Advertisement
ಶಾಲಾ ಉಡುಗೆಯಲ್ಲೇ ಇರುವ ಆಕೆ, ಕನಿಷ್ಠ ಮೂಗಿನ ಕೆಳಗೆ ಕಪ್ಪು ಸಹ ಮೂಡದ ಆತ ಆ ಎರಡು ದೇಹಗಳು ಮರದಲ್ಲಿ ನೇತಾಡುತ್ತಿದ್ದರೆ ಯಾರ ಕರುಳಾದರೂ ಕಿತ್ತು ಬರದೇ ಇರದು. ಕೇವಲ ಜ್ವರ ಬಂದ ಕಾರಣಕ್ಕೆ ಆ ಹೆಣ್ಣು ಮಗಳನ್ನು ಎತ್ತಿಕೊಂಡು ಆ ತಂದೆ ತಾಯಿಗಳು ಅದೆಷ್ಟು ಆಸ್ಪತ್ರೆಗಳನ್ನು ಸುತ್ತಿ ಉಳಿಸಿಕೊಂಡಿದ್ದರೋ? ಮನೆಗೆ ಗಂಡು ಹುಟ್ಟಿದ ಎಂಬ ಕಾರಣಕ್ಕೆ ಆತನ ತಂದೆ ತಾಯಿ ಸಿಹಿ ಹಂಚಿ ಅದೆಷ್ಟು ಸಂಭ್ರಮಿಸಿದ್ದರೋ? ಅದೆಲ್ಲವೂ ಒಂದು ಕ್ಷಣದಲ್ಲಿ ಮಣ್ಣಾಗಿತ್ತು.ಬಹುಶಃ ಅಂತಹ ಘಟನೆಯನ್ನು ಆ ಜಿಲ್ಲೆ ಇದುವರೆಗೂ ನೋಡಿರಲಾರದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಒಂದು ಊರು. ಆಕೆ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಆತ ಪಿಯುಸಿ. ಬಸ್ಸಿನಲ್ಲಿ ಒಟ್ಟಿಗೆ ಹೋಗಿ ಬರುವಾಗ ಒಂದು ಸೆಳೆತಕ್ಕೆ ಒಳಗಾಗಿದ್ದರು. ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಗೆ ಹಠ ಹಿಡಿದರೆ ಯಾರು ತಾನೆ ಒಪ್ಪಲು ಸಾಧ್ಯ? ಒಪ್ಪದೇ ಇರುವ ಒಂದೇ ಕಾರಣಕ್ಕೆ ಎಂತಹ ಆತುರದ ನಿರ್ಧಾರ!
Related Articles
Advertisement
ಇನ್ನು ಪೋಷಕರ ವಿಷಯಕ್ಕೆ ಬರೋಣ. ಮಗುವೊಂದು ಬೇರೆ ಕಡೆ ಏನನ್ನೋ ಹುಡುಕುತ್ತಿದೆ ಎಂದರೆ ಮನೆಯಲ್ಲಿ ಪ್ರೀತಿ ಕಡಿಮೆಯಾಗಿದೆ ಎಂದೇ ಅರ್ಥವಲ್ಲವೇ? ಬಹುತೇಕ ಬಾರಿ ಪ್ರೀತಿಯೆಂಬ ವ್ಯಾಮೋಹಕ್ಕೆ ಅವರು ಸಿಲುಕುವುದೂ ಕೂಡ ಮನೆಯಲ್ಲಿನ ನಿಷ್ಕಾಳಜಿಯಿಂದಾಗಿ ಮನಸ್ಸಿನಲ್ಲಿ ಸೃಷ್ಟಿಯಾದ ನಿರ್ವಾತವನ್ನು ತುಂಬುವುದಕ್ಕಾಗಿಯೇ. ನಿಮ್ಮ ಕಾಳಜಿ ಕಡಿಮೆಯಾಗಿದೆ. ನಿಮ್ಮ ನಿಗಾ ಕಡಿಮೆಯಾಗಿದೆ, ಇಲ್ಲವೇ ಸಾಕಷ್ಟು ಬಿಗಿಯಲ್ಲಿಟ್ಟಿದ್ದೀರಿ ಎಂದೇ ಅರ್ಥ. ಇನ್ನೂ ಕೆಲವು ಪೋಷಕರು ತಮ್ಮ ಕಷ್ಟಗಳು, ತಮ್ಮ ಬದುಕು, ತಮ್ಮ ಕನಸುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದಿಲ್ಲ. ಮಕ್ಕಳು ಸುಖವಾಗಿರಲಿ ಎಂದು ಒಂದು ಡಬ್ಬಿಯಲ್ಲಿ ಹಾಕಿಟ್ಟ ಒಡವೆಯಂತೆ ನೋಡಿಕೊಳ್ಳುತ್ತಾರೆ. ಇದರಿಂದಾಗಿ ಬದುಕನ್ನು ದಿಟ್ಟತನದಿಂದ ಎದುರಿಸುವ ಗುಣವೇ ಮಕ್ಕಳಲ್ಲಿ ಬೆಳೆಯುವುದಿಲ್ಲ.
