ದಡ್ಡ ಬಾಲಕನೊಬ್ಬನಿದ್ದ. ಅವನು ಶಾಲೆಗೆ ಬರುವುದು ವ್ಯರ್ಥವೆಂದುಕೊಂಡ ಅಧ್ಯಾಪಕರು, ಆತನ ತಾಯಿಗೆ ಪತ್ರ ಬರೆದು ಕಳಿಸಿದರು- “ನಿಮ್ಮ ಮಗನಿಗೆ ಪಾಠ ಹೇಳಿಕೊಡಲು ನಮ್ಮಿಂದ ಆಗುವುದಿಲ್ಲ. ನಾಳೆಯಿಂದ ಆತನನ್ನು ಶಾಲೆಗೆ ಕಳಿಸಬೇಡಿ’ ಎಂದು. ಅದನ್ನೋದಿದ ತಾಯಿ ಎದೆಗುಂದಿದಳಾದರೂ, ಮಗನಿಗೆ ವಿಷಯ ತಿಳಿಸಲಿಲ್ಲ, ಆತನನ್ನು ಗದರಲಿಲ್ಲ.
“ನೀನು ಅತ್ಯಂತ ಬುದ್ಧಿವಂತನಾದ್ದರಿಂದ, ನಿನಗೆ ಪಾಠ ಹೇಳಿಕೊಡುವುದು ಅಧ್ಯಾಪಕರಿಗೆ ಸಾಧ್ಯವಿಲ್ಲವಂತೆ. ಇನ್ಮುಂದೆ ಶಾಲೆಗೆ ಹೋಗುವುದು ಬೇಡ. ನಾನೇ ನಿನಗೆ ಕಲಿಸುತ್ತೇನೆ’ ಎಂದಳು. ಅಮ್ಮನ ಮಾತನ್ನು ನಂಬಿ ತಾನು ಅತ್ಯಂತ ಬುದ್ಧಿವಂತನೆಂದು ಭಾವಿಸಿದ ಆ ಹುಡುಗ, ಮುಂದೆ ವಿಶ್ವವಿಖ್ಯಾತ ವಿಜ್ಞಾನಿಯಾದ! ತಾಯಿಯ ನಿಧನದ ನಂತರ, ಶಾಲೆಯ ಅಧ್ಯಾಪಕರು ಬರೆದಿದ್ದ ಆ ಕಾಗದ ಆತನ ಕೈಗೆ ಸಿಕ್ಕಿತು. ಅದನ್ನೋದಿದವನಿಗೆ ಅಚ್ಚರಿಯಾಯ್ತು. ಶಿಕ್ಷಕರ ಮಾತನ್ನು ನಂಬದೆ, ದಡ್ಡನನ್ನು ಪ್ರೋತ್ಸಾಹಿಸಿ, ತನ್ನ ಭವಿಷ್ಯವನ್ನು ಉಜ್ವಲಗೊಳಿಸಿದ ತಾಯಿಯ ಜಾಣ್ಮೆಯನ್ನು ನೆನೆದು ಆನಂದಬಾಷ್ಪ ಸುರಿಸಿದ. ತಾಯಿ ನೀಡುವ ಪ್ರೋತ್ಸಾಹ ಎಂತಹ ಪವಾಡವನ್ನೆಸಗಬಹುದು ಎಂದು ಸಾರುವ ಕಥೆ ಇದು.
