Advertisement

ಕಾಯ್ದೆಗೆ ತಡೆ ಇದ್ದರೂ ಪ್ರತಿಭಟನೆ ಯಾಕೆ?

12:32 AM Oct 05, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ನಾವೇ ತಡೆಯಾಜ್ಞೆ ನೀಡಿದ್ದೇವೆ. ಹೀಗಿದ್ದರೂ ಪ್ರತಿಭಟನೆ ಏಕೆ ಮುಂದುವರಿದಿದೆ? ಇದು ಯಾರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ?

Advertisement

– ಹೀಗೆಂದು ಪ್ರತಿಭಟನನಿರತ ರೈತರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಹೊಸದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕು ಎಂದು ಕಿಸಾನ್‌ ಪಂಚಾಯತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎ.ಎಂ. ಖಾನ್ವಿಲ್ಕರ್‌ ಮತ್ತು ನ್ಯಾ| ಸಿ.ಟಿ. ರವಿ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಸದ್ಯ 3 ಕಾಯ್ದೆಗಳ ಜಾರಿಗೆ ತಡೆಯಾಜ್ಞೆ ನೀಡಲಾಗಿದೆ. ಹೀಗಿದ್ದರೂ ಯಾರ ವಿರುದ್ಧ ಪ್ರತಿ ಭಟನೆ ನಡೆಸಲಾಗುತ್ತಿದೆ? ಅದಕ್ಕೆ ಶಾಸಕಾಂಗ ಹೇಗೆ ಅವಕಾಶ ನೀಡಿದೆ ಎಂದು ನ್ಯಾಯ ಪೀಠ ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಅಜಯ್‌ ಚೌಧರಿ, ರೈತರ ಪ್ರತಿಭಟನೆ ಕೇವಲ 3 ಕಾಯ್ದೆಗಳ ವಿರುದ್ಧ ಅಲ್ಲ. ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗಾಗಿಯೂ ನಡೆಯುತ್ತಿದೆ ಎಂದರು.

ಕಾಯ್ದೆ ವಿರುದ್ಧ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗಳು ಅದೇ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಬಹುದೇ ಎಂದು ನ್ಯಾಯಪೀಠ ಪ್ರಶ್ನಿಸಿತು.

Advertisement

ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಉನ್ನತ ನ್ಯಾಯಾಲಯ ದಲ್ಲಿ ಕಾಯ್ದೆ ಬಗ್ಗೆ ವಿಚಾರಣೆ ನಡೆಯುತ್ತಿರುವಾಗ ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತಿಲ್ಲ ಎಂದರು. ಕಾಯ್ದೆಗಳ ವಿರುದ್ಧ ವಿಚಾರಣೆ ನಡೆಯು ತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಅವಕಾಶ ಇದೆಯೇ ಮತ್ತು ಅದರಿಂದ ಕಾನೂನಾತ್ಮಕ ಸಮಸ್ಯೆಗಳು ಉಂಟಾಗಲಿವೆಯೇ ಎಂಬ ಬಗ್ಗೆ ಪರಿಶೀಲಿಸುವು ದಾಗಿ ನ್ಯಾಯಪೀಠವು ತಿಳಿಸಿತು.

ಇದನ್ನೂ ಓದಿ: ಪ್ರಿಯಾಂಕಾ ಕಸಗುಡಿಸುವ ವೀಡಿಯೋ ವೈರಲ್‌!

43 ರೈತ ಸಂಘಟನೆಗಳಿಗೆ ನೋಟಿಸ್‌
ಹೊಸದಿಲ್ಲಿಯ ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ಹತ್ತು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವಿರುದ್ಧ ಸುಪ್ರೀಂಕೋರ್ಟ್‌ನ ಮತ್ತೊಂದು ನ್ಯಾಯಪೀಠ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌, ದರ್ಶನ್‌ ಪಾಲ್‌, ಗುರ್ನಾಮ್‌ ಸಿಂಗ್‌ ಸಹಿತ 43 ರೈತ ಸಂಘಟನೆಗಳಿಗೆ ನೋಟಿ ಸ್‌ ನೀಡಿದೆ. ರೈತರಿಂದ ರಸ್ತೆ ತಡೆ ಪ್ರಶ್ನಿಸಿ ಹರಿಯಾಣ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎಸ್‌.ಕೆ. ಕೌಲ್‌ ಮತ್ತು ನ್ಯಾ| ಎಂ.ಎಂ. ಸುಂದರೇಶ್‌ ಅವರಿದ್ದ ನ್ಯಾಯಪೀಠ ಈ ಕ್ರಮ ಕೈಗೊಂಡಿದೆ.

