Advertisement

ದಸರೆಗಿಲ್ಲದ ಬರ ಹಂಪಿ ಉತ್ಸವಕ್ಕೆ ಏಕೆ?

06:00 AM Dec 02, 2018 | |

ಬೆಂಗಳೂರು: ಐತಿಹಾಸಿಕ ಹಂಪಿ ಉತ್ಸವವನ್ನು ಬರಗಾಲದ ಕಾರಣಕ್ಕೆ ರದ್ದು ಮಾಡಿರುವುದು ಆ ಭಾಗದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಸಮ್ಮಿಶ್ರ  ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಸರ್ಕಾರದ ಈ ಕ್ರಮ ಅದಕ್ಕೆ ಪುಷ್ಠಿ ನೀಡುವಂತಿದೆ.

Advertisement

ರಾಜ್ಯ ಸರ್ಕಾರ ಪ್ರತಿ ವರ್ಷ ಐತಿಹಾಸಿ ಮತ್ತು ಸಾಂಸ್ಕೃತಿಕ ಮಹತ್ವ ಪಡೆದಿರುವ ಹದಿನಾರು ಉತ್ಸವಗಳನ್ನು ಆಚರಿಸುತ್ತದೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿಯೊಂದು ಉತ್ಸವಕ್ಕೂ ಅನುದಾನವನ್ನು ಮೀಸಲಿಟ್ಟಿದ್ದು, ನಿಯಮದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ.

ರಾಜ್ಯ ಸರ್ಕಾರ ಪ್ರಮುಖವಾಗಿ ಮೈಸೂರು ದಸರಾ, ಬಳ್ಳಾರಿ ಹಂಪಿ ಉತ್ಸವ, ಉತ್ತರ ಕನ್ನಡ ಕದಂಬ, ಕರಾವಳಿ ಉತ್ಸವ, ಬಾಗಲಕೋಟೆ ರನ್ನ ವೈಭವ, ಚಾಲುಕ್ಯ ಉತ್ಸವ, ಹಾಸನದ ಹೊಯ್ಸಳ ಉತ್ಸವ,  ಧಾರವಾಡ ಉತ್ಸವ, ಗದಗ ಲಕ್ಕುಂಡಿ ಉತ್ಸವ, ಬೆಳಗಾವಿಯ  ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ, ಸಂಗೊಳ್ಳಿ ರಾಯಣ್ಣ ಉತ್ಸವ, ಬೀದರ್‌ ಬಸವಕಲ್ಯಾಣದ ಬಸವ ಉತ್ಸವ, ವಿಜಯಪುರದ ನವರಸಪುರ ಉತ್ಸವ, ಉಲ್ಲಾಳದ ವೀರರಾಣಿ ಅಬ್ಬಕ್ಕ ಉತ್ಸವ, ಕೊಪ್ಪಳದ ಆನೆಗೊಂದಿ ಉತ್ಸವ, ಚಾಮರಾಜನಗರದ ಭರಚುಕ್ಕಿ ಜಲಪಾತೋತ್ಸವ, ಮಂಡ್ಯದ ಗಗನಚುಕ್ಕಿ, ಶಿಂಶಾ ಜಲಪಾತೋತ್ಸವ, ದಕ್ಷಿಣ ಕನ್ನಡ ಕರಾವಳಿ ಉತ್ಸವ, ಕಲಬುರಗಿ ರಾಷ್ಟ್ರಕೂಟರ ಉತ್ಸವ  ಸೇರಿ ರಾಜ್ಯ ಸರ್ಕಾರ ಹದಿನಾರು ಉತ್ಸವಗಳನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಮಾಡಲಾಗುತ್ತದೆ.

ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಕದಂಬ ಉತ್ಸವ ರಾಜ್ಯ ಮಟ್ಟದ ಉತ್ಸವಗಳಾಗಿದ್ದು, ಉಳಿದ ಉತ್ಸವಗಳು ಪ್ರಾದೇಶಿಕ ಹಾಗೂ ಜಿಲ್ಲಾ ವ್ಯಾಪ್ತಿಗೆ ಸೀಮಿತವಾಗಿವೆ. ಈ ವರ್ಷದ ಉತ್ಸವಗಳಲ್ಲಿ ಮೈಸೂರು ದಸರಾ ಹಾಗೂ ಕಿತ್ತೂರು ಉತ್ಸವಗಳನ್ನು  ಆಚರಿಸಲಾಗಿದ್ದು, ಉಳಿದ ಉತ್ಸವಗಳು ಡಿಸೆಂಬರ್‌ನಿಂದ ಮಾರ್ಚ್‌ವರೆಗೂ ಆಯಾ ಜಿಲ್ಲೆಯ ಆಡಳಿತ ವ್ಯವಸ್ಥೆಯ ಅನುಕೂಲಕ್ಕೆ ತಕ್ಕಂತೆ ಆಚರಿಸಲಾಗುತ್ತದೆ.

