Advertisement

ಅಮ್ಮನಿಗೇಕೆ ಯಾವಾಗಲೂ ಸಿಟ್ಟು!

06:00 AM Apr 27, 2018 | |

ಮಕ್ಕಳಿರುವ ಪ್ರತಿ ಮನೆಯಲ್ಲೂ ಅಮ್ಮ ಗುಡುಗುಡು ಗುಮ್ಮಳಾಗಿ, ಅಪ್ಪ ಮನೆಯೊಳಗೆ ಜಾಲಿ ಮನುಷ್ಯನಾಗಿ ಕಾಣುವುದು ವಾಡಿಕೆ. ಸಣ್ಣಪುಟ್ಟ ವಿಚಾರಕ್ಕೂ ಅಮ್ಮನಿಗೆ ಸಿಡಿಮಿಡಿ ಕೋಪ. ಗಂಡನೊಂದಿಗೆ ಜಗಳ. ಸಂಸಾರದಲ್ಲಿ ಏಕೆ ಈ ಬಿರುಗಾಳಿ ಏಳುತ್ತೆ ಎನ್ನುವುದಕ್ಕೆ ಮನಃಶಾಸ್ತ್ರಜ್ಞರ ವ್ಯಾಖ್ಯಾನವೊಂದು ಮನಸ್ಸಿಗೆ ಹತ್ತಿರವಾಗುತ್ತದೆ…

Advertisement

ಮೇಡಂ, ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೀವಿ. ಇಬ್ರಿಗೂ ಪ್ರೀತಿ ಇದೆ. ಆದ್ರೆ ಚಿಕ್ಕ ಚಿಕ್ಕ ವಿಷಯಕ್ಕೆ ಇವಳಿಗೆ ತುಂಬಾ ಕೋಪ. ಮಕ್ಕಳಂತೂ ಇವಳನ್ನು ಕಂಡ್ರೆ ಎಷ್ಟು ಹೆದರ್ತಾರೆ ಗೊತ್ತಾ? ಮನೆಗೆ ನೆಂಟರು ಬರುತ್ತಾರೆ ಅಂದ್ರೆ ಇವಳಿಗೆ ಟೆನನ್‌. ನಾನು ಹೇಳ್ತೀನಿ, “ಹೊಟೇಲ್‌ನಿಂದ ತಂದರಾಯ್ತು ಬಿಡು!’ ಅಂತ. ಇವಳು ಕೇಳ್ಳೋದೇ ಇಲ್ಲ. ಹಾಗಂತ ಸಂತೋಷವಾಗಿಯಾದ್ರೂ ಅಡುಗೆ ಮಾಡ್ತಾಳಾ? ಬಂದ ನೆಂಟರು ಹಾಗೆ ಹೇಳಿದ್ರು, ಹೀಗೆ ಹೇಳಿದ್ರು ಅಂತ ಕೊರಗ್ತಾನೇ ಇರ್ತಾಳೆ. ಇವಳ ಕೋಪ-ಸಿಡಿಮಿಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಈ ಕೋಪ ಕಡಿಮೆಯಾಗೋದಿಕ್ಕೆ ಏನಾದ್ರೂ ಮಾತ್ರೆ ಇದ್ರೆ ಕೊಟಿºಡಿ ಮೇಡಂ!”

