ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ ಕೂಡತೇರಿ ನೀವು. ಬ್ಯಾಡಾದ ಸಾಮಾನ ಇಟಕೊಂಡ ಏನ್ ಮಾಡೋಣ?
ಅವ್ವಳಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅಪ್ಪ ಕೊಡಿಸಿದ ವಸ್ತುಗಳ ಮೇಲಿನ ನಮ್ಮ ಪ್ರೀತಿ ಎಂದೂ ಕಡಿಮೆಯಾಗಲ್ಲ ಎಂದು. ಕೊಡಿಸಿದ ವಸ್ತುಗಳು ಹಳೇವಾಗಿ, ಮುರಿದು, ತಿಪ್ಪೆ ಸೇರುವ ಹಂತದಲ್ಲಿದ್ದರೂ ನಾವು ಅವನ್ನು ಬಿಸಾಕುತ್ತಿರಲಿಲ್ಲ. ಕಾರಣ, ಅಪ್ಪ ಪ್ರೀತಿಯಿಂದ ಕೊಡಿಸಿದವು ಅಥವಾ ನಾವು ಕಾಡಿ ಬೇಡಿ ಕೊಡಿಸಿಕೊಂಡಿಡವು ಎಂದು.ಹಳೆಯ ಸೈಕಲ್, ಟೇಪ್ ರೆಕಾರ್ಡರ್, ಕ್ಯಾಸೆಟ್ಸ್, ಸಿ.ಡಿಗಳು, ಬ್ಯಾಗು, ಮುರಿದ ಪೆನ್ಸಿಲ್‌ಗಳು, ಪೆನ್‌ಗಳು… ಹೀಗೆ, ಒಂದಾ ಎರಡಾ? ಎಲ್ಲವನ್ನೂ ಹಾಗೆಯೇ ಇಟ್ಟುಕೊಂಡಿದ್ದೆವು.
ಮೊನ್ನೆ ಹಳೆಯ ಸೈಕಲ್‌ಅನ್ನು ಮಾರುವ ವಿಚಾರ ಬಂದಾಗ, ನಾವೆಲ್ಲ ಬೇಡ ಎಂದುಬಿಟ್ಟೆವು. ಒಂದು ಕಾಲದಲ್ಲಿ ಲಕಲಕ ಹೊಳೆಯುತ್ತಿದ್ದ ಆ ಸೈಕಲ್‌ನ ದೇಹದ ಪ್ರತಿ ಇಂಚೂ ಕೂಡ ತುಕ್ಕು ಹಿಡಿದು, ಓಡಿಸಲಾರದ ಸ್ಥಿತಿಯಲ್ಲಿದ್ದರೂ ಅದನ್ನು ದೂರ ಮಾಡಲು ನಮಗೆ ಮನಸ್ಸಿಲ್ಲ. 20 ವರ್ಷಗಳ ಹಿಂದೆ ಕ್ಯಾಸೆಟ್‌ಗಳ ಯುಗವಿತ್ತು. ಆಗ ನಾವು ಹೊಸ ಹೊಸ ಫಿಲ್ಮ… ಕ್ಯಾಸೆಟ್‌ಗಳನ್ನು ಪಡೆಯಲು ಅಪ್ಪನಿಗೆ ಬೆಣ್ಣೆ ಹಚ್ಚುತ್ತಿದ್ದೆವು. ಅವುಗಳನ್ನು ಮುದ್ದಾಗಿ ಕೂಸನ್ನು ಸಾಕುವಂತೆ ನೋಡಿಕೊಂಡಿದ್ದೆವು. ಈಗಲೂ ಅವುಗಳು ಜೊತೆಗಿವೆ. ಆಗಾಗ್ಗೆ ಧೂಳನ್ನು ಜಾಡಿಸಿ, ಒಪ್ಪವಾಗಿ ಇಟ್ಟರೆ, ಅವು ಮತ್ತೆ ಕೆಳ ಟೇಬಲ್‌ಅನ್ನು ಶೃಂಗರಿಸುತ್ತವೆ. ಅಪ್ಪನನ್ನು ಕಳೆದುಕೊಂಡಿದ್ದೇವೆ. ಕಡೇ ಪಕ್ಷ ಅಪ್ಪ ಕೊಡಿಸಿದ ಸಾಮಾನುಗಳನ್ನು, ಅವರ ನೆನಪಿಗಾಗಿ ಹಾಗೆಯೇ ಇಟ್ಟುಕೊಳ್ಳೊಣ ಎಂಬುದು ನಮ್ಮ ಆಸೆ.
