Advertisement

ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?

05:01 AM May 20, 2020 | Lakshmi GovindaRaj |

ಪ್ರಕೃತಿಮಾತೆಯ ಎಲ್ಲ ಲಕ್ಷಣಗಳನ್ನೂ ಹೊತ್ತು ಸ್ತ್ರೀ, ಸತಿ ಎಂದು ಕರೆಯಲ್ಪಡುವ ಪಂಚಕನ್ಯೆಯರ ಸ್ಮರಣಮಾತ್ರ ದಿಂದಲೇ, ಪಾಪ ನಾಶವಾಗುವುದು ಎಂಬ ನಂಬಿಕೆ ಇದೆ. ಪ್ರಾತಃಸ್ಮರಣೀಯ ಪಂಚಕನ್ಯೆ ಯರಲ್ಲಿ, ಮಂಡೋದರಿಯೂ  ಒಬ್ಬಳು. ಮಂಡೋದರಿ, ದೈತ್ಯಶಿಲ್ಪಿ ಮಯನ ಮಗಳು. ಆಕೆಯನ್ನು ಒತ್ತಾಯವಾಗಿ ಎಳೆದು ತಂದು, ರಾವಣ ಮದುವೆಯಾದ. ಅವನೋ, ಯಾರೂ ಇದಿರಿಲ್ಲದವನು. ತನ್ನ ಪಾಪಕರ್ಮ ಗಳಿಂದಲೇ ತನ್ನ  ನಾಶವನ್ನು ಬರ ಮಾಡಿಕೊಂಡವನು.

Advertisement

ಇಂಥವನ ಪತ್ನಿಯಾಗಿದ್ದ ಮಂಡೋದರಿ, ಸುಗುಣ ಸಂಪನ್ನೆ. ರಾವಣ, ಪರಮಪಾವನೆ, ಪತಿವ್ರತೆ, ಸದ್ಧರ್ಮಚಾರಿಣಿಯಾದ, ಸೀತೆಯನ್ನು ಹೇಡಿಯಂತೆ ಅಪಹರಿಸುವ ಯೋಜನೆ ಕೈಗೊಂಡ.  ಇದನ್ನರಿತ ಮಂಡೋದರಿ- “ಅದು ಅಧರ್ಮ. ಹಾಗೆ ಮಾಡಿದಲ್ಲಿ ನಿಮ್ಮ ಕುಲವೇ ನಾಶವಾಗುವುದು’ ಎಂದು ಗಂಡನಿಗೆ ಬುದ್ಧಿ ಹೇಳಿದಳು. ಆದರೆ, ಆತ ಆ ಮಾತನ್ನು ಪರಿಗಣಿಸದೆ ಸೀತಾಪಹರಣ ಮಾಡಿ, ತನ್ನ ಅಂತ್ಯವನ್ನು ತಾನೇ  ಸ್ವಾಗತಿಸಿದ.

ರಾಮ- ರಾವಣರ ಯುದ್ಧದಲ್ಲಿ, ಮಕ್ಕಳು ಸಾಯುತ್ತಾ ಬಂದ ಸನ್ನಿವೇಶವನ್ನು ಕೂಡಾ, ಮಂಡೋದರಿ ನಿರ್ವಿಕಾರ ಭಾವದಿಂದಲೇ ಸ್ವೀಕರಿಸುತ್ತಾಳೆ. ಗಂಡ ಕಡೆಯ ಬಾರಿಗೆ ಯುದ್ಧಕ್ಕೆ ಹೊರಟಾಗಲೂ, ಬುದ್ಧಿ ಮಾತುಗಳಿಂದ ಅವನ ಮನ ಪರಿವರ್ತನೆಗೆ ಯತ್ನಿಸುತ್ತಾಳೆ. ಅದಾವುದನ್ನೂ ಕೇಳದ ರಾವಣ ಯುದ್ಧದಲ್ಲಿ ಸತ್ತಾಗ,  ರಣರಂಗಕ್ಕೆ ಬಂದು ಗೋಳಾಡಿ, ರಾಮನಲ್ಲಿ ಶರಣಾಗಿ, ಯಾರ ಮಾತಿಗೂ ಬಗ್ಗದೇ ಚಿತೆಯನ್ನು ಏರುತ್ತಾಳೆ.

ವಿಭೀಷಣನನ್ನು ಅಭಿನಂದಿಸುತ್ತಾಳೆ, ಆಶೀರ್ವದಿಸುತ್ತಾಳೆ. ಸತೀ ಧರ್ಮವನ್ನು ಅರಿತಿದ್ದ ಮಂಡೋದರಿ, ಅದನ್ನು ಜೀವನವಿಡೀ ಪಾಲಿಸಿದಳು. ಅವಳದು ತ್ಯಾಗಮಯ ಜೀವನ. ಶ್ರೀರಂಗ ಮಹಾಗುರುಗಳ ಮಾತಿನಂತೆ- “ಸ್ತ್ರೀಯರು  ಸದ್ವಸ್ತುವನ್ನು, ಪುರುಷ ಸ್ವರೂಪವನ್ನು ಅರಿತ ಜ್ಞಾನಿಗಳಾಗಿದ್ದರೆ, ಅವರನ್ನು ಪುರುಷರೆಂದೇ, ಜ್ಞಾನಿಗಳು ಕರೆಯುತ್ತಾರೆ. ಪುರುಷ ಶರೀರವಿದ್ದರೂ, ಅದರ ಸ್ವರೂಪದ ಅರಿವಿಲ್ಲದ ಪ್ರಾಕೃತರನ್ನು, ಸ್ತ್ರೀಯರೆಂದೇ ಕರೆಯುತ್ತಾರೆ’.

ಮಂಡೋದರಿ ಈ ದೃಷ್ಟಿಯಲ್ಲಿ, ಸದ್ವಸ್ತುವನ್ನರಿತ   ಜ್ಞಾನಿಯೇ ಆಗಿದ್ದಾಳೆ. ಪತಿ ಅಧರ್ಮದ ಹಾದಿಯಲ್ಲಿ ಸಾಗುತ್ತಿದ್ದಾಗ, ಅದನ್ನು ಒಪ್ಪದೇ, ಆತನನ್ನು ಧರ್ಮದ ಹಾದಿ ಯಲ್ಲಿ ಕರೆದೊಯ್ಯಲು ಯತ್ನಿಸುವುದು; ಪತಿಯ ಪಾಪಕೃತ್ಯಕ್ಕೆ ಸಹಕರಿಸದೇ, ಧರ್ಮ ಪಾಲನೆಯೊಂದಿಗೆ  ಬದುಕುವುದು ಸತಿ ಧರ್ಮ. ಈ ಸೂಕ್ಷ್ಮವನ್ನು ಅರಿತು ಬದುಕಿ, ಜಗಕ್ಕೆ ಪ್ರಾತಃ ಸ್ಮರಣೀಯಳಾದಳು ಮಂಡೋದರಿ.

Advertisement

* ಚಂಪಕಾ ನರಸಿಂಹಭಟ್, ಸಂಸ್ಕೃತಿ ಚಿಂತಕಿ ಅಷ್ಟಾಂಗಯೋಗ ವಿಜ್ಞಾನಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next