ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ. ಭಾರತದ ಈ ಕ್ರಮದಿಂದಾಗಿ ಜಗತ್ತಿನ ಹಲವಾರು ದೇಶಗಳು ಕಳವಳಕ್ಕೀಡಾಗಿವೆ. ಜಗತ್ತಿನ ಇಡೀ ಆಹಾರ ಪೂರೈಕೆ ಪ್ರಕ್ರಿಯೆ ಮೇಲೆಯೇ ಹೊಡೆತ ಬೀಳಬಹುದು ಎಂದು ಆತಂಕ ವ್ಯಕ್ತ ಪಡಿಸಿವೆ. ಹಾಗೆಯೇ ಜಿ7 ದೇಶಗಳೂ ಭಾರತದ ಕ್ರಮವನ್ನು ಟೀಕಿಸಿವೆ. ಹಾಗಾದರೆ ಭಾರತದ ಮೇಲೇಕೆ ಇಷ್ಟೊಂದು ಅವಲಂಬನೆ? ಈ ಬಗ್ಗೆ ಒಂದು ನೋಟ ಇಲ್ಲಿದೆ.
ರಫ್ತು ನಿಷೇಧ ಮಾಡಿದ್ದು ಏಕೆ?
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ದೇಶೀಯವಾಗಿ ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಅದರಂತೆ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯೂ ಹೆಚ್ಚಾಗಿದೆ. ಅಂದರೆ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಪ್ರಕಾರ ಶೇ. 20ರಿಂದ ಶೇ.40ರಷ್ಟು ಹೆಚ್ಚಾಗಿದೆ. ಹಾಗೆಯೇ ಪಡಿತರ ರೂಪದಲ್ಲಿಯೂ ಉಚಿತವಾಗಿ ಗೋಧಿ ನೀಡಬೇಕಾಗಿದೆ. ಹೀಗಾಗಿ ಗೋಧಿ ಮೇಲೆ ರಫ್ತು ಹೇರಲಾಗಿದೆ. ಅಲ್ಲದೆ ಒಂದು ವೇಳೆ ಕಡಿಮೆ ಉತ್ಪಾದನೆಯಾದರೆ, ಭಾರತದ 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವ ಕಾರಣದಿಂದಾಗಿ ರಫ್ತಿನ ಮೇಲೆ ನಿಷೇಧ ಹೇರಿದೆ.
ಜಾಗತಿಕವಾಗಿ ಏನು ಪರಿಣಾಮ?
ಭಾರತದಿಂದ ಪ್ರಮುಖವಾಗಿ ಬಾಂಗ್ಲಾದೇಶ, ಇಂಡೋನೇಶ್ಯಾ, ನೇಪಾಲ, ಟರ್ಕಿ ಮತ್ತು ಈಜಿಪ್ಟ್ಗೆ ಗೋಧಿಯನ್ನು ರಫ್ತು ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯವಾಗಿ ಗೋಧಿ ರಫ್ತು ನಿಷೇಧ ಮಾಡಿದ್ದರೂ ಹಿಂದಿನಿಂದಲೂ ಖರೀದಿ ಮಾಡಿಕೊಂಡು ಬಂದಿರುವ ಮತ್ತು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಗೋಧಿ ಪೂರೈಸುವುದಾಗಿ ಭಾರತ ಹೇಳಿದೆ.
ಬಿಸಿಗಾಳಿಯಿಂದ ಅಡ್ಡಪರಿಣಾಮ
ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಗೋಧಿ ಬೆಳೆಯುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಚೀನಗೆ ಮೊದಲ ಸ್ಥಾನ. ಕಳೆದ ಐದು ವರ್ಷಗಳ ಋತುಗಳಲ್ಲಿ ಭಾರತದಲ್ಲಿ ಗೋಧಿ ಉತ್ಪಾದನೆ ಹೆಚ್ಚಳವಾಗಿತ್ತು. ಹೀಗಾಗಿ ಈ ವರ್ಷ 12 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಲು ಭಾರತ ಚಿಂತನೆ ಹಾಕಿ ಕೊಂಡಿತ್ತು. ಆದರೆ ಇತ್ತೀಚೆಗೆ ಉತ್ತರ ಭಾರತದಲ್ಲಿ ಭಾರೀ ಬಿಸಿಹವೆ ಕಾಣಿಸಿಕೊಂಡಿರುವುದರಿಂದ ಗೋಧಿ ಬೆಳೆಯ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಫ್ತು ಪ್ರಮಾಣ ಕಡಿಮೆ ಮಾಡಲು ಚಿಂತನೆ ಹಾಕಿಕೊಂಡಿದೆ.