ಬೆಂಗಳೂರು: ನನಗೆ ಮಾತ್ರ ನೋಟಿಸ್ ಕೊಟ್ಟು ಉಳಿದವರಿಗೆ ಯಾಕೆ ಕೊಟ್ಟಿಲ್ಲ? ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದು ನನಗೆ ಗೊತ್ತಾಗಿದ್ದೇ ನೋಟಿಸ್ ಬಂದ ಮೇಲೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ರಾಜ್ಯ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನೋಟಿಸ್‌ಗೆ ಹೆದರಿ ಬಾಯಿ ಮುಚ್ಚಿಕೊಂಡು ಸುಮ್ಮನಿರುತ್ತೇನೆ ಎಂದುಕೊಂಡರೆ ಅದು ಅವರ ಭ್ರಮೆ ಎಂದು ತಿರುಗೇಟು ನೀಡಿದರು.
ನಾನು ಯಾರಿಗೂ ಹೆದರುವವನಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷದಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಮಾಧ್ಯಮದ ಮುಂದೆ ಹೇಳಿದ್ದೇನೆ. ನನಗೆ ಮಾತ್ರ ನೋಟಿಸ್ ಕೊಟ್ಟಿರುವ ಉದ್ದೇಶವಾದರೂ ಏನು? ಉಳಿದವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದಕ್ಕೆ ನನ್ನನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷರು 11 ಮಂದಿಗೆ ನೋಟಿಸ್ ನೀಡಿದ್ದೇವೆಂದ ಬಳಿಕ ರವಿಕುಮಾರ್ ನನ್ನೊಬ್ಬನಿಗೆ ನೋಟಿಸ್ ಕೊಟ್ಟಿದ್ದೇವೆಂದು ಹೇಳುವುದರ ಮರ್ಮವೇನೆಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದು ಯಡಿಯೂರಪ್ಪ. ಅವರೊಬ್ಬ ಅಗ್ರಮಾನ್ಯ ನಾಯಕ. ಸೈಕಲ್ ಹೊಡೆದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಅಂಥವರನ್ನು ಷಡ್ಯಂತ್ರ ಮಾಡಿ ಅವಮಾನಿಸಿ ಅಗೌರವವಾಗಿ ನಡೆಸಿಕೊಂಡು ಅಧಿಕಾರದಿಂದ ಕೆಳಗಿಳಿಸಿದರು. ಯಡಿಯೂರಪ್ಪ ನಮ್ಮ ನಾಯಕರು. ನನ್ನ ಮೂಲಕ ಹೇಳಿಕೆ ಕೊಟ್ಟಿದ್ದಾರೆಂದು ಕೆಲವರು ಮಾತನಾಡುತ್ತಾರೆ. ಅಂತಹ ಕೀಳುಮಟ್ಟದ ರಾಜಕಾರಣ ಅವರೆಂದೂ ಮಾಡಿಲ್ಲ. ಅವಮಾನ ಮಾಡಿದರೂ ಗೌರವದಿಂದ ರಾಜೀನಾಮೆ ಕೊಟ್ಟರು ಎಂದು ಹೇಳಿದರು.
ಹೊಂದಾಣಿಕೆ ರಾಜಕಾರಣದ ಬಗ್ಗೆ ಸಂಸದರು ಮರು ಮಾತನಾಡಿದ್ದಾರೆ. ಮೈಸೂರಿನಲ್ಲಿ ಇದೇ ಸಂಸದರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿರುವುದು ಗೊತ್ತಿಲ್ಲವೇ ಎಂದು ಸಂಸದ ಪ್ರತಾಪಸಿಂಹ ವಿರುದ್ಧವೂ ವಾಗ್ಧಾಳಿ ನಡೆಸಿದರು.
ನಾನು ಶೀಘ್ರದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಇಲ್ಲಿನ ವಸ್ತುಸ್ಥಿತಿ ಬಗ್ಗೆ ವಿವರಣೆ ನೀಡುತ್ತೇನೆ. ಯಾರಿಗೂ ಹೆದರಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ . ಇನ್ನುಮುಂದೆ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆಗಳನ್ನು ಕೊಡಬಾರದು ಎಂದು ನಮ್ಮ ನಾಯಕರಾದ ಯಡಿಯೂರಪ್ಪನವರು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಡುತ್ತೇನೆಂದು ಹೇಳಿದರು.
ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನಗೆ ಮೋದಿ ಮತ್ತು ಯಡಿಯೂರಪ್ಪ ಹಾಗೂ ಕ್ಷೇತ್ರದ ಜನತೆಯ ಆಶೀರ್ವಾದವಿದೆ. ನನ್ನನ್ನು ಬಲಿಪಶು ಮಾಡುವುದು ಇಲ್ಲವೇ ಗುರಿ ಮಾಡುವುದು ಕನಸಿನ ಮಾತು. ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.