Advertisement

ಪೌರ ಕಾರ್ಮಿಕರು ಸದಾ ಸ್ಮರಣೀಯರು: ವಂಟಿ

03:18 PM Sep 24, 2022 | Team Udayavani |

ಕಲಬುರಗಿ: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಸಮಾಜ ಸೇವಕ ಡಾ|ಸುನೀಲಕುಮಾರ ಎಚ್‌.ವಂಟಿ ಹೇಳಿದರು.

Advertisement

ನಗರದ ಜಗತ್‌ ವೃತ್ತದ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್‌ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ಶುಕ್ರವಾರ ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ, ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೌರ ಕಾರ್ಮಿಕರು ಸದಾ ಸ್ಮರಣೀಯರು. ಅವರ ಶ್ರೋಯೋಭಿವೃದ್ಧಿಗೆ ಸರಕಾರ ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದರು.

ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್‌ .ಬಿ.ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಗಣಮುಖೀ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ನೈರ್ಮಲ್ಯ ನಿರೀಕ್ಷಣಾಧಿಕಾರಿಗಳಾದ ರಾಜು ಕಟ್ಟಿಮನಿ, ಧನರಾಜ ಹೆಡಗಾಪುರೆ ಮತ್ತಿತರರಿದ್ದರು.

ಮಹಾನಗರ ಪಾಲಿಕೆ ಪೌರ ಕಾರ್ಮಿಕರಾದ ಜಗದೇವಿ ಬಿ.ಚಿತ್ತಾಪುರೆ, ಮಮತಾ ಎ.ನೆಲ್ಲೂರೆ, ನಿರ್ಮಲಾ ಎಸ್‌.ಬೆಳಗೇರಿ, ಸುರೇಖಾ ಎಂ.ಬನಸೊಡೆ, ಸುನೀತಾ ಆರ್‌.ಮಡಗೇರಿ, ಯಲ್ಲಪ್ಪ ಸಿ.ಶಿವಲಾಲ್‌, ದುರ್ಗಪ್ಪ ಕೋರಗಂಟಿ, ಉದಯಕುಮಾರ ವಂಟಿ ಅವರಿಗೆ ಪುಷ್ಪವೃಷ್ಠಿ ಮಾಡಿ, ಸನ್ಮಾನಿಸಲಾಯಿತು. ನಂತರ ಉಪಹಾರ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next