ಇದು ನಿಮ್ಮ ಮನೆಯವರ-ಮಕ್ಕಳ ದೂರೂ ಹೌದೆ? ಹಾಗಿದ್ದರೆ ನೀವು ಈ ಲೇಖನ ಓದಲೇಬೇಕು. ಅಧ್ಯಯನವೊಂದರ ಪ್ರಕಾರ ಶೇ. 46ರಷ್ಟು ಅಮ್ಮಂದಿರು ತಮ್ಮ ಪತಿಯ ಮೇಲೆ ವಾರಕ್ಕೆ ಒಂದಕ್ಕಿಂತ ಹೆಚ್ಚು ಸಲ ರೇಗುತ್ತಾರೆ. (“ಆ ವರದಿಯೇ ತಪ್ಪು. ಪ್ರತಿದಿನ ರೇಗ್ತಾರೆ’ ಎಂದಿರಾ?!) ಒಂದು ವರ್ಷ ವಯಸ್ಸಿನ ಮಕ್ಕಳಿರುವ ಅಮ್ಮಂದಿರು ಇನ್ನೂ ಹೆಚ್ಚು ಕೋಪಕ್ಕೆ ಒಳಗಾಗುತ್ತಾರೆ. ಅರ್ಧದಷ್ಟು ಜನ ಅಮ್ಮಂದಿರು, “ನಾವು ತೀವ್ರ ಕೋಪಕ್ಕೆ ಒಳಗಾಗಿ ಜೋರಾಗಿ ಕೂಗಿ-ಕಿರುಚಿ ಬೇಗ ಸುಮ್ಮನಾಗುತ್ತೇವೆ’ ಎಂದರೆ, 10ರಲ್ಲಿ ಒಬ್ಬರು ತಮ್ಮ ಕೋಪ ದೀರ್ಘ‌ ಸಮಯ ಮುಂದುವರಿಯುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಈ ಕೋಪಕ್ಕೆ ಮುಖ್ಯ ಕಾರಣಗಳು ಮೂರು. ಮೊದಲನೆಯದು ಮಕ್ಕಳ ಶಿಸ್ತಿನ ಸಮಸ್ಯೆ, ಎರಡನೆಯದು ನೆಂಟರ ಕಾಟ ಮತ್ತು  ಮೂರನೆಯದು ತನಗೆ ಗಂಡನಷ್ಟು ಸಮಯ- ಸೌಲಭ್ಯ- ವಿಶ್ರಾಂತಿ-ಪ್ರಾಮುಖ್ಯ ಸಿಗದಿರುವ ಬಗ್ಗೆ ಅತೃಪ್ತಿ.

ಮಕ್ಕಳ ಅಶಿಸ್ತೇ ದೊಡ್ಡ ತಲೆನೋವು
ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಪಿಜ್ಜಾ-ಬರ್ಗರ್‌ ತಿನ್ನಿಸಿ ಮರಳುವಾಗ, ಅಮ್ಮ ಮನೆಯಲ್ಲಿ ಅಡುಗೆ ಮಾಡಿಕೊಂಡು ಕಾಯುತ್ತಿದ್ದರೆ ಕೋಪ ಬಾರದಿದ್ದೀತೆ? ಅಥವಾ ಹಾಗೆ ಬಂದಮೇಲೆ ಅಪ್ಪ-ಮಕ್ಕಳು ಕೈಗೊಂದು, ಕಾಲಿಗೊಂದು ಸಾಮಾನು ಎಸೆದು, ಗರಬಡಿದವರಂತೆ ಟಿವಿ/ಮೊಬೈಲ್‌/ಐಪ್ಯಾಡ್‌ಗಳಲ್ಲಿ ಕಣ್ಣು ನೆಟ್ಟು ಕುಳಿತರೆ, ಅಮ್ಮನಿಗೆ ಮಕ್ಕಳ ಜೊತೆ ಅಪ್ಪನೂ “ದೊಡ್ಡ ಮಗು ಎನಿಸದಿದ್ದೀತೆ? ಅಥವಾ ಮಗುವಿಗೆ “ಊಟ ಮಾಡಿಸು’ ಎಂಬ ಅಮ್ಮನ ಆದೇಶವನ್ನು ಪಾಲಿಸಲು ಹೋಗಿ, ಟಿ.ವಿ.ಯಲ್ಲಿ  ಕಣ್ಣುನೆಟ್ಟು ಮಗುವಿನ ಮೂಗಿಗೆ ಊಟ ತುರುಕಲು ಹೋದ ಅಪ್ಪಂದಿರ ನೆನಪಾಗದಿದ್ದೀತೆ?

