Advertisement

ಧೋನಿ ಬ್ಯಾಟಿಂಗಿಗೆ ಪ್ಲೆಸಿಸ್‌ ಮೆಚ್ಚುಗೆ

06:00 AM May 02, 2018 | Team Udayavani |

ಪುಣೆ: ನಾಯಕ ಧೋನಿ ಅವರ ಬ್ಯಾಟಿಂಗ್‌ ವೈಭವಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಫಾಡು ಪ್ಲೆಸಿಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಬೌಲರ್‌ನ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುವ ಧೋನಿ ಎದುರಾಳಿಯ ಯಾವುದೇ ನಾಯಕನ ಬಾಳ್ವೆಯನ್ನು ಕಠಿನಗೊಳಿಸುತ್ತಾರೆ ಎಂದು ಪ್ಲೆಸಿಸ್‌ ಬಣ್ಣಿಸಿದ್ದಾರೆ.

Advertisement

ಧೋನಿ ಪವರ್‌ ಹಿಟ್ಟಿಂಗ್‌
ವಾಟ್ಸನ್‌ ಬಿರುಸಿನ 78 ರನ್‌ ಸಿಡಿಸಿದ ಬಳಿಕ ಧೋನಿ ಸ್ಫೋಟಕವಾಗಿ ಆಡಿ 51 ರನ್‌ ಗಳಿಸಿದ್ದರಿಂದ ಚೆನ್ನೈ ಡೆಲ್ಲಿ ತಂಡವನ್ನು 13 ರನ್ನುಗಳಿಂದ ಸೋಲಿಸಲು ಯಶಸ್ವಿಯಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಬೆಂಗಳೂರು ಮತ್ತು ಡೆಲ್ಲಿ ವಿರುದ್ಧ ಧೋನಿ ಅವರ ಪವರ್‌ಹಿಟ್ಟಿಂಗ್‌ ಪ್ರದರ್ಶನ ಟೀಕಾಕಾರರ ಬಾಯಿ ಮುಚ್ಚಿಸುವಂತಿತ್ತು. 

ವೈಡ್‌ ಎಸೆತಕ್ಕೂ ಹೊಡೆಯಬಲ್ಲರು
ಈ ಕ್ಷಣ ಅವರು (ಧೋನಿ) ನಿಜವಾಗಿಯೂ ಉತ್ತಮ ಫಾರ್ಮ್ನಲ್ಲಿ ಇದ್ದಾರೆ. ಇಂತಹ ಫಾರ್ಮ್ನಲ್ಲಿರುವಾಗ ಅವರಿಗೆ ಬೌಲಿಂಗ್‌ ಮಾಡುವುದು ಬಹಳ ಕಷ್ಟ. ನೀವು ವೈಡ್‌ ಹಾಕಿದರೂ ಅವರು ಲೈಗ್‌ಸೈಡ್‌ ಮೂಲಕ ಅದನ್ನು ಹೊಡೆಯಬಲ್ಲರು ಎಂದು ಪ್ಲೆಸಿಸ್‌ ವಿವರಿಸಿದರು.

ಚೆಂಡನ್ನು ಹೊಡೆಯುವುದರಲ್ಲಿ ಅವರಲ್ಲಿ ಬಹಳಷ್ಟು ವಿಧಗಳಿವೆ. ಹಾಗಾಗಿ ಅವರ ಬ್ಯಾಟಿಂಗ್‌ ವೈಭವಕ್ಕೆ ಕಡಿವಾಣ ಹಾಕಲು ಬೌಲರ್‌ ಅಥವಾ ಎದುರಾಳಿ ನಾಯಕನಿಗೆ ಕಷ್ಟ. ಅವರ ಉತ್ಕೃಷ್ಟ ಫಾರ್ಮ್ ನಮಗೆ ಅತೀ ಮುಖ್ಯವಾಗಿ ಬೇಕಾಗಿದೆ ಎಂದು ಪ್ಲೆಸಿಸ್‌ ತಿಳಿಸಿದರು.

ರಾಯುಡು ಯಾವ ಕ್ರಮಾಂಕದಲ್ಲೂ ಉತ್ತಮ ಆಟ
ಅಂಬಾಟಿ ರಾಯುಡು ಅವರ ಆಟಕ್ಕೂ ಪ್ಲೆಸಿಸ್‌ ಮೆಚ್ಚುಗೆ ಸೂಚಿಸಿದರು. ಆರಂಭಿಕ ಮತ್ತು ನಾಲ್ಕನೇ ಕ್ರಮಾಂಕದಲ್ಲೂ ರಾಯುಡು ಉತ್ತಮವಾಗಿ ಆಡುವ ಮೂಲಕ ಚೆನ್ನೈ ತಂಡವನ್ನು ಆಧರಿಸಿದ್ದಾರೆ. ಐಪಿಎಲ್‌ನಲ್ಲಿ ಅವರ ಆಟವನ್ನು ಆನಂದಿಸಿದ್ದೇನೆ. ಇನ್ನಿಂಗ್ಸ್‌ನ ಮೊದಲ ಎಸೆತದಿಂದಲೇ ಬೌಂಡರಿ ಬಾರಿಸುವ ಸಾಮರ್ಥ್ಯ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಕಠಿನ ಪ್ರಯತ್ನ ಬೇಕು ಎಂದು ಪ್ಲೆಸಿಸ್‌ ನುಡಿದರು.

