ಮದುವೆ ಅಂದರೆ ಸಾಕು, ಹೆಣ್ಮಕ್ಕಳ ಮೊಗದಲ್ಲಿ ನಸು ನಗು ಮೂಡುತ್ತದೆ. ನಾಚಿಕೆಯಿಂದ ಕೆನ್ನೆ ಕೆಂಪಾಗುತ್ತದೆ. ಕನಸಿನ ರಾಜಕುಮಾರನ ಕಲ್ಪನೆಯಲ್ಲೇ ಮನದೊಳಗೆ ಮಧುರ ಭಾವನೆಗಳು ಮೂಡುತ್ತವೆ. ಹೊಸ ಬದುಕಿನ ಬಗೆಗೆ ಹೊಸ ಕನಸುಗಳು ಜೀವ ತಾಳುತ್ತವೆ. ಹೊಸ ಬಾಂಧವ್ಯ ಹೊತ್ತು ತರುವ ಮದುವೆ ಅನ್ನೋ ಬಂಧ ಪ್ರತಿ ಹೆಣ್ಣುಮಗಳ ಪಾಲಿಗೂ ಅತ್ಯಮೂಲ್ಯ ಘಟ್ಟ.
ಹುಟ್ಟಿ ಬೆಳೆದ ಮನೆ ಅಂದಮೇಲೆ, ಅಲ್ಲಿ ಇನ್ನಿಲ್ಲದ ಅಕ್ಕರೆ ಇದ್ದೇ ಇರುತ್ತದೆ. ಮನೆಯ ರೂಮು, ಸುತ್ತಮುತ್ತಲ ಪರಿಸರ, ನಾಯಿ- ಬೆಕ್ಕುಗಳು ಎಲ್ಲವೂ ಹೃದಯಕ್ಕೆ ಹತ್ತಿರವಾಗಿರುತ್ತವೆ. ಹಾಗೆ ಪ್ರೀತಿಸಿದ ಪರಿಸರವನ್ನು ಬಿಟ್ಟು ಮತ್ತೆಲ್ಲೋ ಹೋಗಿ ನೆಲೆಸಬೇಕೆಂದರೆ, ಸಹಜವಾಗಿಯೇ ಬೇಸರ ಉಕ್ಕುತ್ತದೆ. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ನಲ್ಲಿದ್ದು, ಸ್ಟಡೀಸ್ ಮುಗಿಸಿ ಹೊರಟಾಗ ಕಣ್ಣಂಚು ತೇವಗೊಳ್ಳುತ್ತದೆ.
ವರ್ಷಗಳ ಕಾಲ ಇದ್ದ ಆ ಪುಟ್ಟ ರೂಮಿಗೆ ಅಷ್ಟೊಂದು ಒಗ್ಗಿಹೋಗಿರುತ್ತೇವೆ. ಉದ್ಯೋಗದ ನಿಮಿತ್ತ ಬೇರೆ ಊರಿಗೆ ತೆರಳಿ ರೂಮು ಮಾಡಿ, ವಾಪಸು ಮರಳಿ ಊರಿಗೆ ಹೋಗುವಾಗಲೂ ಅದೇ ಬೇಸರ. ಆ ಹಾಲ್, ರೂಮ್, ಸುತ್ತಮುತ್ತಲ ಪರಿಸರ, ಜನರು- ಎಲ್ಲರ ನೆನಪೂ ಕಾಡುತ್ತದೆ. ಹಾಸ್ಟೆಲ್, ರೂಮು ಬಿಟ್ಟು ಬರುವಾಗಲೇ ಹೀಗಾದ್ರೆ, ಹುಟ್ಟಿ ಆಡಿ ಬೆಳೆದು ಮನೆಯನ್ನು ಶಾಶ್ವತವಾಗಿ ತೊರೆದು ಹೋಗುವ ಹೆಣ್ಣಿನ ಮನಸ್ಸಿನ ತುಮುಲ ಹೇಗಿರಬೇಡ?