ಒಟ್ಟು 43 ಮಂದಿಗಳನ್ನು ಪ್ರತಿವಾದಿಗಳ ನ್ನಾಗಿ ಹೆಸರಿಸಿದ್ದೀರಿ. ಅವರೆಲ್ಲರಿಗೆ ಹೇಗೆ ನೋಟಿಸ್‌ ನೀಡುತ್ತೀರಿ ಎಂಬ ನ್ಯಾಯ ಪೀಠದ ಪ್ರಶ್ನೆಗೆ ಉತ್ತರಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ರಾಜ್ಯ ಸರಕಾರ ಕಾಯ್ದೆಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿತ್ತು. ಆದರೆ ಸೆ. 19ರಂದು ಆಯೋಜಿಸಲಾಗಿದ್ದ ಸಭೆಯನ್ನು ರೈತ ಮುಖಂಡರು ಬಹಿಷ್ಕರಿಸಿದ್ದರು ಎಂದರು.

ಕೊನೆಗೆ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಪ್ರತಿಭಟನೆ ನಡೆಸಬಹುದೇ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಪರಿಶೀಲಿಸುವುದಾಗಿ ಹೇಳಿದ ಪೀಠ, ಅ. 20ಕ್ಕೆ ವಿಚಾರಣೆಯನ್ನು ಮುಂದೂಡಿತು.

ಹೊಣೆ ಹೊರುವವರು ಯಾರೂ ಇಲ್ಲ
ಲಖೀಂಪುರ ಖೇರಿ ಘಟನೆ ಬಗ್ಗೆಯೂ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾವವಾಯಿತು. ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ವಿಚಾರವನ್ನೆತ್ತಿ, ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಪ್ರತಿಭಟನೆಗಳು ನಿಲ್ಲಬೇಕು. ಲಖೀಂಪುರದಲ್ಲಿ ರವಿವಾರ ಅನಪೇಕ್ಷಿತ ಘಟನೆ ನಡೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಇಂಥ ಹಿಂಸಾತ್ಮಕ ಘಟನೆಗಳು ನಡೆದಾಗ ಯಾರೂ ಹೊಣೆ ಹೊತ್ತುಕೊಳ್ಳುವುದಿಲ್ಲ. ಇಂಥ ಘಟನೆಗಳ ವೇಳೆ ಬಹಳಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಸಾವುಗಳು ಸಂಭ ವಿಸುತ್ತವೆ. ಇದಕ್ಕೆ ಯಾರೂ ಜವಾಬ್ದಾರರಾಗುವುದಿಲ್ಲ ಎಂದಿತು.

ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ
ಲಕ್ನೋ/ಲಖೀಂಪುರ್‌ ಖೇರಿ: ಒಟ್ಟು ಒಂಬತ್ತು ಮಂದಿಯ ಸಾವಿಗೆ ಕಾರಣವಾಗಿರುವ ಲಖೀಂಪುರ್‌ ಖೇರಿ ಗಲಭೆಯ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರ ತೀರ್ಮಾನಿಸಿದೆ. ಹಿಂಸೆಯಲ್ಲಿ ಅಸುನೀಗಿದವರ ಕುಟುಂಬ ಸದಸ್ಯರಿಗೆ ತಲಾ 45 ಲಕ್ಷ ರೂ. ಪರಿಹಾರ ಪ್ರಕಟಿಸಿದೆ. ಗಾಯಗೊಂಡವರಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಪರಿಹಾರವನ್ನೂ ಪ್ರಕಟಿಸಲಾಗಿದೆ. ಪರಿಹಾರ ಮತ್ತು ತನಿಖೆಯ ಭರವಸೆಯನ್ನು ರೈತರಿಗೆ ನೀಡಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರಿಹಾರ ಮಾತ್ರವಲ್ಲದೆ ಅಸುನೀಗಿದವರ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಸ್ಥಳೀಯವಾಗಿ ಸರಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಉ.ಪ್ರ. ಸರಕಾರ ತಿಳಿಸಿದೆ.
ಇದರ ನಡುವೆ ಲಖೀಂಪುರಖೇರಿಗೆ ತೆರಳಲು ಪ್ರಯತ್ನಿಸಿದ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ನೋದ ಅಖೀಲೇಶ್‌ ಯಾದವ್‌ ನಿವಾಸದ ಮುಂದೆಯೂ ಹೈಡ್ರಾಮಾ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next