ಅಪ್ಪ ಕೊಡಿಸಿದ ವಸ್ತುಗಳ ಬಗ್ಗೆ ನಮಗಿರುವ ಮೋಹವನ್ನು ನೋಡಿದ ಅವ್ವ, ಮುಂದೆ ತನ್ನ ಹಳೆಯ ಸಾಮಾನುಗಳು ಉಪಯೋಗಕ್ಕೆ ಬರದಿದ್ದರೂ ಇವರು ಮಾರುವುದಿಲ್ಲ ಎಂದು ಅರಿತು, ತನ್ನ ಹಳೆಯ ಡ್ರಾಯಿಂಗ್ ಬುಕ್ ಅನ್ನು ಕೈಯಾರೆ ಸುಟ್ಟು ಹಾಕಿದಳು. ಆ ಪುಸ್ತಕದಲ್ಲಿ ಆಕೆ ಚಿತ್ರಕಲೆ ಕಲಿಯುವಾಗ ಬಿಡಿಸಿದ ಬಣ್ಣ ಬಣ್ಣದ ಚಿತ್ರಗಳ ಸಂಗ್ರಹವಿತ್ತು. ಅವುಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ ಮೂಡುತ್ತಿತ್ತು. ಪ್ರತಿ ಸಲ ಚಿತ್ರಗಳನ್ನು ನೋಡಿದಾಗಲೂ, “ಅವ್ವ ಎಷ್ಟು ಚೆಂದ, ನೀ ವಿದ್ಯಾರ್ಥಿಯಿರೋವಾಗ ಚಿತ್ರಾ ಬಿಡಿಸಿಯಲ್ಲಾ, ನಮಗ ಹಿಂಗ ಬಿಡಿಸಾಕ ಬರಲ್ಲ ನೋಡ’ ಎಂದು ಆಕೆಯನ್ನು ಪ್ರಶಂಸಿಸುತ್ತಿದ್ದೆವು. ಸುಮಾರು 42 ವರ್ಷ ಹಳೆಯದಾದ ಆ ಬುಕ್ ಇಟ್ಟಲ್ಲಿಯೇ ನಶಿಸಿ, ಮುಟ್ಟಿದರೆ ಸಾಕು ಚೂರುಚೂರಾಗುವ ಅವನತಿಯ ಹಂತ ತಲುಪಿತ್ತು. ಅದನ್ನು ರದ್ದಿಗೆ ಹಾಕೋಣ ಅಂತ ಅವ್ವ ಅಂದಾಗ, ನಾವೆಲ್ಲರೂ ತೀರಾ ವಿರೋಧಿಸಿದ್ದೆವು. ನಮ್ಮ ವಿರೋಧವನ್ನು ವಿರೋಧಿಸದೇ ಅವ್ವ ಆಗ ಸುಮ್ಮನಿದ್ದಳು.
ಆದರೆ, ಒಂದು ದಿನ ಹಿತ್ತಲಲ್ಲಿ ಹೊಗೆ ಬರುತ್ತಿದ್ದುದನ್ನು ಕಂಡು, ಅತ್ತ ಓಡಿದರೆ ಅಲ್ಲಿ ಅವ್ವ ಆ ಪುಸ್ತಕಕ್ಕೆ ಬೆಂಕಿ ಕೊಟ್ಟಾಗಿತ್ತು. ಕೆಲವೇ ಕ್ಷಣಗಳಲ್ಲಿ ಹಾಳೆಗಳು ಬೂದಿಯಾದವು.ನಮ್ಮ ಕಣ್ಣಲ್ಲಿ ನೀರಾಡುತ್ತಿತ್ತು. ನಮ್ಮನ್ನು ನೋಡಿ ಅವ್ವಳೂ ಕಣ್ಣೀರಾದಳು. ನನ್ನ ಅಳುವ ಕಣ್ಣುಗಳೇ “ಏಕೆ ಸುಟ್ಟಿ ಅವ್ವ?’ ಎಂದು ಕೇಳಿದಂತಾಯಿತು. ನಾವಿದ್ದಲ್ಲಿಗೆ ಅವ್ವ ಎದ್ದು ಬಂದು ಹೇಳಿದಳು – ಮನೆಯಲ್ಲಿಯ ಎಲ್ಲ ವಸ್ತುಗಳು ನಿಮ್ಮಪ್ಪ ಅಥವಾ ನನ್ನವು. ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ ಕೂಡತೇರಿ ನೀವು. ಬ್ಯಾಡಾದ ಸಾಮಾನ ಇಟಕೊಂಡ ಏನ್ ಮಾಡೋಣ?ಅದೂ ಅಲ್ಲದ, ಅವನ್ನ ನೋಡಿ ಅಪ್ಪ ಕೊಡಿಸಿದ್ದ ಎಂದ ಕಣ್ಣೀರ ಹಾಕತೇರಿ. ನಿಮ್ಮಪ್ಪಾರನ್ನ ಕಳಕೊಂಡೇರಿ. ಇನ್ನ ಆ ವಸ್ತುಗಳ ಮೇಲೆ ಯಾಕಂತ ಮೋಹ? ಮುಂದೆ ಈ ಬುಕ್ ನೋಡಿ, ನನ್ನ ನೆನಸಿಕೊಂಡು ಅಳಕೋತ ಕೂಡೋದು ಬ್ಯಾಡ ಅಂತ ನಾನೇ ಸುಟ್ಟು ಹಾಕಿದ್ನಿ!
-ಮಾಲಾ ಅಕ್ಕಿಶೆಟ್ಟಿ