ಮೈಸೂರು ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ 14 ಕೋಟಿ ರೂಪಾಯಿ ನೀಡಿದೆ. ಹಂಪಿ ಉತ್ಸವಕ್ಕೆ ವಾರ್ಷಿಕ 60 ಲಕ್ಷ ರೂಪಾಯಿ ನೀಡಲಾಗುತ್ತಿದ್ದು, ಉಳಿದ ಪ್ರತಿಯೊಂದು ಉತ್ಸವಗಳಿಗೆ ಸಂಸ್ಕೃತಿ ಇಲಾಖೆಯಿಂದ 30 ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ವರ್ಷದ ಹಂಪಿ ಉತ್ಸವಕ್ಕೆ ಈಗಾಗಲೇ 30 ಲಕ್ಷ ರೂ. ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿದೆ. ಉತ್ಸವದ ಸಂದರ್ಭದಲ್ಲಿ ಉಳಿದ ಹಣವನ್ನು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಮುಂಚಿತವಾಗಿ ಹಣ ಬಿಡುಗಡೆ ಮಾಡಿ ಉತ್ಸವಕ್ಕೆ ದಿನಾಂಕ ನಿಗದಿ ಮಾಡಿದ ಮೇಲೆ ಬರಗಾಲದ ನೆಪ ಹೇಳಿ ಮುಂದೂಡಿರುವುದು ಉತ್ತರ ಕರ್ನಾಟಕ ಭಾಗದ ಕಲಾವಿದರು ಹಾಗೂ  ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹೊಯ್ಸಳ, ರಾಣಿ ಅಬ್ಬಕ್ಕ ಹಾಗೂ ಭರಚುಕ್ಕಿ, ಗಗನಚುಕ್ಕಿ ಉತ್ಸವಗಳನ್ನು ಹೊರತು ಪಡಿಸಿದರೆ ಎಲ್ಲ ಉತ್ಸವಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ನಡೆಯಲಿವೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್‌ 8 ರಿಂದ ಮೂರು ದಿನ ಕರಾವಳಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಜನವರಿಯಲ್ಲಿ ಕದಂಬ ಉತ್ಸವ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗ ರಾಜ್ಯ ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಆಚರಣೆ ರದ್ದು ಪಡೆಸಿದ್ದು, ಮುಂದೆ ನಡೆಯುವ ಉಳಿದ ಉತ್ಸವಗಳ ಆಚರಣೆಗಳ ಮೇಲೂ ರದ್ದಾಗುವ ಕಾರ್ಮೋಡ ಕವಿದಂತಾಗಿದೆ.

ಸರಿಯಾದ ನೀತಿ ಇಲ್ಲದಿರುವುದು ಕಾರಣ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಉತ್ಸವಗಳನ್ನು ಆಚರಿಸಲು ಸರಿಯಾದ ನೀತಿ ಅನುಸರಿಸದೆ  ಜಿಲ್ಲಾಡಳಿತಗಳಿಗೆ ಅನುದಾನ ಬಿಡುಗಡೆ ಮಾಡಿ ಕೈತೊಳೆದುಕೊಳ್ಳುತ್ತಿರುವುದರಿಂದ ಜಿಲ್ಲಾಡಳಿತಗಳು ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತವೆ. ಹೀಗಾಗಿ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ ಉತ್ಸವಗಳು ಸರಿಯಾಗಿ ಆಚರಣೆಯಾಗದೇ ಅರ್ಥ ಕಳೆದುಕೊಳ್ಳುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಹಿಂದೆ ಆಚರಿಸಲಾಗಿತ್ತು: ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿಯೂ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಉತ್ಸವಗಳನ್ನು ಆಚರಿಸುವುದನ್ನು ರದ್ದುಗೊಳಿಸಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅಧಿಕೃತ ಆದೇಶ ಹೊರಡಿಸಿದ್ದರು. ಆದರೆ, ಅವರೇ ತಮ್ಮ ಜಿಲ್ಲೆಯಲ್ಲಿ ರನ್ನ ಉತ್ಸವ ಮಾಡಿದ್ದರಿಂದ ಉಳಿದ ಉತ್ಸವಗಳನ್ನು ಆಚರಿಸಲಾಗಿತ್ತು.

ಹಂಪಿ ಉತ್ಸವ ವರ್ಷಕ್ಕೊಂದು ಬಾರಿ ಬರುತ್ತದೆ. ಇಡೀ ವರ್ಷ ಉತ್ಸವದ ಸಲುವಾಗಿ ಕಲಾವಿದರು ಹಾಗೂ ಈ ಭಾಗದ ಜನತೆ ಕಾದು ಕುಳಿತಿರುತ್ತಾರೆ. ಸರ್ಕಾರದ ನಿರ್ಧಾರದಿಂದ ಕಲಾವಿದರಿಗೆ ಹತಾಶೆಯಾಗಿದೆ. ಸರ್ಕಾರದ ಈ ತೀರ್ಮಾನವನ್ನು ಮರು ಪರಿಶೀಲನೆ ಮಾಡಬೇಕು.
– ಬಸಲಿಂಗಯ್ಯ ಹಿರೇಮs…, ಜಾನಪದ ಕಲಾವಿದರು.

ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ವಿಷಯದಲ್ಲಿ ಪದೇ ಪದೇ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆ. ಈ ನಾಡಿನ ಐತಿಹಾಸಿಕ ಪರಂಪರೆಯನ್ನು ಜೀವಂತವಾಗಿಡಲು ಪತ್ರಿ ವರ್ಷ ನಿರಂತರ ಉತ್ಸವ ನಡೆಯಬೇಕು. ರಾಜ್ಯ ಸಮ್ಮಿಶ್ರ ಸರ್ಕಾರ ಬರಗಾಲದ ನೆಪ ಹೇಳಿ ಉತ್ಸವ ರದ್ದು ಮಾಡಿರುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿರುವ ಅವಮಾನ.
– ನಾಗೇಶ್‌ ಗೋಳಶೆಟ್ಟಿ, ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next