ಪ್ರತಿಯೊಬ್ಬರ ಲೌಕಿಕ ಜೀವನದ ಏಳಿಗೆಯಲ್ಲೂ ತಾಯಂದಿರ ಪಾತ್ರವು ಪ್ರಮುಖವಾದದ್ದು. ಭಾರತೀಯ ಮಹರ್ಷಿಗಳ ದೃಷ್ಟಿಯಲ್ಲಿ ತಾಯಿಯ ಪಾತ್ರ ಹ್ಯ(ಇಂದ್ರಿಯ)ಜೀವನಕ್ಕಷ್ಟೇ ಸೀಮಿತವಾದದ್ದಲ್ಲ. ಇಂದ್ರಿಯಾತೀತವಾಗಿ ಬೆಳಗುವ ಅಂತರಂಗದ ಕಡೆಗೂ ತನ್ನ ಸಂತತಿಯನ್ನು ನಡೆಸಬೇಕಾದ ಹೊಣೆಗಾರಿಕೆ ತಾಯಿಯ ಮೇಲಿದೆ. “ಮಾತೃದೇವೋ ಭವ’ ಎಂದು ಆಕೆಯನ್ನು ಗೌರವಿಸಿರುವುದು ಇದಕ್ಕಾಗಿಯೇ. ಸೃಷ್ಟಿಮೂಲದಲ್ಲಿ ಬೆಳಗುವ ಭಗವಂತನ ಆಶಯಕ್ಕೆ ಅನುಸಾರವಾಗಿ, ಪ್ರಪಂಚವನ್ನು ಸೃಷ್ಟಿಸಿದ ಜಗನ್ಮಾತೆಯ ಪ್ರತಿನಿಧಿಯಾಗಿರುವವಳು, ಹೊತ್ತು-ಹೆತ್ತು-ಬೆಳೆಸುವ ತಾಯಿ.
ಆದ್ದರಿಂದ ತಾಯಿಯಾದವಳು ಜಗನ್ಮಾತೆಯಂತೆಯೇ ತನ್ನ ಮಗುವನ್ನು ಭಗವನ್ಮಾರ್ಗದಲ್ಲಿ ನಡೆಸುವವಳೂ ಆಗಬೇಕು. ಆದ್ದರಿಂದಲೇ ಆಕೆಗೆ ದೇವಭಾವಸೂಚಕವಾದ ಗೌರವಸ್ಥಾನವೇ ಹೊರತು, ಪ್ರೀತಿ-ವಾತ್ಸಲ್ಯ-ತ್ಯಾಗಗಳ ಮೂರ್ತಿ ಎಂದು ಭಾವನಾತ್ಮಕವಾದದ್ದಷ್ಟೇ ಅಲ್ಲ ಎಂದು ಶ್ರೀರಂಗ ಮಹಾಗುರುಗಳು ಸ್ಪಷ್ಟಪಡಿಸಿದ್ದರು. ಗರ್ಭದಲ್ಲಿ ಶಿಶುವನ್ನು ಧರಿಸುವಾಗಿನಿಂದಲೇ ತನ್ನ ಆಹಾರ-ವಿಹಾರಗಳಲ್ಲಿ ಮಾರ್ಪಾಡು ತಂದು, ಮಗುವಿನ ಶರೀರ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆಯ ಕಡೆಯೂ ನಿಗಾ ಇಡಬೇಕು. ಹುಟ್ಟಿದ ಮಗುವಿಗೆ ನೀಡುವ ಸ್ತನ್ಯವು ಚೈತನ್ಯ(ಜ್ಞಾನ)ಸ್ತನ್ಯವಾಗಿರಬೇಕು. ಬೆಳವಣಿಗೆಯ ಪ್ರತಿ ಹಂತದಲ್ಲೂ ಮಗುವಿನ ಮನಸ್ಸು ದೇವನ ಕಡೆ ಒಲಿಯುವಂತೆ ಮಾಡುವುದರಲ್ಲಿ ತಾಯಿಯದೇ ಪ್ರಥಮ ಹಾಗೂ ಹೆಚ್ಚಿನ ಪಾತ್ರ. ಋಷಿವಾಣಿಯಂತೆ ಜ್ಞಾನ (ದೇವ) ಭಾವವನ್ನು ನಮ್ಮಲ್ಲಿ ತುಂಬಿಕೊಂಡು ನಮ್ಮ ಸಂತತಿಯಲ್ಲಿ ಲೌಕಿಕ ಮುನ್ನಡೆಯ ಜೊತೆಜೊತೆಗೆ ಜ್ಞಾನಭಾವವನ್ನೂ ಹರಿಸೋಣ.
ಮೈಥಿಲೀ ರಾಘವನ್, ಸಂಸ್ಕೃತಿ ಚಿಂತಕಿ