Advertisement

ಮಕ್ಕಳಲ್ಲಿ ಶಿಸ್ತಿನ ಬಗ್ಗೆ ತಲೆಕೆಡಿಸಿಕೊಳ್ಳುವ ಕೆಲಸ ಹೆಚ್ಚಿನ ಪಾಲು ಅಮ್ಮನದೇ ಎಂಬುದು ಎಲ್ಲರೂ ಒಪ್ಪುವ ಮಾತೇ. ಮೊದಲು ಇದಕ್ಕೆ ನಾವು ಕೊಡುತ್ತಿದ್ದ ಕಾರಣ “ಅಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುತ್ತಾಳೆ’ ಎಂಬುದು. ಆದರೆ, ಅಪ್ಪ-ಅಮ್ಮ ಇಬ್ಬರೂ ಹೊರಗೆ ಕೆಲಸ ಮಾಡುವ ಕುಟುಂಬಗಳಲ್ಲಿಯೂ ಅಷ್ಟೇ, ಅಮ್ಮನದೇ ಈ ಕೆಲಸ. ಮಕ್ಕಳು ಸಂಗೀತ ಕಲಿಯಬೇಕೆ/ಆಟದ ಸ್ಪರ್ಧೆಗೆ ಹೋಗಬೇಕೆ ಅಥವಾ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆಯಿದೆಯೇ, ಮಕ್ಕಳನ್ನು ಕರೆದೊಯ್ಯಲಾಗಲಿ, ಸಾಮಗ್ರಿ ಹೊಂದಿಸಿಕೊಡುವುದಾಗಲಿ ಎಲ್ಲಕ್ಕೂ ಅಮ್ಮನೇ ಓಡಬೇಕು. ಅಪ್ಪಂದಿರಿಗೆ ಯಾವಾಗಲಾದರೊಮ್ಮೆ ಈ ಜವಾಬ್ದಾರಿಗಳನ್ನು ಹೊರಿಸಿದರೆ ತತ್‌ಕ್ಷಣ ಬರುವ ಉತ್ತರ ಏನು ಗೊತ್ತೆ? “ಅವರವರೇ ಮಾಡಿಕೊಳ್ಳುವ ಹಾಗಿದ್ದರೆ ಮಾತ್ರ ಇವುಗಳನ್ನೆಲ್ಲ ಮಾಡಲಿ. ಇಲ್ಲ ಅಂದ್ರೆ ಸಂಗೀತ/ಆಟ… ಇತ್ಯಾದಿ ಯಾವುದೂ ಬೇಡ, ಬಿಡು’ ಅಮ್ಮಂದಿರಂತೆ ತಾವೇ ಇವೆಲ್ಲವನ್ನೂ ಮಾಡುವ ಅಪ್ಪಂದಿರು ಇಲ್ಲವೆಂದಲ್ಲ. ಆದರೆ, ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸಹಜವಾಗಿ ಅವರನ್ನು ನೋಡಿ “ನಮ್ಮ ಪತಿ ಹೀಗಿಲ್ಲವಲ್ಲಾ’ ಎಂದು ಹೊಟ್ಟೆ ಉರಿದುಕೊಳ್ಳುವ ಅಮ್ಮಂದಿರೇ ಅಧಿಕ.

ಮತ್ತೆ ಕೆಲವು ಮನೆಗಳಲ್ಲಿ ಮಕ್ಕಳು ಅಶಿಸ್ತು ಕಲಿಯಲು ಅತ್ಯುತ್ತಮ ಮಾದರಿ ಎಂದರೆ ಅಪ್ಪಂದಿರು. ಸ್ನಾನ ಮಾಡಿ ಟವೆಲ್‌ ಅಲ್ಲೇ ಬಿಸಾಡುವುದು, ನಲ್ಲಿಯಲ್ಲಿ ಸ್ವಲ್ಪ ನೀರು ಬರುವಂತೆ ಹಾಗೆ ಬಿಟ್ಟುಬಿಡುವುದು, ಲೈಟ್‌ ಆರಿಸದೇ ಇರುವುದು… ಇಂಥವನ್ನೆಲ್ಲ ಮಕ್ಕಳು ಕಲಿಯುವುದೇ ಅಪ್ಪಂದಿರಿಂದ! ತಮ್ಮ ಉದ್ಯೋಗದಲ್ಲಿ  ದೊಡ್ಡ ದೊಡ್ಡ ಕೆಲಸಗಳನ್ನು ನಿರ್ವಹಿಸುವ, ಸಾವಿರಾರು ರೂಪಾಯಿ ವ್ಯವಹಾರ ಮಾಡುವ ಅಪ್ಪಂದಿರಿಗೆ ಇಂಥ “ಕ್ಷುಲ್ಲಕ’ ವಿಷಯಗಳಿಗೆ ತಲೆಕೆಡಿಸಿಕೊಳ್ಳಲು ಪುರುಸೊತ್ತೆಲ್ಲಿದೆ?

