Advertisement

ಧರ್ಮಸಂಸದ್‌ಗಿಲ್ಲ, ಕಾಂಗ್ರೆಸ್‌ ಸಮಾವೇಶಕ್ಕೆ ಏಕೆ? ವಿಲಾಸ್‌  ಪ್ರಶ್ನೆ

11:31 AM Jan 10, 2018 | Team Udayavani |

ಉಡುಪಿ: ಕಾಂಗ್ರೆಸ್‌ ಸಾಧನಾ ಸಮಾವೇಶಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಏರ್ಪಡಿಸುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಉಡುಪಿ ಜಿಲ್ಲಾ ವಿ.ಹಿಂ. ಪ. ಅಧ್ಯಕ್ಷ ವಿಲಾಸ್‌ ನಾಯಕ್‌ ಆರೋಪಿಸಿದ್ದಾರೆ.

Advertisement

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ ಅವರು, ವಿ. ಹಿಂ. ಪ. ಮತ್ತು ಬಜರಂಗ ದಳದ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಧರ್ಮಸಂಸದ್‌ನಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಸಾಧು ಸಂತರು ಹಾಗೂ ಲಕ್ಷಾಂತರ ಹಿಂದೂಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡುವುದಕ್ಕಾಗಿ ಕೊಲ್ಲೂರು ದೇವಾಲಯಕ್ಕೆ ಮನವಿ ಮಾಡಿಕೊಂಡರೂ ಅಲ್ಲಿನ ಆಡಳಿತ ನಿರಾಕರಿಸಿತ್ತು. ಆದರೆ ಕಾಂಗ್ರೆಸ್‌ ಸಾಧನಾ ಸಮಾವೇಶಕ್ಕೆ ಅಲ್ಲಿಂದ ಊಟ ಒದಗಿಸಲಾಗಿದೆ. ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ರಾತ್ರಿ ಬೆಳಗಾಗುವುದರ ಒಳಗೆ ಸುಮಾರು ನೂರು ಮಂದಿ ಬಾಣಸಿಗರನ್ನು ನೇಮಿಸಿ ದೇಗುಲದಲ್ಲಿ ಊಟ ತಯಾರಿಸಿ, ಒದಗಿಸುವ ವ್ಯವಸ್ಥೆ ಮಾಡಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಧರ್ಮ ಸಂಸದ್‌ಗೆ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಕೊಲ್ಲೂರು ದೇಗುಲದಿಂದ ಭೋಜನ ನಿರಾಕರಿಸಿರುವುದರ ಹಿಂದೆ ಸಿದ್ದರಾಮಯ್ಯ ಸರಕಾರದ ದೊಡ್ಡ ಪಿತೂರಿ ಇದೆ. ಈ ಹಿಂದೆ ಇದೇ ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಅನುದಾನವನ್ನು ರದ್ದುಪಡಿಸಿ ರಾಜಕೀಯ ಮಾಡಲಾಗಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳು ಸಿದ್ದರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಸ್ಪಷ್ಟಪಡಿಸುತ್ತವೆ. ಇದನ್ನು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳ ತೀವ್ರವಾಗಿ ಖಂಡಿಸುತ್ತವೆ. ಇನ್ನು ಮುಂದೆಯೂ ಇಂತಹ ನೀತಿಯನ್ನು ಸರಕಾರ ಅನುಸರಿಸಿದಲ್ಲಿ ವಿ.ಹಿಂ.ಪ. ಮತ್ತು ಬಜರಂಗ ದಳ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದವರು ಹೇಳಿದರು.

ಬಜರಂಗ ದಳದ ವಿಭಾಗೀಯ ಸಂಚಾಲಕ ಸುನಿಲ್‌, ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌, ತಾಲೂಕು ಸಂಚಾಲಕ ಸಂತೋಷ್‌ ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next