Advertisement

ಮಕ್ಕಳಿಗೆ ಗುಂಪು ಕಲಿಕೆ ತುಂಬಾ ಅಗತ್ಯ ಯಾಕೆ? ಏನಿದು ಗುಂಪು ಕಲಿಕಾ ವಿಧಾನ

10:19 AM Nov 07, 2019 | Nagendra Trasi |

 

Advertisement

 

ಪ್ರಾಥಮಿಕ ಶಿಕ್ಷಣದ ಪ್ರಮುಖ ಉದ್ದೇಶ ಮಕ್ಕಳು ಮಾತನಾಡುವ, ಬರೆಯುವ ಮತ್ತು ಆಲೋಚಿಸುವ ಕೌಶಲ್ಯಗಳನ್ನು ಬೆಳೆಸುವುದು. ಇದರಲ್ಲಿ ಪ್ರಮುಖವಾಗಿ ಮಾತು ಕಲಿಕೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.. ಅದರಲ್ಲೂ ಚರ್ಚೆ ಅಥವಾ ಮಾತನಾಡುವ ಅವಕಾಶ ತರಗತಿಯಲ್ಲಿ ನೀಡುವುದರಿಂದ ಸಂವಹನದ ಅಂಗವಾದ ಭಾಷೆಯ ಅಭಿವೃದ್ಧಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾವು ಮೌಖಿಕ ಭಾಷೆಯ ಬಗೆಗಿನ ಆಸಕ್ತಿಯಲ್ಲಿ ಮತ್ತು ಅದರ ಬೆಳವಣಿಗೆಯನ್ನು ಸ್ವಾಗತಿಸುತ್ತೇವೆ. ಇದನ್ನು ಬುಲಕ್ ರಿಪೋರ್ಟ್(1975) ಬಲವಾಗಿ ಪ್ರತಿಪಾದಿಸುತ್ತದೆ.

ತರಗತಿ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಮಾತನಾಡಲು, ಆಲೋಚನೆ ಮಾಡಲು ಮತ್ತು  ಬರವಣಿಗೆಗೆ ಅವಕಾಶ ನೀಡುವುದರಿಂದ ಸ್ವ  ಅಭಿವ್ಯಕ್ತಿ ಹೊಂದಿ, ಅವರಲ್ಲಿ ಒಂದು ಪರಿಕಲ್ಪನೆಯ ಬಗ್ಗೆ ಒಂದು ನಿರ್ಧಿಷ್ಟ ಅಭಿಪ್ರಾಯಕ್ಕೆ ಬೇಗ ತೀರ್ಮಾನಕ್ಕೆ ಬರಲು ಸಹಾಯವಾಗುತ್ತದೆ.  ಇದರಿಂದ ಅವರಲ್ಲಿ ಜ್ಞಾನ ಕಟ್ಟಿಕೊಳ್ಳಲು ಮತ್ತು ಬಹಳ ಕಾಲ ಸ್ಮರಣೆಯಲ್ಲಿಟ್ಟುಕೊಳ್ಳಲು ಅವಕಾಶವಾಗುವುದು. ಅಲ್ಲದೇ, ಮಾತನಾಡುವ, ಆಲೋಚಿಸುವ ಮತ್ತು ಆಲಿಸುವ ಕೌಶಲಗಳನ್ನು ಬಳಸಲು ನಿಯಮಿತವಾಗಿ ನಮ್ಮ ತರಗತಿಗಳಲ್ಲಿ  ಅವಕಾಶಗಳನ್ನು ನೀಡುವುದರಿಂದ ಮಕ್ಕಳ ಸಾಮರ್ಥ್ಯವು ಕ್ರಮೇಣವಾಗಿ ಉತ್ತಮಗೊಳ್ಳುತ್ತದೆ.

