Advertisement

CM Race: ನಾನ್ಯಾಕೆ ಸಿಎಂ ಆಗಬಾರದು, ನಾನೂ ಸಿಎಂ ಆಕಾಂಕ್ಷಿ: ಬಸವರಾಜ ರಾಯರೆಡ್ಡಿ

03:14 PM Sep 09, 2024 | Team Udayavani |

ಕೊಪ್ಪಳ: ರಾಜ್ಯದಲ್ಲಿ ಸಿಎಂ ಆಗಲು ಕೆಲವರು ಆಸೆ ಪಡುತ್ತಿದ್ದಾರೆ. ಆಸೆ ಪಡುವುದರಲ್ಲಿ ತಪ್ಪಿಲ್ಲ. ನಾನು ಸಿಎಂ ಆಕಾಂಕ್ಷಿ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಎಲ್ಲಿದೆ? ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಉಳಿದ ಅವಧಿಗೂ ಮುಂದುವರಿಯಲಿದ್ದಾರೆ. ಅವರು ಸಿಎಂ ಆಗಿ ಮುಂದುವರಿಯುವುದರಿಂದ ರಾಜ್ಯಕ್ಕೆ ಒಳ್ಳೆಯದಾಗಲಿದೆ. ನನಗೇನು ಸಿದ್ದರಾಮಯ್ಯ ಅವರಿಂದ ಆಗಬೇಕಾಗಿದ್ದೇನಿಲ್ಲ. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಸಿಎಂ ಪರ ಮಾತನಾಡುತ್ತಿರುವೆ ಎಂದರು.

ಅವರಿಗೆ ಆಡಳಿತದ ಅನುಭವ ಇದೆ. ಆದ್ದರಿಂದ ಅವರೇ ಸಿಎಂ ಆಗಿ ಮುಂದುವರಿಯಲಿ. ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎಂದು ಯಾರು ಹೇಳಿದ್ದಾರೆ? ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂಬುದು ನನ್ನ ಅಭಿಪ್ರಾಯ. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ ಸಿಎಂ ಕುರ್ಚಿ ಖಾಲಿ ಇಲ್ಲ. ಯಾರೂ ಆಸೆ ಪಡುವ ಅವಶ್ಯಕತೆ ಇಲ್ಲ ಎಂದರು.

ದೇಶಪಾಂಡೆ ಅವರು ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಸಹಿತ ಸಿದ್ದರಾಮಯ್ಯ ಸಲಹೆ ನೀಡಿದರೆ ಸಿಎಂ ಆಗುವುದಾಗಿ ಹೇಳುದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಇನ್ನು ಸತೀಶ್ ಜಾರಕಿಹೊಳಿ, ಎಂ.ಬಿ‌.ಪಾಟೀಲ್ ಹೇಳಿಕೆಯೂ ತಪ್ಪಿಲ್ಲ. ಯಾರೂ ಬೇಕಾದರೂ ಸಿಎಂ ಆಗಬಹುದು. ಈಗ ನಾನು ಇದ್ದೇನೆ. ನಾನೇಕೆ ಸಿಎಂ ಆಗಬಾರದು. ನಾನು ಸಹಿತ 1985 ರಿಂದ ಶಾಸಕನಾಗಿದ್ದೇ‌ನೆ. ಲಿಂಗಾಯತ ಸಮುದಾಯದ ಹಿರಿಯ ನಾಯಕನಾಗಿದ್ದೇನೆ. ಬಿ.ಆರ್. ಪಾಟೀಲ್ ಹೊರತು ಪಡಿಸಿದರೆ ನಾನೇ ಸಮುದಾಯ ಹಿರಿಯ ಶಾಸಕನಾಗಿದ್ದೇನೆ. ನಾನು ಅತಿ ಹೆಚ್ಚು ಚುನಾವಣೆಯಲ್ಲಿ ಗೆದ್ದಿದ್ದೇನೆ. ನಾನು ಸಿಎಂ ಆಗಬಾರದು ಎಂದೇನಿಲ್ಲ‌ ಹೈ.ಕ. ಭಾಗದಲ್ಲಿ ಹೆಚ್ಚು ಬಾರಿ ಗೆದ್ದಿರುವ ವ್ಯಕ್ತಿಯಾಗಿದ್ದೇನೆ. ಪಕ್ಷ ಒಂದು ವೇಳೆ ಜಾತಿವಾರು ಪರಿಗಣಿಸಿದರೆ ಅಥವಾ ಹಿರಿತನ ಪರಿಗಣಿಸಿದರೆ ನನ್ನನ್ನು ಸಿಎಂ ಅಭ್ಯರ್ಥಿಯಾಗಿ ಪರಿಗಣಿಸಿ ಎಂದು ಮನವಿ ಮಾಡುವೆ ಎಂದು ತಿಳಿಸಿದರು.