Advertisement

ಎಕ್ಸ್‌ಟ್ರಾ ಇನ್ನಿಂಗ್ಸ್‌: ಡೆಲ್ಲಿ-ಚೆನ್ನೈ
ಡೆಲ್ಲಿ ವಿರುದ್ಧ ಚೆನ್ನೈ ತಂಡದ ಗೆಲುವಿನ ದಾಖಲೆ 11 -5ಕ್ಕೇರಿದೆ. 2015ರ ಋತುವಿನಲ್ಲಿ ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲುವ ಮೊದಲು ಚೆನ್ನೈ ತಂಡ ಸತತ ಏಳು ಐಪಿಎಲ್‌ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಜಯ ಸಾಧಿಸಿತ್ತು.

ಐಪಿಎಲ್‌ನಲ್ಲಿ ಹರ್ಭಜನ್‌ ಸಿಂಗ್‌ ಡೆಲ್ಲಿ ವಿರುದ್ಧ 21 ವಿಕೆಟ್‌ ಪಡೆದಿದ್ದಾರೆ. ಅವರು 18 ಪಂದ್ಯಗಳಲ್ಲಿ 21 ವಿಕೆಟ್‌ ಉರುಳಿಸಿದ್ದಾರೆ. ಡ್ವೇನ್‌ ಬ್ರಾವೊ 13 ಪಂದ್ಯಗಳಿಂದ 12 ವಿಕೆಟ್‌ ಪಡೆದಿದ್ದಾರೆ.

ಸುರೇಶ್‌ ರೈನಾ ಮತ್ತು ಎಂಎಸ್‌ ಧೋನಿ ಡೆಲ್ಲಿ ವಿರುದ್ಧ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಸರಾಸರಿ 30ಕ್ಕಿಂತ ಕಡಿಮೆ ಇದೆ. ರೈನಾ 20 ಪಂದ್ಯಗಳಿಂದ 491 ರನ್‌ ಗಳಿಸಿದ್ದರೆ ಧೋನಿ 17 ಇನ್ನಿಂಗ್ಸ್‌ಗಳಿಂದ 419 ರನ್‌ ಹೊಡೆದಿದ್ದಾರೆ.

ಚೆನ್ನೈ ವಿರುದ್ಧ ಅಮಿತ್‌ ಮಿಶ್ರಾ 32.51 ಬೌಲಿಂಗ್‌ ಸರಾಸರಿ ಹೊಂದಿದ್ದಾರೆ. ಆಡಿದ 9 ಐಪಿಎಲ್‌ ಪಂದ್ಯಗಳಿಂದ 7 ವಿಕೆಟ್‌ ಉರುಳಿಸಿದ್ದಾರೆ.

ಐಪಿಎಲ್‌ನಲ್ಲಿ ಅಂಬಾಟಿ ರಾಯುಡು 98 ಸಿಕ್ಸರ್‌ ಬಾರಿಸಿದ್ದಾರೆ. 100 ಸಿಕ್ಸರ್‌ ಪೂರ್ತಿಗೊಳಿಸಲು ಅವರಿಗೆ ಇನ್ನೆರಡು ಸಿಕ್ಸರ್‌ ಬೇಕಾಗಿದೆ. ಐಪಿಎಲ್‌ನಲ್ಲಿ ಇಷ್ಟರವರೆಗೆ ಕೇವಲ 15 ಮಂದಿ ನೂರು ಪ್ಲಸ್‌ ಸಿಕ್ಸರ್‌ ಬಾರಿಸಿದ್ದಾರೆ.

ಚೆನ್ನೈ ಪರ ಆಡಿದ ವೇಳೆ ಸುರೇಶ್‌ ರೈನಾ 3,903 ರನ್‌ ಗಳಿಸಿದ್ದಾರೆ. ಚೆನ್ನೈ ಪರ ಐಪಿಎಲ್‌ನಲ್ಲಿ 4,000 ರನ್‌ ಪೂರ್ತಿಗೊಳಿಸಿದ ಮೊದಲ ಆಟಗಾರ ಎಂದೆನಿಸಿಕೊಳ್ಳಲು ಅವರಿಗೆ 97 ರನ್‌ ಬೇಕಾಗಿದೆ. 

ವೃತ್ತಿಪರ ಬಾಳ್ವೆಯಲ್ಲಿ ರವೀಂದ್ರ ಜಡೇಜ 9,934 ರನ್‌ ಗಳಿಸಿದ್ದಾರೆ.ಎಲ್ಲ ಮಾದರಿಯ ಕ್ರಿಕೆಟ್‌ಗಳಲ್ಲಿ 10,000 ಸಾವಿರ ರನ್‌ ಪೂರ್ತಿಗೊಳಿಸಲು ಅವರಿಗಿನ್ನು 66 ರನ್‌ ಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next