ವೈಫಲ್ಯವೆನ್ನುವುದು ಘೋರ ಅಪರಾಧ ಎಂಬ ಭಾವನೆ ಅವರಲ್ಲಿ ಬಂದುಬಿಡುತ್ತದೆ. ಸಣ್ಣ ಸಣ್ಣ ಸೋಲಿಗೂ ಸಾವೇ ಪರಿಹಾರ ಎಂದು ಭಾವಿಸಿಬಿಡುತ್ತಾರೆ. ಇದೆಲ್ಲದರ ಜೊತೆಗೆ ಅಕ್ಕ ಪಕ್ಕದ ಮನೆಯವರು, ಒಡನಾಡಿಗಳು, ಶಾಲೆಯ ಶಿಕ್ಷಕರು, ಊರು ಕೇರಿಯ ಜನರು ಮಕ್ಕಳನ್ನು ನೋಡುವ, ನೋಡಿಕೊಳ್ಳುವ, ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಎಲ್ಲೋ ಹದ ತಪ್ಪಿದೆ ಅನ್ನಿಸುವುದಿಲ್ಲವೇ? ಹಿಂದೆ ಒಂದು ಮಗುವಿಗೆ ಅಪ್ಪ ಅಮ್ಮನದ್ದಷ್ಟೇ ಅಲ್ಲ, ಊರಿನ ಹಿರಿಯರ ಮಾರ್ಗದರ್ಶನವೂ ಇರುತ್ತಿತ್ತು. ಆದರೆ ಈಗ ಕೂಡು ಕುಟಂಬಗಳು, ಆಪ್ತ ಸಾಮಾಜಿಕ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ತಮ್ಮ ನೋವಿನಲ್ಲಿ ಒಂಟಿಯಾಗುತ್ತಿದ್ದಾರೆ.
ಪ್ರೀತಿ ಪ್ರೇಮ, ಪರೀಕ್ಷೆಯಲ್ಲಿ ಫೇಲು, ಮಾಸ್ತರರ ಗದರಿಕೆ, ತಂದೆ ತಾಯಿಯ ಜೋರು ಮಾತಿಗೂ ನೇರವಾಗಿ ಸಾವನ್ನು ಆಯ್ಕೆ ಮಾಡಿಕೊಂಡಿರುವ ಘಟನೆಗಳು ದಿನ ನಿತ್ಯವೂ ಪತ್ರಿಕೆಯಲ್ಲಿ ತುಂಬಿರುತ್ತವೆ. ಇದು ಅನಾರೋಗ್ಯಕರ ಸಮಾಜದ ಲಕ್ಷಣ. ಮಕ್ಕಳನ್ನು ಬೆಳೆಸುವ ರೀತಿಯೇ ದೋಷಪೂರಿತವಾಗಿದೆ ಎಂದರ್ಥ. ಹದಿಹರೆಯದ ಸಮಯದಲ್ಲಿ ಮಕ್ಕಳಲ್ಲಿ ತೀವ್ರ ವೇಗದಲ್ಲಿ ದೈಹಿಕ ಮಾನಸಿಕ ಬದಲಾವಣೆಗಳಾಗುತ್ತವೆ. ತಮಗೆ ಏನಾಗುತ್ತಿದೆ ಎನ್ನುವ ಅರಿವೂ ಅವರಿಗೆ ಇರುವುದಿಲ್ಲ. ಇದರೊಟ್ಟಿಗೆ ಬದುಕಿನ ಮೌಲ್ಯಗಳು, ಜೀವನದ ಆಗಾಧತೆ, ಕಷ್ಟಗಳು, ವೈಫಲ್ಯಗಳನ್ನು ಎದುರಿಸುವ ಪರಿ ಇವೆಲ್ಲವೂ ಅವರಿಗೆ ಗೊತ್ತಾಗಬೇಕು. ಒಟ್ಟಲ್ಲಿ ನಿಜಕ್ಕೂ ಇಂತಹ ಘಟನೆಗಳು ಖೇದಕರ. ಈ ವಿಷಯದಲ್ಲಿ ರಾಜ್ಯ ಮಟ್ಟದಲ್ಲಿ ಚರ್ಚೆಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದಕ್ಕಾಗಿ ಒಂದು ಸಮಾಜವಾಗಿ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅನೇಕ ಮೊಗ್ಗುಗಳು ಅರಳಿ ಬದುಕು ನೋಡುವ ಮುನ್ನವೇ ಉರುಳಿ ಬೀಳುತ್ತವೆ.
– ಸದಾಶಿವ್ ಸೊರಟೂರು