ಯಜಮಾನಿ ಇಲ್ಲದ ಮನೆ
“ಗಂಡ-ಮಕ್ಕಳನ್ನು ಬಿಟ್ಟು ನಾಲ್ಕು ದಿನ ನಾನು ಹೊರಗೆ ಹೋದರೆ ಸಾಕು. ಇವರಿಬ್ಬರಿಗೂ ಆರಾಮೋ ಆರಾಮು. ಮನೆಯ ಅವ್ಯವಸ್ಥೆ ನೋಡಲೇ ಸಾಧ್ಯವಿಲ್ಲ. ನಾನು ರಾತ್ರಿ ಬಂದಿಳಿದರೆ ಹಾಲ್‌ನ ಲೈಟ್‌ ಹಾಗೇ ಉರಿಯುತ್ತಿದೆ. ಡೈನಿಂಗ್‌ ಟೇಬಲ್‌ ಮೇಲೆ ಅರ್ಧ ತಿಂದ ಹಣ್ಣಿನ ಸಿಪ್ಪೆ , ಜೊತೆಗೇ ಬಾಚಣಿಕೆ, ಖಾಲಿ ಕವರ್‌ ಹಾಗೇ ಬಿದ್ದಿವೆ. ಜಗ್‌ನಲ್ಲಿ ಒಂದು ತೊಟ್ಟೂ ನೀರಿಲ್ಲ, ಮಗ ಸ್ಕೂಲ್‌ ಹೋಂವರ್ಕ್‌ನ್ನು ಅರ್ಧ ಮಾತ್ರ ಪೂರೈಸಿಬಿಟ್ಟಿದ್ದಾನೆ. ಊರಿಂದ ಆಗಷ್ಟೇ ಬಂದಿಳಿದಿದ್ದರೂ, ನಾನು ಇದೆಲ್ಲಾ ನನ್ನ ತಲೆಯ ಮೇಲೆಯೇ ಬಿದ್ದಿರುವಂತೆ ಕಳವಳಗೊಳ್ಳುತ್ತಿದ್ದರೂ, ಅಪ್ಪ-ಮಕ್ಕಳು ಇವ್ಯಾವುದೂ ತಮಗೆ ಸಂಬಂಧವೇ ಇಲ್ಲವೆಂಬಂತೆ ಆರಾಮಾಗಿ ಮಲಗಿದ್ದಾರೆ’… ಇದು ತಾನು ನಾಲ್ಕು ದಿನ ಮನೆಯಲ್ಲಿ ಇಲ್ಲದಾಗ ಮನೆಯ ಸ್ಥಿತಿ ಎಂದು ಬಹಳಷ್ಟು ಗೃಹಿಣಿಯರು ವಿವರಿಸುತ್ತಾರೆ.

ಇಂಥ ಎಲ್ಲಕ್ಕೂ ಅಮ್ಮಂದಿರು ಪ್ರತಿಕ್ರಿಯಿಸುವ ರೀತಿ ಹೇಗೆ? ಕೂಗಾಡುವುದರ ಮೂಲಕ, ಕೂಗಾಡುತ್ತಲೇ ಕೆಲಸಗಳನ್ನು ಮಾಡಿ ಮುಗಿಸುವ ಅಮ್ಮಂದಿರು ಕೊನೆಗೆ “ಕೋಪಿಷ್ಟೆ ಅಮ್ಮ’ ಎಂಬ ಪಟ್ಟಿ ತಗಲಿಸುತ್ತಾರೆ!

