Advertisement

ಏಕೆ ರಾಜೀನಾಮೆ?

02:11 AM Jul 09, 2019 | Sriram |

ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು ಮಾಡಬೇಕು?

Advertisement

ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಒಂದು ಕುತೂಹಲ. ಎಲ್ಲವೂ ಅನುಕೂಲ ಶಾಸ್ತ್ರ ಅಥವಾ ಒಬ್ಬರಿಗೆ ಸರಿಕಾಣುವುದು ಮತ್ತೂಬ್ಬರಿಗೆ ಸರಿಕಾಣುವುದಿಲ್ಲ. ಆದರೆ ಜನಸಾಮಾನ್ಯರು ಮಾತ್ರ ಇಲ್ಲಿ ನಡೆಯುತ್ತಿರುವುದೆಲ್ಲವೂ ನಮ್ಮ ಹಿತಾಸಕ್ತಿಗೆ ಮಾರಕ ಎನ್ನುತ್ತಿದ್ದಾರೆ.

ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು ಮಾಡಬೇಕು? ಇವರನ್ನು ಆರಿಸಿ ಕಳುಹಿಸಿದ ತಪ್ಪಿಗೆ ಜನರೇ ನಾಚಿಕೆ ಪಡಬೇಕಷ್ಟೆ.

ಅಧಿಕಾರ ಸಿಗಲಿಲ್ಲ ಎನ್ನುವ ಕಾರಣವೇ ಪ್ರಮುಖವಾಗಿ ಹಪಾಹಪಿಸುತ್ತಿದ್ದಾರೆ. ಅಧಿಕಾರವೇ ಪ್ರಮುಖವಾಗಿದ್ದರೆ ಅಥವಾ ಅದು ಶಾಶ್ವತವಾಗಿರುತ್ತಿದ್ದರೆ ಬೇರೇಯೇ ಮಾತು, ಅಧಿಕಾರ ಯಾವ ಕಾರಣಕ್ಕೆ ಬೇಕು ಎನ್ನುವುದೇ ಗೊತ್ತಿಲ್ಲದವರು ಈಗ ಹೊಸ ವರಸೆ ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ ಅನ್ನಿಸುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಒಂದು ನೀತಿ ಇರುತ್ತದೆ, ಸಿದ್ಧಾಂತವಿರುತ್ತದೆ. ನಾವು ಈ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ ಎಂದು ಮಾತುಕೊಟ್ಟು ಇದೀಗ ಮಾತಿಗೆ ತಪ್ಪುತ್ತಿದ್ದಾರಲ್ಲವೇ?

Advertisement

ಯುವಕರು ರಾಜಕೀಯಕ್ಕೆ ಬರಬೇಕು, ಈ ದೇಶದ ಜನರ ಸಮಸ್ಯೆ ದೂರಾಗಬೇಕು ಎನ್ನುವ ಉದ್ದೇಶವೊಂದಿತ್ತು. ವಿದ್ಯಾವಂತರು ರಾಜಕೀಯ ಪ್ರವೇಶಿಸಿದರೆ ಈ ದೇಶದ ಚಿತ್ರಣವೇ ಬದಲಾಗುತ್ತದೆ ಎನ್ನುವ ಕಲ್ಪನೆಯಿತ್ತು. ಅವೆಲ್ಲ ಈಗ ಹುಸಿಯಾಗಿವೆ. ಸಮಸ್ಯೆಗಳು ಬೆಟ್ಟದಷ್ಟಿದ್ದು ದಿನ ಕಳೆದಂತೆ ಅವು ಬೆಳೆಯುತ್ತಿವೆ. ಬಡತನ, ವಸತಿ ಸಮಸ್ಯೆ, ಕುಡಿಯುವ ನೀರಿಗೆ ಹಾಹಾಕಾರ, ಉದ್ಯೋಗ ಸಮಸ್ಯೆಗಳು ಒಂದೇ ಎರಡೇ… ಈ ಸಮಸ್ಯೆಗಳು ನಮ್ಮಿಂದ ಮತಪಡೆದು ಹೋದ ಮಂದಿಗೆ ಅರಿವಿಲ್ಲವೇ? ಅಥವಾ ಅರಿವಿದ್ದರೂ ಅವು ಮುಖ್ಯವಲ್ಲ ಅಂದುಕೊಂಡಿದ್ದಾರೆಯೇ ? ಇಂಥ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ. ತನಗೆ ಮಂತ್ರಿ ಹುದ್ದೆ ಸಿಗಬೇಕು, ತಾನು ಅಧಿಕಾರ ನಡೆಸಬೇಕು ಎನ್ನುವುದು ತಪ್ಪು ಎಂದರ್ಥವಲ್ಲ. ಆದರೆ ಅಧಿಕಾರ ಸಿಗಬೇಕು, ಅದು ಜನಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸಬೇಕು ನಿಜ, ಎಷ್ಟು ಸಮಸ್ಯೆಗಳನ್ನು ನಿವಾರಿಸಿದ್ದಾರೆ? ಎಷ್ಟು ಜನಸಾಮಾನ್ಯರ ಬವಣೆಗಳಿಗೆ ಪರಿಹಾರ ಹುಡುಕಿದ್ದಾರೆ? ಎಷ್ಟು ದಿನ ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ?

