವು ಅದರ ಬಡ್ಡಿಯನ್ನು ನಾವು ಕಟ್ಟುತ್ತಿದ್ದೇವೆ. ದುಡ್ಡು ಇಲ್ಲ ಎನ್ನುವ ಬಿಜೆಪಿಯವರು ನಮಗೆ ಕೇಂದ್ರದಿಂದಾದ ಅನ್ಯಾಯದ ಬಗ್ಗೆ ದನಿ ಎತ್ತಲಿ. ಒಳಮೀಸಲಾತಿ ವಿಚಾರವನ್ನು ಕೇಂದ್ರದ ಮೇಲೆ ಎತ್ತಿಹಾಕಿ ಹೊಣೆಯಿಂದ ಕಾಂಗ್ರೆಸ್ ನುಣುಚಿಕೊಂಡಿತು. ಬಿಜೆಪಿ ಮಾಡಿದ್ದೂ ಇದನ್ನೇ. ಹಾಗಿದ್ದರೆ, ವ್ಯತ್ಯಾಸ ಏನು?
ಇದು ತಪ್ಪು. ಸದಾಶಿವ ಆಯೋಗ ತಿರಸ್ಕರಿ ಸಿದ್ದು ಇದೇ ಹಿಂದಿದ್ದ ಬಿಜೆಪಿ ಸರಕಾರ. ತದನಂತರ ಮಾಧುಸ್ವಾಮಿ ಸಮಿತಿ ರಚಿಸಿ ಇವರಿವರೇ ಹಂಚಿಕೊಂಡರು. ಒಳಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ . ಅದರ ಜಾರಿಗೆ, ಸಂವಿಧಾನದ ಅನುಚ್ಛೇದ 341ಗೆ ತಿದ್ದುಪಡಿ ತರಬೇಕು. ಅದನ್ನು ಮಾಡಿ ಎಂದು ಕೇಳಿದ್ದೇವೆ. ಬಿಜೆಪಿ ಬಿಹಾರದಲ್ಲಿ, ತೆಲಂಗಾಣ ದಲ್ಲಿ ಒಬಿಸಿ ಇಟ್ಟುಕೊಂಡು ಆಟ ಆಡುತ್ತದೆ. ಹೀಗೆ ಹೋದಲ್ಲೆಲ್ಲ ಇದೇ ಆಟ ಆಡು ತ್ತಾರೆ. ಈ ಹಿಂದೆ ಕಲಂ 370, ತ್ರಿಬಲ್ ತಲಾಖ್ ರದ್ದು ಗೊಳಿಸುವಾಗ ಕೇಳಿದರೇ? ಒಳಮೀಸ ಲಾತಿ ವಿಚಾರದಲ್ಲೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ. ಉದಯವಾಣಿ ಸಂದರ್ಶನ: ವಿಜಯ ಕುಮಾರ ಚಂದರಗಿ