Advertisement

ಪ್ರಾಣಿಗಳ ಹತ್ಯೆ ತಡೆಯುತ್ತಿಲ್ಲ ಏಕೆ?

11:25 AM Sep 13, 2017 | |

ಬೆಂಗಳೂರು: ಅಕ್ರಮವಾಗಿ ಜಾನುವಾರು ಸೇರಿದಂತೆ ಇನ್ನಿತರೆ ಪ್ರಾಣಿಗಳ ಹತ್ಯೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನುಗಳು ಸಮರ್ಪಕವಾಗಿ ಯಾಕೆ ಪಾಲನೆಯಾಗುತ್ತಿಲ್ಲ ಎಂದು ರಾಜ್ಯಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ.

Advertisement

ಶಿವಾಜಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ಕೂಡಿ ಹಾಕಿರುವ ಜಾನುವಾರುಗಳನ್ನು ರಕ್ಷಿಸುವಂತೆ ನೀಡಿದ್ದ ಆದೇಶ ಪಾಲಿಸಲು ವಿಫ‌ಲರಾದ ಶಿವಾಜಿನಗರ ಪೊಲೀಸರು ಹಾಗೂ ಸರ್ಕಾರದ ವಿರುದ್ಧ “ಗೋ ಗ್ಯಾನ್‌ ಫೌಂಡೇಶನ್‌’ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

“ಜಾನುವಾರು ಸೇರಿದಂತೆ ಇತರೆ ಪ್ರಾಣಿಗಳನ್ನು ಅಕ್ರಮವಾಗಿ ವಧೆ ಮಾಡುವುದನ್ನು ತಡೆಯಲು ಜಾರಿಯಲ್ಲಿರುವ ಕರ್ನಾಟಕ ಗೋಹತ್ಯೆ ತಡೆ ಹಾಗೂ ಜಾನುವಾರು ಪ್ರತಿಬಂಧಕ ಕಾಯಿದೆ ಏಕೆ ಸಮರ್ಪಕವಾಗಿ ಜಾರಿಯಾಗಿಲ್ಲ. ಈ ಬಗ್ಗೆ ರಾಜ್ಯಸರ್ಕಾರ ಕೈಗೊಂಡಿರುವ ಕ್ರಮಗಳೇನು.

ಸುಪ್ರೀಂಕೋರ್ಟ್‌ ಅವಗಾಹನೆಯಲ್ಲಿರುವ ಗೋ ವಿಚಕ್ಷಣಾ ಸಮಿತಿ ಜಾರಿಗೊಳಿಸುವ ಬಗ್ಗೆ ಸರ್ಕಾರದ ನಿಲುವೇನು?, ಎಂದು ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದ ನ್ಯಾಯಪೀಠ, “ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೆ ತಿಳಿಸಿ. ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸುತ್ತದೆ,’ ಎಂದು ಕಟುವಾಗಿ ಪ್ರಶ್ನಿಸಿತು.

ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ಅಭಿಯೋಜಕ ಎಚ್‌. ರಾಚಯ್ಯ, “ಅಕ್ರಮ ಪ್ರಾಣಿಬಲಿ ತಡೆಯಲು ಕಾನೂನುಗಳ ಸಮರ್ಪಕ ಜಾರಿ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಕಾಲವಕಾಶ ಬೇಕು,’ ಎಂದು ಕೋರಿದರು.

Advertisement

ಅಲ್ಲದೆ “ಅರ್ಜಿದಾರರು ಪ್ರಾಣಿಗಳ ಸಂರಕ್ಷಣೆಗೆ ನೀಡಿರುವ ಕೆಲ ಸಲಹೆಗಳಿಗೆ ಸರ್ಕಾರದ ಸಹಮತವಿದೆ,’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಸೆ.13) ಮುಂದೂಡಿದೆ. ಅರ್ಜಿದಾರ ಗೋ ಗ್ಯಾನ್‌  ಫೌಂಡೇಶನ್‌ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದರು

ಲಕ್ಷ್ಮಣ ರೇಖೆ ಪಾಲಿಸುವುದು ಗೊತ್ತಿದೆ!
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ಎಸ್‌.ರಾಚಯ್ಯ, ಈ ಅರ್ಜಿ ವಿಚಾರಣೆಯ ಅಂತಿಮ ಆದೇಶ ನೀಡುವುದು ಈ ನ್ಯಾಯಪೀಠದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಲಕ್ಷ್ಮಣರೇಖೆ ಪಾಲಿಸಬೇಕು ಎಂಬುದು ಗೊತ್ತಿದೆ. ಆದರೆ, ಶಿವಾಜಿನಗರದಲ್ಲಿ ಅಕ್ರಮವಾಗಿ ಕೂಡಿಟ್ಟ ಹಸುಗಳನ್ನು ರಕ್ಷಿಸಬೇಕು ಎಂದು ನೀಡಿದ್ದ ಆದೇಶ ಏಕೆ ಪಾಲಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next