ಗಂಗಾವತಿ: ಪ್ರಚಾರ ಕೊರತೆ, ನಿರ್ಲಕ್ಷ್ಯ ಹಾಗೂ ಮೂಲಸೌಕರ್ಯಗಳು ಇಲ್ಲದೇ ಇರುವುದರಿಂದ ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಪುರಾಣ, ಸೌಂದರ್ಯ ಸೊಬಗಿನ ಎಷ್ಟೋ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುವುದೇ ಕಡಿಮೆಯಾಗಿದೆ.
ಪ್ರಮುಖವಾಗಿ ಅಂಜನಾದ್ರಿ ಬೆಟ್ಟ, ಋಷಿಮುಖ, ಪಂಪಾ ಸರೋವರ, ಚಿಂತಾಮಣಿ, ನವವೃಂದಾವನಗಡ್ಡಿ, ವಾಲೀಕಿಲ್ಲಾ, ಶಬರಿಗುಹೆ, ವಾಣಿಭದ್ರೇಶ್ವರ, ದೇವ ಘಾಟ್ ಅಮೃತೇಶ್ವರ, ಕನಕಗಿರಿ, ಹೇಮಗುಡ್ಡ, ಕುಮ್ಮಟದುರ್ಗಾ, ಪುರಾ, ಇಟಗಿ ಮಹಾದೇವ ದೇವಾಲಯ, ಕಲ್ಲೂರಿನ ಕಲ್ಲೇಶ್ವರ ದೇವಾಲಯ, ಕುಕನೂರಿನ ಮಹಾ ಮಾಯಿ ದೇವಾಲಯ, ಹಿರೇಜಂತಗಲ್ ಪ್ರಸನ್ನ ಪಂಪಾ ವಿರೂಪಾಕ್ಷ ದೇವಾಲಯ, ಸಾನಾಪೂರದ ಲೇಕ್, ವಾಟರ್‌ಫಾಲ್ಸ್, ಕಡೆಬಾಗಿಲು ಸೇತುವೆ ಹೀಗೆ ಹತ್ತು ಹಲವು ಪ್ರವಾಸಿ ಐತಿಹಾಸಿಕ ಸ್ಥಳಗಳು ಜಿಲ್ಲೆಯಲ್ಲಿದ್ದು, ಇಲ್ಲಿಗೆ ಹೋಗಲು ಸೂಕ್ತ ಸಾರಿಗೆ ಹಾಗೂ ಉಳಿಯಲು ಅನುಕೂಲ ಇಲ್ಲದ ಕಾರಣ ಇಲ್ಲಿಗೆ ಜನರೇ ಬರುತ್ತಿಲ್ಲ.
ತಾಲೂಕಿನ ಆನೆಗೊಂದಿ ಭಾಗದಲ್ಲಿ ವರ್ಷದ 12 ತಿಂಗಳೂ ನದಿ ಕಾಲುವೆಯಲ್ಲಿ ನೀರು ಹರಿಯುವುದರಿಂದ ಈ ಪ್ರದೇಶ ಸಸ್ಯಶಾಮಲವಾಗಿರುತ್ತದೆ. ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಋಷಿಮುಖ ಪರ್ವತ, ವಿರುಪಾಪೂರ ಸೇತುವೆ, ಬೆಣಕಲ್ ಶಿಲಾಯುಗ ಜನರ ಶಿಲಾಸಮಾಧಿಗಳು, ಪಂಪಾ ಸರೋವರ ಹಾಗೂ ನವ ವೃಂದಾವನಗಡ್ಡಿಯ 9 ಯತಿಗಳ ದರ್ಶನಕ್ಕೆ ಪ್ರತಿ ನಿತ್ಯ ದೇಶ-ವಿದೇಶದ ಸಾವಿರಾರು ಜನ ಆಗಮಿಸುತ್ತಾರೆ. ಇದರಿಂದ ಪ್ರತಿ ನಿತ್ಯ ಆನೆಗೊಂದಿ ಭಾಗದಲ್ಲಿ ವ್ಯಾಪಾರ-ವ್ಯವಹಾರ ನಡೆಯುತ್ತದೆ. ಅಂಜನಾದ್ರಿ ಬೆಟ್ಟಕ್ಕೆ ರೂಪ್ ವೇ, ಋಷಿಮುಖ ಪರ್ವತದಲ್ಲಿರುವ ಸುಗ್ರೀವಾ ಗುಹೆ ಹಾಗೂ ಪುರಾತನ ಚಂದ್ರಮೌಳೇಶ್ವರ ದೇವಾಲಯಕ್ಕೆ ಹೋಗಲು ಸೇತುವೆ ರಸ್ತೆ ನಿರ್ಮಿಸಬೇಕು. ಚಂದ್ರಮೌಳೇಶ್ವರ ದೇವಾಲಯದ ಜೀರ್ಣೋದ್ಧಾರ ಅಪೂರ್ಣಗೊಂಡಿದ್ದು, ಪುರಾತತ್ವ ಇಲಾಖೆ ಪೂರ್ಣಗೊಳಿಸಬೇಕಿದೆ.
ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳಿಗೆ ಹಾಕಲಾಗಿರುವ ಸೆಲ್ಟರ್ ಅಪೂರ್ಣವಾಗಿದೆ. ಮೊದಲ ಅರ್ಚಕ ದಿವಂಗತ ಲಕಡದಾಸ್ ಬಾಬಾ ಸಮಾಧಿ ಸುತ್ತಲಿನ ಕಾಂಪೌಂಡ್ ಅಪೂರ್ಣವಾಗಿದೆ. ಶುದ್ಧ ಕುಡಿಯುವ ನೀರು, ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ವಾಹನ ನಿಲುಗಡೆ ಮಾಡುವ ಜಾಗ ಸಮತಟ್ಟು ಮಾಡುವುದರೊಂದಿಗೆ ನೆಲಕ್ಕೆ ಕಾಂಕ್ರೀಟ್ ಹಾಕಬೇಕು. ವಾಣಿಜ್ಯ ಮಳಿಗೆ ನಿರ್ಮಿಸಿ ವಾಹನ ಪಾರ್ಕಿಂಗ್ ಹಾಗೂ ಮಳಿಗೆಗಳನ್ನು ಹರಾಜು ಹಾಕಿ ಈ ಭಾಗದ ನಿರುದ್ಯೋಗಿ ಯುವಕರಿಗೆ ಮೀಸಲಾತಿ ಅನ್ವಯ ವಿತರಿಸಬೇಕು. ಜಿಲ್ಲಾಡಳಿತ ನೇತೃತ್ವದಲ್ಲಿ ಟ್ರಸ್ಟ್ ರಚಿಸಿ ಈ ಟ್ರಸ್ಟ್ ನಡಿಯಲ್ಲಿ ಆನೆಗೊಂದಿ ಭಾಗದ ದೇವಾಲಯಗಳನ್ನು ತರಬೇಕು. ಆನೆಗೊಂದಿ ಸುತ್ತಲಿನ ಸ್ಥಳಗಳ ಪೂರ್ಣ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಚಾರ ಮಾಡಬೇಕು. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದಿನದ 24 ಗಂಟೆ ಪೊಲೀಸ್ ಗಸ್ತು ಇರಬೇಕು. ಗಂಗಾವತಿ-ಹೊಸಪೇಟೆ-ಕೊಪ್ಪಳದಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಬೇಕು.
ಇದೆಲ್ಲ ಮಾಡಿದರೆ ಇಲ್ಲಿಗೆ ನಿತ್ಯ ಬರುವವರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಪ್ರವಾಸೋದ್ಯಮ ದಿಂದ ಆ ಪ್ರದೇಶದ ಆರ್ಥಿಕ ಸ್ಥಿತಿ ಬದಲಾಗುವ ಜತೆ ಅಲ್ಲಿಯ ಜನರೂ ಪರೋಕ್ಷವಾಗಿ ಉದ್ಯೋಗ ಪಡೆಯುತ್ತಾರೆ.
•ಪ್ರಚಾರದ ಕೊರತೆ- ನಿರ್ಲಕ್ಷ್ಯದಿಂದ ಬರುತ್ತಿಲ್ಲ ಪ್ರವಾಸಿಗರು
•ವೆಬ್‌ಸೈಟ್‌ನಲ್ಲೂ ಇಲ್ಲ ಐತಿಹಾಸಿಕ ತಾಣಗಳ ಪರಿಚಯ
•ಸೂಕ್ತ ಸಾರಿಗೆ, ಉಳಿಯಲು ವ್ಯವಸ್ಥೆ ಮಾಡಿದರೆ ಅನುಕೂಲ
•ಕೆ.ನಿಂಗಜ್ಜ