Advertisement
ನಿಂಗೂ ಗೊತ್ತಿದೆ.. ನಮ್ಮಿಬ್ಬರ ಕಾಡಾಟ ಪ್ರೀತಿಯೆಂದು.. ಆದರೂ ಅದನ್ನೊಪ್ಪಿಕೊಳ್ಳಲು ಇಬ್ಬರ ಮನಸ್ಸೂ ಸಿದ್ಧವಿಲ್ಲ. ಇಬ್ಬರಿಗೂ ಇಗೋ ಸಮಸ್ಯೆಯಾ? ಇಲ್ಲ, ಮತ್ತೆ? ನಾಚಿಕೆಯಾ..ಅದೂ ಅಲ್ಲ. ಮತ್ತೇನು ಸಮಸ್ಯೆ ಪ್ರೀತಿ ಹೇಳಿಕೊಳ್ಳಲು ಅಂತ ಇಬ್ಬರಿಗೂ ತಿಳಿಯದು. ಎದುರು ಸಿಕ್ಕಾಗ ಮಾತಿಲ್ಲ, ಕಥೆಯಿಲ್ಲ. ಸಂಭಾಷಣೆಯೆಲ್ಲಾ ವಾಟ್ಸಾಪ್‌ನಲ್ಲಿ ಮಾತ್ರ. ಕರೆಗೆ ಕಿವಿಯಾಗಿಸಿದರೆ ಮೌನದ ರಿಂಗ್‌ಟೋನ್.
Related Articles
Advertisement
ನಾಳೆ ಹುಡುಗ ನೋಡಲು ಬರುತ್ತಿದ್ದಾನೆ ಎಂದು ನಾನು ಹೇಳಿದರೆ ಸಾಕು; ನಿನಗೆ ಸಿಟ್ಟು ಬರುತ್ತದೆ. ನನಗೂ ಅಷ್ಟೇ ಬಿಡು.. ನೀನು ಅವಳಾರನ್ನೋ ನೋಡಲು ಹೋಗುತ್ತೀಯ ಎಂದು ತಿಳಿದರೆ ಹೊಟ್ಟೆಯಲ್ಲಿ ಸಂಕಟ. ಹೇಳುವಂತಿಲ್ಲ ಬಿಡುವಂತಿಲ್ಲ. ಇಂಥ ಫಜೀತಿ ಬೇಕೇನೋ ಮಾರಾಯ?
ನೀನು “ಐ ಲವ್ ಯು’ ಅಂತ ಹೇಳುವುದಿಲ್ಲ, ನನಗೆ ಹೇಳಿಕೊಳ್ಳಲು ಹೆಣ್ಣೆಂಬ ನಾಚಿಕೆ.. ಕಾಡುವುದು, ಕಾಯಿಸುವುದು ಸಲೀಸು ನಿನಗೆ. ನಿನ್ನ ಕಾಡಾಟ ನಂಗೂ ಇಷ್ಟವೇ. ಆದರೆ, ಎಷ್ಟು ದಿನ ಅಂತ ಕಾಯೋದು? ಒಂದು ದಿನ ನಾನೊಂದು ಪ್ರೀತಿಯ ಸಂದೇಶವನ್ನು ಕಳುಹಿಸಿಯೇ ಬಿಟ್ಟೆ. ನೀನು ಅದನ್ನೂ ತಮಾಷೆಯೆಂದು ತಿಳಿದು ನಕ್ಕುಬಿಟ್ಟೆ. ಇನ್ನೇನು ಮಾಡುವುದು? ನಾನು ಕೂಡ ತಮಾಷೆ ಮಾಡಿದವಳಂತೆ ನಕ್ಕು ಸುಮ್ಮನಾದೆ. ನಮ್ಮಿಬ್ಬರ ನಡುವೆ ಅತಿಯಾಗಿರುವ ಇಂತಹ ತಮಾಷೆಯೇ ಪರಸ್ಪರ ಪ್ರೀತಿ ವ್ಯಕ್ತಪಡಿಸಲು ಅಡ್ಡವಾಗಿದೆಯಾ?
ಇದ್ದರೂ ಇಲ್ಲಂದಂತಿದ್ದ ಕಳ್ಳಾಟದ ಭಾವನೆಗಳ ಮೇಲೆ ಯಾರ ಕಣ್ಣು ಬಿತ್ತೋ ಮಾರಾಯ, ತುಸುವಿದ್ದ ಕೋಪ ಅತಿಯಾಗಿ, ಇಬ್ಬರ ನಡುವೆ ಜಗಳವಾಗಿ, ನಮ್ಮ ದಾರಿ ನಮಗೆ ಅಂತ ಹೊರಟೆವು. ನಿನ್ನಿಂದ ಸಕಲೇಶಪುರದ ಘಾಟಿ ದಾರಿ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ನನ್ನಿಂದ? ಇಲ್ಲ ಆಗಲಿಲ್ಲ. ಆ 31 ಗಂಟೆಗಳ ನಿನ್ನ ಮೌನ ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಮನಸ್ಸು ತಡೆಯಲಿಲ್ಲ. ನೀನು ನಮ್ಮೂರಾದ ಮೂಡಿಗೆರೆಗೆ ಹೋಗಿದೀಯ ಅನ್ನುವುದನ್ನೇ ನೆಪವಾಗಿಟ್ಟುಕೊಂಡು ಕರೆ ಮಾಡಿದೆ. ಅವತ್ತು ನಾನು ಕ್ಷಮೆ ಕೇಳಬೇಕೆಂದು ಫೋನಾಯಿಸಿದೆ, ನೀನು ಬೈಯ್ಯಲು ಸಿದ್ಧನಾಗಿ, ಕರೆ ತುಂಡರಿಸಿದೆ. ಮತ್ತೆ ನಿನ್ನಿಂದಲೇ ಕರೆ ಬರುವವರೆಗೂ ಕಾದೆ.. ಕಡೆಗೂ ಬಂತು, ಆ ನಿನ್ನ ಬೈಗುಳದ ಗುಡುಗಿನ ಕರೆ.. ನೀನು ಬೈದಾಗಲೇ ತಿಳಿದಿದ್ದು, ನಿನ್ನ ಅಂತರ್ಯದಲ್ಲಿ ನಾನು ಬರೀ ಸ್ನೇಹಿತೆಯಾಗಿ ಉಳಿದಿಲ್ಲವೆಂದು.. ಆದರೆ ಅದನ್ನು ಸ್ಪಷ್ಟವಾಗಿ ಹೇಳದ ನಿನ್ನನ್ನು ನೆನಪಿಸಿಕೊಂಡ್ರೆ ಈಗಲೂ ನಗು ಬರುತ್ತಿದೆ.. ಸಾಕು ಈ ಕಾಡಾಟ, ಕಾದಾಟ.. ಮುಗಿಸಿಬಿಡುವ.. ಮತ್ತೆ ಶುರುಮಾಡುವ ಪ್ರೇಮಿಗಳಾಗಿ ಆ ಎಲ್ಲ ತರಲೆ ತುಂಟಾಟಗಳನ್ನು..
ಇಂತಿ ನಿನ್ನ ಶ್ರುತಿ ಮಲೆನಾಡತಿ