Advertisement

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಉಡುಪಿಯನ್ನೇ ಆಯ್ಕೆ ಮಾಡಿದ್ದು ಏಕೆ: ಸಿ.ಟಿ.ರವಿ

05:49 PM Apr 15, 2022 | Team Udayavani |

ವಿಜಯಪುರ: ಸಂತೋಷ್ ಪಾಟೀಲ್ ಸಾವಿನ ಸುತ್ತ ಒಂದು ಅನುಮಾನದ ಹುತ್ತ ಬೆಳದಿದ್ದು, ತನಿಖೆಯ ನಂತರ ಸತ್ಯ ಹೊರಗೆ ಬರಲಿದೆ. ಆತ್ಮಹತ್ಯೆಗೆ ಉಡುಪಿ ನಗರವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದು ಬಹಿರಂಗ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ”ನೀತಿ, ನಿಯತ್ತು ಹೊಂದಿರುವ ಬಿಜೆಪಿ ಪಕ್ಷವನ್ನೇ ರಾಜ್ಯದ ಜನರು ಮತ್ತೊಮ್ಮೆ ಬೆಂಬಲಿಸುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿ,”ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದ್ದಾರೆ. ಸಿದ್ಧರಾಮಯ್ಯ, ಡಿಕೆಶಿ ಸೇರಿದಂತೆ ಹಲವರು ನಾವೇ ಬರುತ್ತವೆ, ನಾನೇ ಮುಖ್ಯಮಂತ್ರಿ ಅಂತಾ ಕೂಗಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವೇ ಅಧಿಕಾರಕ್ಕೆ ಬರುವುದು ಖಚಿತ” ಎಂದು ಕುಟುಕಿದರು.

ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮೇಲೆ ಅರೋಪ ಬಂದಾಗ ಅವರು ರಾಜಿನಾಮೆ ನೀಡಿದ್ದರು ಎಂದು ಸ್ಮರಿಸಿದರು.

ಉಡುಪಿಯಲ್ಲಿ ಸಂತೋಷ ಸಂತೋಷದಿಂದಲೇ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಿದ್ದಾನೆ. ಲಾಡ್ಜ್ ನಲ್ಲಿ ಅವನೊಂದು ರೂಂನಲ್ಲಿ, ಉಳಿದವರು ಬೇರೆ ರೂಂ ನಲ್ಲಿ ಇದ್ದದ್ದು ಏಕೆ. ಹೀಗೆ ಸಾವಿನ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರವನ್ನ ಹೆಮ್ಮರವನ್ನಾಗಿ ಮಾಡಿದ್ದು ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಗುತ್ತಿಗೆದಾರ ಕೆಂಪಣ್ಣ ಹೇಳಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಶೇ.40% ಕೊಟ್ಟು, ಯಾವುದೇ ಕಾಮಗಾರಿ ಮಾಡುವುದು ಅಸಾಧ್ಯ. ಕೆಂಪಣ್ಣ ಮಾಡಿರುವ ಆರೋಪ ಯಾರೋ ಪ್ರಚೋದಿಸಿರುವುದು ಸ್ಪಷ್ಟವಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ : ಪೂಜೆ ವೇಳೆ ಬಲ ಭಾಗಕ್ಕೆ ಜಾರಿಬಿದ್ದ ಹೂವು: ಈಶ್ವರಪ್ಪ ಅವರಿಗೆ ಶುಭ ಸೂಚನೆ?

ಕಾಂಗ್ರೆಸ್ ಪ್ರಚೋದನೆಯಿಂದ ಗುತ್ತಿಗೆದಾರರು ಕೇವಲ ಆರೋಪ ಮಾಡುತ್ತಿದ್ದಾರೆ. ಭ್ರಷ್ಚಾಚಾರದ ಆರೋಪ ಮಾಡಿರುವುದಕ್ಕೆ ನಿಖರವಾಗಿ ಯಾವುದೇ ದಾಖಲಾತಿ ನೀಡಿಲ್ಲ. ಆದ್ದರಿಂದ ಅವರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದರು.

ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿದ್ದ ಡಿ.ಕೆ.ಶಿವಕುಮಾರ್ ನೈಜವಾಗಿ ಪ್ರಾಮಾಣಿಕತೆ ಹೊಂದಿದ್ದರೆ ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದು ಏಕೆ. ಭೂತದ ಬಾಯಲ್ಲಿ ಭಗ್ವದ್ಗಿತೆ ಬಂದ ಹಾಗೆ ಕಾಂಗ್ರೆಸ್ ನವರ ಬಾಯಲ್ಲಿ ಭ್ರಷ್ಟಾಚಾರದ ಮಾತು ಬರುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಜಾರಕಿಹೊಳೆ ಅವರು ಸ್ಥಳೀಯರು ಅವರ ಬಳಿ ಮಾಹಿತಿ ಇರಬೇಕು.ಅವರು ಹೇಳಿರೋದು ಸರಿ ಇರಬಹುದು. ಕೋಟಿ ಕೋಟಿ ಕೆಲಸವನ್ನ ಯಾವುದೇ ವರ್ಕ್ ಆರ್ಡರ್ ಇಲ್ಲದೆ ಹೇಗೆ ಮಾಡಿದರು ಎಂಬುದು ಬಹಿರಂಗವಾಗಬೇಕು.ಕಾರಣ ಸಂಪೂರ್ಣ ತನಿಖೆ ಆಗಬೇಕು ಎಂದರು.

ಬಿಜೆಪಿ ಕೋಮುವಾದ ರಾಜಕಾರಣ ಮಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯಾವುದೇ ಯೋಜನೆಗಳು ಜಾತಿ ಆಧಾರಿತವಾಗಿ ಜಾರಿಗೊಳಿಸಿಲ್ಲ ಎಂದು ಸಮಜಾಯಿಸಿ ನೀಡಿದರು.

ಸಿದ್ಧರಾಮಯ್ಯ ಶಾದಿ ಭಾಗ್ಯ ತಂದಿದ್ದು, ಆದರೂ ತಮ್ಮನ್ನು ಜಾತ್ಯಾತೀತರು ಎಂದು‌ ಹೇಳಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮಾತ್ರ ಕೋಮುವಾದಿಗಳು ಎಂದು ದೂರುತ್ತಾರೆ ಎಂದು ಟೀಕಿಸಿದರು.

ಬೆಲೆ ಏರಿಕೆ ಪರಿಣಾಮ ರಾಜ್ಯದ ಚುನಾವಣೆ ಮೇಲೆ ಬೀಳುತ್ತದೆ.ಆದರೆ ಬಿಜೆಪಿ ಪಕ್ಷದ ಮೇಲಲ್ಲ.ಬೆಲೆ ಏರಿಕೆಗೆ ಕಾರಣ ಚೈನಾ ವೈರಸ್, ರಷ್ಯಾ ಮತ್ತು ಉಕ್ರೇನ್ ಯುದ್ದ ಕಾರಣ. ಬೆಲೆ ಏರಿಕೆ ಆಗಿದ್ದು ಹೇಗೆ ಎಂದು ಅರಿತವರು ಬಿಜೆಪಿಗೆ ವಿರೋಧ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡರು.

ದೂರ ದೃಷ್ಟಿಯ ಯೋಜನೆಗಳನ್ನ ಮೋದಿ ಹಾಕಿದ್ದಾರೆ. ಜಗತ್ತು ಆರ್ಥಿಕವಾಗಿ ಕುಗ್ಗಿ ಹೋಗಿದ್ದರೂ. ಜಗತ್ತಿನಲ್ಲೇ ಭಾರತ ಮಾತ್ರವೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಉಚಿತ ವ್ಯಾಕ್ಸಿನೇಷನ್ ಮಾಡಿಸಿದ್ದು ಎಂಬುದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next