ಒಕ್ಕಲಿಗರಿಗೆ ಆದ್ಯತೆ ನೀಡಿದರೆ ಡಿ.ಕೆ. ಶಿವಕುಮಾರ್ ಹಾಗೂ ಜಯಚಂದ್ರ ಅವರು ಕೂಡ ಸಿಎಂ ರೇಸ್ ನಲ್ಲಿ ಇದ್ದಾರೆ. ಮುನ್ನಲೆಯ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರಾಗಿದ್ದು, ಅವರು ಪ್ರಧಾನಮಂತ್ರಿ ಆಗಲಿ ಎಂಬುದು ನನ್ನ ಅಭಿಲಾಷೆ. ರಾಹುಲ್ ಗಾಂಧಿ ಅವರು ಪಿಎಂ ಆಗಬಾರದು ಎಂದಿಲ್ಲ. ಇದು ನನ್ನ ವೈಯಕ್ತಿಕ ಅಭಿಲಾಷೆಯಾಗಿದೆ. ಹೈ‌.ಕ ಭಾಗಕ್ಕೆ ಸಿಎಂ ಸ್ಥಾನ ನೀಡುವುದಾದರೆ ಹಾಗೂ ಲಿಂಗಾಯತ ಸಮುದಾಯಕ್ಕೆ ನೀಡುವುದಾದರೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದರು.

Advertisement

ಸಿದ್ದರಾಮಯ್ಯ ಮೂರುವರೆ ವರ್ಷ ಸಿಎಂ ಆಗಿರುತ್ತಾರೆ‌. ಯಾವುದೇ ಕಾರಣಕ್ಕೂ ಬದಲಾವಣೆ ಆಗಲ್ಲ. ಒಂದು ವೇಳೆ ಪಕ್ಷ ತೀರ್ಮಾನಿಸಿದರೆ ನಾನು ಆಕಾಂಕ್ಷಿ. ನಾನು ಸಿಎಂ ಕುರ್ಚಿಗೆ ಆಸೆ ಪಡುತ್ತಿದ್ದೇನೆ. ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸಿದರೆ ಜತೆಗೆ ಸಿದ್ದರಾಮಯ್ಯ ಆಶೀರ್ವಾದ ಮಾಡಿದರೆ ಸಿಎಂ ಆಗುವೆ. ಯಾವಾಗ ಯಾವ ಸಂದರ್ಭದಲ್ಲಿ ಹಾಗೂ ಪ್ರಜಾಪ್ರಭುತ್ವ ಯಾರಿಗೆ ಏನ್ ಲಕ್ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಮೋದಿಯವರು ಪ್ರಧಾನಿಯಾಗುತ್ತಾರೆಂದು ಗೊತ್ತಿತ್ತಾ?. ಯಾರು ಏನು ಬೇಕಾದರೂ ಆಗಬಹುದು ಎಂದು ತಿಳಿಸಿದರು.

ಸಿಎಂ ಬದಲಾವಣೆ ಚರ್ಚೆ ಹಾಗೂ ನ್ಯಾಯಾಲಯದಲ್ಲಿ ತೀರ್ಪು ಹೀಗಾಗುತ್ತೇ? ಹಾಗಾಗುತ್ತದೆ ಎಂದು ಊಹೆ ಮಾಡಿಕೊಂಡು ಸಂತೋಷ ಪಟ್ಟುಕೊಳ್ಳಲು ಚರ್ಚೆ ನಡೆಯುತ್ತಿದೆ. ನನಗೆ ಲಾಟರಿ ಹೊಡೆದರೆ ನಾನು ಸಿಎಂ ಆಗುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next