Advertisement

ನಮ್ಮ ಋತುಸ್ರಾವದ ಮೇಲೆ ಯಾಕೆ ಈ ಪ್ರಮಾಣದ ತೆರಿಗೆ?

11:19 AM Jul 04, 2017 | Team Udayavani |

ಬೆಂಗಳೂರು: “ಸೆಕ್ಸ್‌ ಎಂಬುದು ಆಯ್ಕೆ, ಆದರೆ ಋತುಸ್ರಾವ ಆಯ್ಕೆಯಲ್ಲ. ಕಾಂಡೋಮ್‌ ತೆರಿಗೆ ರಹಿತವಾಗಿರುವಾಗ ನ್ಯಾಪಕೀನ್‌ ಮೇಲೆ ತೆರಿಗೆ ವಿಧಿಸುತ್ತಿರುವುದು ಯಾಕೆ?’ ಇದು ರಾಜ್ಯದ ಮಹಿಳೆಯರು ಪ್ರಧಾನಿ ಮೋದಿ ಮತ್ತು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಕೇಳುತ್ತಿರುವ ಪ್ರಶ್ನೆ. ಅಷ್ಟಕ್ಕೂ ಈ ಪ್ರಶ್ನೆ ಕೇಳಲು ಕಾರಣವಿದೆ.

Advertisement

ಶನಿವಾರ ಕೇಂದ್ರ ಸರ್ಕಾರ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಸ್ಯಾನಿಟರಿ ನ್ಯಾಪಿನ್‌ಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿದೆ. ಕೇಂದ್ರದ ಈ ಕ್ರಮದ ವಿರುದ್ಧ ಕರ್ನಾಟಕದ ಮಹಿಳೆಯರು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದೊಂದು ಅಭಿಯಾನ ಆರಂಭಿಸಿದ್ದಾರೆ.

ಇದಕ್ಕೆ ರಾಜ್ಯದ ವಿವಿಧ ಸ್ಥರಗಳ ಮಹಿಳೆಯರು ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. “ಸ್ಯಾನಿಟರಿ ಪ್ಯಾಡ್‌ ಮೇಲೆ ಲಕ್ಷುರಿ ತೆರಿಗೆ ವಿಧಿಸಿ ಕೇಂದ್ರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಜಾಲತಾಣಗಳಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಡು ನಾಟ್‌ ಟ್ಯಾಕ್ಸ್‌ ಮೈ ಪೀರಿಯಡ್ಸ್‌’ ಎಂಬ ಹೆಸರಿನಲ್ಲಿ ಕೇಂದ್ರಕ್ಕೆ ಸ್ಯಾನಿಟರಿ ಪ್ಯಾಡ್‌ಗಳ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.

“ಕುಂಕುಮ, ಬಳೆಗಳನ್ನು ಸರ್ಕಾರ ತೆರಿಗೆರಹಿತ ಮಾಡಿದೆ. ಅದಾವುದೂ ಮಹಿಳೆಯರಿಗೆ ಅತ್ಯಗತ್ಯ ವಸ್ತುಗಳಲ್ಲ. ಆದರೆ ಸ್ಯಾನಿಟರಿ ಪ್ಯಾಡ್‌ ಅತ್ಯಂತ ಅಗತ್ಯವಸ್ತು. ನೈರ್ಮಲ್ಯದ ಕುರಿತು ಬೋಧನೆ ಮಾಡುವ ಸರ್ಕಾರವೇ, ಮಹಿಳೆಯರ ವೈಯಕ್ತಿಕ ನೈರ್ಮಲ್ಯವನ್ನು ಕಡೆಗಣಿಸಿದರೆ ಹೇಗೆ? ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಆರೋಗ್ಯದ ಕುರಿತು ಕಾಳಜಿ ಇದ್ದರೆ ನ್ಯಾಪಕೀನ್‌ ಪ್ಯಾಡನ್ನು ಸಬ್ಸಿಡಿ ದರದಲ್ಲಿ ನೀಡಲಿ’ ಎಂದು ಆಗ್ರಹಿಸಿದ್ದಾರೆ. 

ಇದಷ್ಟೇ ಅಲ್ಲ, ಸಾಕಷ್ಟು ಮಹಿಳೆಯರು ಮೋದಿ ಜಿಎಸ್‌ಟಿಯನ್ನು “ಗುಡ್‌ ಆ್ಯಂಡ್‌ ಸಿಂಪಲ್‌ ಟ್ಯಾಕ್ಸ್‌’ ಎಂದು ವ್ಯಾಖ್ಯಾನಿಸಿದ್ದರ ಕುರಿತೇ ಈಗ ತಿರುಗಿ ಬಿದ್ದಿದ್ದಾರೆ. ‘ಜಿಎಸ್‌ಟಿ ಸಮಿತಿಯಲ್ಲಿ ಕೇವಲ ಪುರುಷರೇ ಇದ್ದರು. ಅವರಿಗೆ ಋತುಸ್ರಾವದ  ಸಮಸ್ಯೆ ಇರುವುದಿಲ್ಲವಲ್ಲ, ಅದಕ್ಕೇ ಸ್ಯಾನಿಟರಿ ಪ್ಯಾಡ್‌ ಮೇಲೆ ದುಬಾರಿ ತೆರಿಗೆ ವಿಧಿಸಿದ್ದಾರೆ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ. 