ಜಗತ್ತಿನ ಯಾವುದೇ ಮನೆಗೆ ಹೋಗಿ, ಹೆಣ್ಣಮಗಳಿದ್ದರಷ್ಟೇ ಆ ಮನೆಗೆ ಜೀವಕಳೆ. “ವಟವಟ’ ಎನ್ನುತ್ತಾ, ಆಕೆ ಮನೆ ತುಂಬೆಲ್ಲಾ ಓಡಾಡುತ್ತಿದ್ದರೆ, ಅಲ್ಲೊಂದು ಲವಲವಿಕೆ ಜಿನುಗುತ್ತಿರುತ್ತದೆ. ಯಾರೂ ಹೇಳಿಕೊಳ್ಳದ ಅಪ್ಪನ ಸಮಸ್ಯೆ ಅರ್ಥವಾಗಲು ಮಗಳೇ ಬೇಕು. ಅಮ್ಮನಿಗೆ ಅಡುಗೆ ಮನೆಯಲ್ಲಿ ಮಗಳು ಇದ್ದರಷ್ಟೇ ನಿರಾಳ. ಗಂಟೆಗೊಮ್ಮೆ ಜಗಳ ಕಾಯಲು, ಕಾಲೆಳೆಯಲು ತಮ್ಮಂದಿರಿಗೂ ಅಕ್ಕ ಜತೆಗೇ ಇರಬೇಕು.
ಹೀಗಾಗಿಯೇ, ಮನೆ ಮಗಳು ಮನೆ ಬಿಟ್ಟು ಹೋಗುತ್ತಾಳೆಂದರೆ ಅವರಲ್ಲೂ ನೀರವ ಮೌನ. ಮದುವೆಯ ಹಿಂದಿನ ದಿನದವರೆಗೂ ಉತ್ಸಾಹದಿಂದ ನಗುನಗುತ್ತಾ ಕೆಲಸ ಮಾಡುವ ಅಪ್ಪ ಸಂಜೆಯಾಗುತ್ತಿದ್ದಂತೆ, ಇದ್ದಕ್ಕಿದ್ದಂತೆ ಸಪ್ಪೆ. ಮಗಳನ್ನು ಬಾಚಿ ತಬ್ಬಿಕೊಂಡ ತಾಯಿಯ ಕಣ್ಣಲ್ಲಿ ಧಾರಾಕಾರ ನೀರು. ಫ್ರೆಂಡ್ಸನ್ನೆಲ್ಲಾ ಕರಕೊಂಡು ಬಂದು ಮದುವೆ ಮನೆಯಲ್ಲಿ ಫುಲ್ ಬಿಂದಾಸ್ ಆಗಿದ್ದ ತಮ್ಮಂದಿರ ಕಣ್ಣಂಚೂ ಒದ್ದೆ ಒದ್ದೆ.
ಮದುಮಗಳು ಹೊಸ್ತಿಲು ದಾಟಿ ಹೊರಹೋದ ಕ್ಷಣ ಎಲ್ಲರ ಮನಸ್ಸೂ ಭಾರ. ಎಲ್ಲರಿಂದಲೂ ಕಣ್ಣೀರಿನ ವಿದಾಯ. ಮದುವೆ ಅನ್ನೋದು ಹೊಸ ಅನುಬಂಧ. ಈ ಬಂಧ ಬರೀ ಹೆಣ್ಣು- ಗಂಡು ಇಬ್ಬರ ಪಾಲಿಗಷ್ಟೇ ಅಲ್ಲ. ಅದು ಹೊಸ ಸಂಬಂಧಗಳನ್ನು ಅಚ್ಚುಕಟ್ಟಾಗಿ ಬೆಸೆಯುವ ಹೊಸ ಬಾಂಧವ್ಯ.
ಅಲ್ಲೆಲ್ಲೋ ಇದ್ದ ಎರಡು ಕುಟುಂಬಗಳು ಮದುವೆಯ ಹೆಸರಿನಲ್ಲಿ ಒಂದಾಗುತ್ತವೆ. ತಾಯಿ ಮನೆಯಲ್ಲಿ ಸಂತಸದ ಹೊಸಲು ಹರಿಸಿದ ಮಗಳು, ಹೊಸ ಮನೆಗೂ ಬೆಳಕಾಗುತ್ತಾಳೆ. ಹೀಗಾಗಿ, ಮದುವೆಯ ದಿನ ಹೆಣ್ಣಿಗೆ ಕಣ್ಣೀರಿನ ವಿದಾಯ ಬೇಕಿಲ್ಲ. ಅಳಿಯದ ಬಂಧವನ್ನು ಬೆಸೆಯುವ ಈ ಹೊಸ ಸಂಬಂಧಕ್ಕೆ ನಗುವಿನ ಬೀಳ್ಕೊಡುಗೆಯೇ ಸುಂದರ.
* ವಿನುತಾ ಪೆರ್ಲ