ಲಕ್ನೋ/ಅಯೋಧ್ಯೆ:ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಆಗಸ್ಟ್ 05-2020) ರಾಮಮಂದಿರ ನಿರ್ಮಾಣಕ್ಕಾಗಿ ಪೂಜೆ ಪೂಜೆ ಸಲ್ಲಿಸಲು ಅಯೋಧ್ಯೆಗೆ ಆಗಮಿಸಿದ ಬಳಿಕ ಅವರು ಮೊದಲು ಹನುಮಾನ್ ಗಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಪ್ರಧಾನಿ ಮೋದಿ ಅವರು ಸಿಲ್ಕ್ ಕುರ್ತಾ ಮತ್ತು ಧೋತಿ ಧರಿಸಿದ್ದರು. ಹನುಮಾನ್ ಗಡಿಗೆ ಬಂದ ಪ್ರಧಾನಿ ಮೋದಿ ಅವರು ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಸಲ್ಲಿಸಿದ್ದರು. ಈ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜತೆಗಿದ್ದರು ಕೂಡಾ ತುಂಬಾ ಅಂತರ ಕಾಯ್ದುಕೊಂಡಿದ್ದರು ಎಂದು ವರದಿ ತಿಳಿಸಿದೆ.
ಸುಮಾರು 15 ನಿಮಿಷಗಳ ಕಾಲ ಹನುಮಾನ್ ಗುಡಿಯಲ್ಲಿ ಕಳೆದ ನಂತರ ಪ್ರಧಾನಿ ಅವರು ಭೂಮಿ ಪೂಜೆಗಾಗಿ ನಡೆಯಲಿರುವ ಪೂಜಾ ವಿಧಿಯಲ್ಲಿ ಭಾಗಿಯಾಗಲು ತೆರಳಿದ್ದರು. ಪ್ರಧಾನಿ ಮೋದಿ ಅವರು ಮೊದಲು ಹನುಮಾನ್ ಗಡಿಗೆ ಭೇಟಿ ನೀಡಿದ್ದು ಯಾಕೆ ಎಂಬ ಬಗ್ಗೆ ಹನುಮಾನ್ ಗಡಿ ಪುರೋಹಿತ ರಾಜು ದಾಸ್ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಬೇರೆ ಯಾವುದೇ ಕಾರ್ಯ ಇರಲಿ ಮೊದಲು ಅವರು ಹನುಮಾನ್ ದೇವಸ್ಥಾನಕ್ಕೆ ಆದ್ಯತೆ ನೀಡಿ ಭೇಟಿ ಕೊಟ್ಟಿದ್ದಾರೆ. ಭಗವಾನ್ ಹನುಮಾನ್ ಅವರ ಆಶೀರ್ವಾದ ಇಲ್ಲದೇ ಯಾವುದೇ ಕೆಲಸ ಆಗಲಾರದು. ಆತ ರಾಮನ ಪರಮ ಭಕ್ತ ಎಂಬುದನ್ನು ಮರೆಯಬಾರದು.
76 ಮೆಟ್ಟಿಗಳನ್ನು ಹತ್ತಿ ಹನುಮಾನ್ ಗಡಿಗೆ ತಲುಪಬೇಕು. ಉತ್ತರಭಾರತದಲ್ಲಿ ಇರುವ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಹನುಮಾನ್ ದೇವಾಲಯ ಕೂಡಾ ಒಂದಾಗಿದೆ. ಈ ಆವರಣದಲ್ಲಿ ಹನುಮಂತನ ತಾಯಿ ಅಂಜನಾ ದೇವಿಯ ಗುಡಿಯೂ ಇದೆ, ಇಲ್ಲಿ ಬಾಲ ಹನುಮ ತಾಯಿಯ ತೊಡೆಯ ಮೇಲೆ ಕುಳಿತಿರುವ ವಿಗ್ರಹ ಇದೆ ಎಂದು ವರದಿ ತಿಳಿಸಿದೆ.