ನೆಂಟರು ಬರ್ತಾರೆ… ದಾರಿ ಬಿಡಿ !
ಮಹಿಳೆಯರಲ್ಲಿ ಅಸಹನೆ-ಕೋಪ-ಸಿಡಿಮಿಡಿಗಳು ಬರುವ ಇನ್ನೊಂದು ಸಂದರ್ಭ, ನೆಂಟರ ಭೇಟಿ. ಆತಿಥ್ಯ ನೀಡಲೇಬೇಕೆನ್ನುವ ಲಿಖೀತ ಕರಾರು ಇಲ್ಲವಾದರೂ, ಯಾರೋ ಎನ್ನಬಹುದಾದ ಟೀಕೆಯ ಮಾತುಗಳಿಗೆ ಬಹಳಷ್ಟು ಮಹಿಳೆಯರು ಹೆದರುತ್ತಾರೆ. ಅದರಲ್ಲಿಯೂ ಗಂಡನ ಮನೆಯ ನೆಂಟರು ಬರುತ್ತಾರೆ ಎಂದಾಕ್ಷಣ ಅವರು ಬರುವುದೇ ತಮ್ಮನ್ನು ಪರೀಕ್ಷಿಸಲು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅದಕ್ಕೆ ಸರಿಯಾಗಿ ಮಹಿಳೆಯರ “ಅತಿಥಿಗಳಿಗೆ ಸರಿಯಾಗಿ ಉಪಚಾರ ನಡೆಸಬೇಕು’ ಎಂಬ ಈ ಮನೋಭಾವಕ್ಕೂ, “ಎಷ್ಟು ಜನ ಬಂದರೂ ಪರವಾಗಿಲ್ಲ, ತೊಂದರೆಯೇನಿಲ್ಲ, ಏನೋ, ಒಂದು ಮಾಡಿ ಕೊಟ್ಟರಾಯಿತು ಅಥವಾ ಏನೂ ಕೊಡದಿದ್ದರೂ ಪರವಾಗಿಲ್ಲ, ಮನೆ ಹೇಗಿದ್ದರೂ ಇದ್ದುಕೊಳ್ಳಲಿ, ಅವರೇನು ಮನೆ ನೋಡಲು ಬರುತ್ತಾರೆಯೇ?’ ಎಂಬ ಅಪ್ಪಂದಿರ ದಿವ್ಯ ನಿರ್ಲಕ್ಷ್ಯಕ್ಕೂ ಎಣ್ಣೆ-ಸೀಗೇಕಾಯಿ!

ಈ ನೆಂಟರಿಗೂ ಒಂದು ವಿಶಿಷ್ಟ ಗುಣವಿರುತ್ತದೆ. ಊಟದ ಸಮಯಕ್ಕೆ ಬಂದಿಳಿಯುವುದು, “ಊಟ ಬೇಡ, ಊಟ ಬೇಡ’ ಎಂದು ನಿರಾಕರಿಸುವುದು. ಅಡುಗೆ ಮಾಡಿ ಬಡಿಸಿದರೆ ಸ್ವಲ್ಪ ಸ್ವಲ್ಪವೇ ತಿಂದು ಮನೆಯ “ಅಮ್ಮಂದಿರು’ ಮುಂದಿನ ಮೂರು ದಿನ ಈ ಉಳಿದ ಪದಾರ್ಥಗಳನ್ನೇ ತಿನ್ನುವಂತೆ ಮಾಡುವುದು. ತಮಗೆ ಇಂಥ ಅನುಭವಗಳಾದ ಮೇಲೆ, ಆ ಎಚ್ಚರದಿಂದ ಇನ್ನೊಬ್ಬರ ಮನೆಗೆ ನೆಂಟರಾಗಿ ಹೋಗುವಾಗ ಈ ರೀತಿಯಾಗದಂತೆ ಎಚ್ಚರ ವಹಿಸುವವರ ಸಂಖ್ಯೆ ಬಹು ವಿರಳ. ಆಗ ನಾವು ನೆಂಟರಷ್ಟೇ! ಈ ವಿಶಿಷ್ಟ ಗುಣಗಳಿರದೆ ನೆಂಟರಾಗುವುದು ಹೇಗೆ ಸಾಧ್ಯ?! ಇಂಥ ನೆಂಟರೆದುರು “ಪರಿಪೂರ್ಣ’ರಾಗಿ (ಟಛಿrfಛಿcಠಿಜಿಟnಜಿsಠಿ) ಮನ್ನಣೆ ಗಳಿಸಬೇಕೆಂಬ ಹಂಬಲವೇ ಒತ್ತಡಕ್ಕೆ, ಕೋಪಕ್ಕೆ ಕಾರಣವಾಗುತ್ತದೆ. ಆಗಲೇ “ಇವಳಿಗೆ ನೆಂಟರು ಎಂದರೆ ಆಗದು. ಯಾರಾದರೂ ಮನಗೆ ಬರುತ್ತಾರೆ ಎಂದರೆ ಮುಗಿಯಿತು, ಇವಳ ಕಿರಿಕಿರಿ ಶುರು’ ಎಂಬ ಆರೋಪಕ್ಕೆ ಮಹಿಳೆಯರು ಗುರಿಯಾಗುವುದು.