Advertisement

ಗ್ರಾಮೀಣ ಭಾಗದ ಎಷ್ಟೋ ಬಾಲಕಿಯರು ಋತುಸ್ರಾವ ಆರಂಭವಾಗುತ್ತಿದ್ದಂತೆ ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಕಾರಣ ಅವರಿಗೆ ಸ್ಯಾನಿಟರಿ ಪ್ಯಾಡ್‌ ಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಮೊದಲೇ ದುಬಾರಿ ವಸ್ತುಗಳು ಅವು. ಅಂಥದರಲ್ಲಿ ಅದರ ಮೇಲೆ ಮತ್ತಷ್ಟು ತೆರಿಗೆ ವಿಧಿಸಿ ಅದು ಬಡ ಮಹಿಳೆಯರ ಕೈಗೆಟುಕದಂತೆ ಮಾಡುವುದು ಎಷ್ಟು  ಸರಿ? ವೈಯಕ್ತಿಕ ಶುಚಿತ್ವಕ್ಕೆ ಎಲ್ಲದಕ್ಕಿಂತ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಫೇಸ್‌ಬುಕ್‌ ಬಳಕೆದಾರರೊಬ್ಬರು ಹೇಳಿದ್ದಾರೆ.

ಈ ಅಭಿಯಾನಕ್ಕೆ ಬೆಂಗಳೂರಿನ ಖ್ಯಾತ ಸ್ತ್ರೀ ರೋಗ ತಜ್ಞೆ ಪದ್ಮಿನಿ ಪ್ರಸಾದ್‌ ಕೂಡ ಬೆಂಬಲ ಸೂಚಿಸಿದ್ದಾರೆ. “ಇಂದಿನ ದಿನಗಳಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ ಕೊಳ್ಳುವಷ್ಟು ಶಕ್ತರಿಲ್ಲ. ನಾನು ಈ ಅಭಿಯಾನವನ್ನುಬೆಂಬಲಿಸುತ್ತೇನೆ’ ಎಂದು ಹೇಳಿದ್ದಾರೆ. “ಸರಾಸರಿ 12ನೇ ವಯಸ್ಸಿನಿಂದ 50 ವರ್ಷ ವಯಸ್ಸಿನವರೆಗಿನ ಬಹುತೇಕ ಮಹಿಳೆಯರು ಒಂದು ವರ್ಷದಲ್ಲಿ 60 ರಿಂದ 65 ದಿನಗಳ ಕಾಲ ಮುಟ್ಟಿನಲ್ಲಿರುತ್ತಾರೆ. 

ಸ್ಯಾನಿಟರಿ ಪ್ಯಾಡ್‌ಗಳು ದುಬಾರಿಯಾದರೆ ಅವರು ಅದನ್ನು ಮುಟ್ಟು ನಿರ್ವಹಿಸಲು ಅನಾರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇದರಿಂದ ಮಹಿಳೆಯರ ಒಟ್ಟಾರೆ ಅರೋಗ್ಯದ ಮೇಲೆ ದುಷ್ಪರಿ  ಣಾಮ ಉಂಟಾಗುತ್ತದೆ’ ಎಂದು ಇನ್ನೂ ಕೆಲ ವೈದ್ಯರು ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಮತ್ತೂಬ್ಬ ಮಹಿಳೆ ಹೀಗೆ ಟ್ವೀಟ್‌ ಮಾಡಿದ್ದಾರೆ. “ಸ್ಯಾನಿಟರಿ ಪ್ಯಾಡ್‌ ಮೇಲೆ ಐಷಾರಾಮಿ ತೆರಿಗೆ ವಿಧಿಸಿದ ಕಾರಣವೇನು? ಋತುಸ್ರಾವ ಶ್ರೀಮಂತ ಮಹಿಳೆಯರಿಗೆ ಮಾತ್ರ ಆಗುತ್ತದೆಯೇ? ಸ್ಯಾನಿಟರಿ ಪ್ಯಾಡ್‌ ಮಹಿಳೆಯರ ಅಗತ್ಯ, ಅದು ಐಷಾರಾಮಿ ವಸ್ತುವಲ್ಲ ಎಂದು ಅರ್ಥ ಮಾಡಿಕೊಳ್ಳುವ ಸಮಯವಿದು’ ಎಂದಿದ್ದಾರೆ.
 
* ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next