ಸಾಲು ಸಾಲು ಸವಾಲುಗಳು ಹುಟ್ಟಿಕೊಂಡು ಜನಸಾಮಾನ್ಯರನ್ನು ಕಾಡುತ್ತಿವೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ತಮ್ಮ ಹುದ್ದೆಯ ಮೇಲೆ ಕಣ್ಣಿಟ್ಟು ಅದನ್ನು ಪಡೆಯಲು ಶತಾಯಗತಾಯ ಹೋರಾಟ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ ಅಥವಾ ಒಬ್ಬರ ಪ್ರಶ್ನೆಯಲ್ಲ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರೂ ಪಕ್ಷಗಳೂ ಅವುಗಳ ಮೂಲಕ ಆಯ್ಕೆಯಾಗಿರುವ ಶಾಸಕರೂ ಸಮಾನರು. ಹಿಂದೆಯೂ ಶಾಸಕರ ರಾಜೀನಾಮೆ ಪ್ರಕರಣಗಳಿದ್ದವು. ಆದರೆ ಇಷ್ಟು ಲಜ್ಜೆಗೇಡಿತನವಿರಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೀರಾವರಿ ಮಂತ್ರಿಯಾಗಿದ್ದ ದೇವೇಗೌಡರು ರೈತರ ನೀರಾವರಿಗೆ ಬಜೆಟ್‌ನಲ್ಲಿ ನೀಡಿದ ಹಣ ಕಡಿಮೆಯಾಯಿತು ಎನ್ನುವ ಕಾರಣ ನೀಡಿ ರಾಜೀನಾಮೆ ಕೊಟ್ಟಿದ್ದರು.

ರಾಮಕೃಷ್ಣ ಹೆಗಡೆಯವರು ಅಪವಾದಕ್ಕೆ ಒಳಗಾಗಿ ಅದು ಇತ್ಯರ್ಥವಾಗುವ ತನಕ ಮುಖ್ಯಮಂತ್ರಿ ಹುದ್ದೆಯೇ ಬೇಡವೆಂದು ರಾಜೀನಾಮೆ ಕೊಟ್ಟಿದ್ದರು. ಈ ಘಟನೆಗಳು ಎರಡು ಉದಾಹರಣೆ ಮಾತ್ರ. ಇಂಥ ಹತ್ತು ಹಲವು ಉದಾಹರಣೆಗಳಿವೆ.

ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿ ರಾಜೀನಾಮೆ ಕೊಡಿ. ಅದನ್ನು ಜನ ಸಹಿಸಿಕೊಳ್ಳುತ್ತಾರೆ. ಹುದ್ದೆ ಸಿಕ್ಕಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ರಾಜೀನಾಮೆ ಕೊಟ್ಟು ಏನನ್ನು ಸಾಧಿಸುತ್ತೀರಿ?

ನಮ್ಮ ರಾಜಕೀಯ ಪರಂಪರೆ ದೊಡ್ಡದು, ಅದಕ್ಕೆ ಅದರದ್ದೇ ಆದ ಘನತೆ ಇದೆ. ಈ ಘನತೆಯನ್ನು ಕಡಿಮೆ ಮಾಡಬೇಡಿ. ನೀವು ರಾಜೀನಾಮೆ ಕೊಟ್ಟರೆ ಹೊಸದಾಗಿ ಚುನಾವಣೆ ನಡೆಯಬೇಕು, ಕೋಟ್ಯಂತರ ಹಣ ಖರ್ಚು ಮಾಡಬೇಕು. ಇದನ್ನು ನೀವು ಭರಿಸುತ್ತೀರಾ? ಜನಸಾಮಾನ್ಯರ ತಲೆಗೆ ಹೊರೆ ಬೀಳುತ್ತದೆ. ಈಗಲೇ ಪ್ರತಿಯೊಬ್ಬರ ತಲೆ ಮೇಲೆ ಎಷ್ಟು ಹೊರೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ.

-ಚಿದಂಬರ ಬೈಕಂಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next