“ಅಮ್ಮ’ನಿಗೆ “ಅಪ್ಪ’ನಷ್ಟು ತನ್ನ ಸಮಯವಿಲ್ಲ !
ಎಲ್ಲ ಮನೆಗಳಲ್ಲಿ ಅಪ್ಪಂದಿರಿಗೆ ಸಮಾನವಾಗಿ ಅಮ್ಮಂದಿರು ದುಡಿಯುತ್ತಾರೆ. ಕೆಲವೊಮ್ಮೆ ಅಮ್ಮಂದಿರು ಹೊರಗೆ-ಒಳಗೆ ಎರಡೂ ಕಡೆ ದುಡಿಯಬಹುದು. ಇನ್ನೂ ಕೆಲವು ಬಾರಿ ಸಂಬಳವಿ ಲ್ಲದೆ, ನಿರಂತರವಾಗಿ ಒಳಗೆ ದುಡಿಯಬಹುದು. ಆದರೆ, ಅಮ್ಮಂದಿರಿಗೆ ಒಂದಾದ ಮೇಲೆ ಒಂದು ಕೆಲಸ ಮಾಡುವುದು, ಮಕ್ಕಳ ಬಗ್ಗೆ ಚಿಂತಿಸುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಎಷ್ಟೆಂದರೆ, ಅವರಿಗೆ ಕೆಲವು ನಿಮಿಷಗಳ ಕಾಲ ಸುಮ್ಮನೆ ಕೂರುವುದೇ ಅಸಾಧ್ಯ ಎನಿಸುವಷ್ಟು . ಅವರ ದೂರು ಅಪ್ಪಂದಿರ ಮೇಲೆ ಏನು ಗೊತ್ತೆ? ಏನೇ ಕೆಲಸವಿದ್ದರೂ, ಅಪ್ಪಂದಿರು ತಮ್ಮ ಊಟ-ತಿಂಡಿ-ನಿದ್ರೆ-ಆರಾಮದ ಸಮಯವನ್ನು ತಪ್ಪಿಸಲಾರರು ಎಂಬುದು. ವೈದ್ಯರೇನಾದರೂ ಮಹಿಳೆಯರಿಗೆ ನೀವು “ವಾಕಿಂಗ್‌’ ಮಾಡಬೇಕು ಎಂದರೆ ಥಟ್ಟನೆ ಬರುವ ಉತ್ತರ “ಬೆಳಗ್ಗೆ ತಿಂಡಿ ಮಾಡಬೇಕು, ಮಕ್ಕಳಿಗೆ ಶಾಲೆಗೆ ಕಳಿಸಬೇಕು’ ಇತ್ಯಾದಿ ಇತ್ಯಾದಿ. ಹೀಗೇ ತನಗೆ ಸಮಯವಿಲ್ಲದೆ ಕೆಲಸ ಮಾಡುವುದರಲ್ಲಿ ಮಗ್ನವಾ ದಾಗ ಸಿಟ್ಟು ಬರಲು ಚಿಕ್ಕ ಕಾರಣಗಳೇ ಸಾಕು. ವಿಶ್ರಾಂತಿಯಿಲ್ಲದೆ ದುಡಿದರೂ “ಅಮ್ಮನಿಗೆ ಸಿಟ್ಟು’ ಎಂಬ ಹಣೆಪಟ್ಟಿ ತಗಲುತ್ತದೆ.

ಡಾ. ಕೆ. ಎಸ್‌. ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next