ಇದನ್ನೇ ನಮ್ಮ 2005ರ ರಾಷ್ಟ್ರೀಯ ಪಠ್ಯಕ್ರಮ ನೀತಿ ಕೂಡಾ ಸಹಯೋಗಿ ಕಲಿಕಾ (Collaborative Learning- ಗುಂಪು ಕಲಿಕೆ) ಅವಕಾಶಗಳನ್ನು ತರಗತಿ ಆಚರಣೆ/ಅಭ್ಯಾಸಗಳನ್ನು  ಅನುಷ್ಠಾನ ಮಾಡಬೇಕು ಎಂದು ಒತ್ತಿ ಹೇಳಿದೆ. ಸಾಂಪ್ರದಾಯಕ ಬೋಧನೆಯ ಏಕತಾನತೆಯನ್ನು ಹೋಗಲಾಡಿಸುವುದು, ಮಕ್ಕಳು ಬರೀ ಅಲಿಸುವುದು, ಉರು ಹೊಡಿಯುವುದನ್ನು ಮತ್ತು ಶಿಕ್ಷಕ ಮಾತ್ರ ಜ್ಞಾನ ಅಥವಾ ಮಾಹಿತಿ ವರ್ಗಾವಣೆಯ ಪ್ರತಿಪಾದಕನಂತೆ ಕಾರ್ಯನಿರ್ವಹಿಸುವುದನ್ನು ತಪ್ಪಿಸುವುದು ಅಥವಾ ತಡೆಯುವುದು ಇದರ ಉದ್ದೇಶವಾಗಿದೆ.

Advertisement

ಉದಾಹರಣೆಗೆ, ಚರ್ಚೆಯಲ್ಲಿ ಮಕ್ಕಳು ತಮ್ಮ ವಿಚಾರಗಳನ್ನು ಪರೀಕ್ಷಿಸುತ್ತಾರೆ, ವಿವರಣೆಯಲ್ಲಿ ತಮ್ಮ ಜ್ಷಾನವನ್ನು ರೂಪಿಸಿಕೊಳ್ಳುತ್ತಾರೆ, ಅರ್ಥ ಮಾಡಿಕೊಳ್ಳಬಹುದಾದ ಪದಗಳನ್ನು ಹುಡುಕುವರು ಮತ್ತು ಅಂತಿಮವಾಗಿ ತಾವು ಕಂಡುಕೊಂಡ ಅಂಶಗಳನ್ನು ಸೂಕ್ತ ಸಾಕ್ಷಾಧಾರಗಳೊಂದಿಗೆ ಪ್ರದರ್ಶನ ನೀಡುವುದರಿಂದ ಅವರಲ್ಲಿ ನಾಯಕತ್ವ ಗುಣ ತಾನೇ ತಾನಾಗಿ ಮೈಗೂಡುತ್ತದೆ.

ಇತ್ತೀಚಿನ ದಿನಗಳಲ್ಲಿ, ಮಾತನಾಡುವುದು, ಚರ್ಚಸುವುದು, ವಾದಿಸುವುದು, ಯೋಜಿಸುವುದು ಮತ್ತು ವಿವರಿಸುವುದನ್ನು ಪ್ರತಿ ದಿನ ಶಾಲೆಗಳಲ್ಲಿ ಮಾಡುವುದರಿಂದ ಮಕ್ಕಳು ಆ ಕೌಶಲ್ಯಗಳ ಅಭಿವೃದ್ಧಿಯಲ್ಲಿ ಉತ್ತಮಗೊಳ್ಳುವರು ಎಂದು ನಂಬಲಾಗಿದೆ  ಮತ್ತು ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಇದರಿಂದ ಅವರು ತಮ್ಮ ಉದ್ಯೋಗ ಸಂದರ್ಶನಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ತಮ್ಮ ಕೌಟುಂಬಿಕ ಜೀವನದಲ್ಲಿ  ಎದುರಾಗುವ ಸಂದರ್ಭಗಳನ್ನು  ಎದುರಿಸುವಲ್ಲಿ ಅಗತ್ಯ ಕೌಶಲ್ಯಗಳನ್ನು ಹೊಂದುವರು. ಅವರು ಸಭೆಗಳನ್ನು ನಡೆಸುವುದರಲ್ಲಿ, ಎರಡೂ ಕಡೆಯ ವಾದಗಳನ್ನು ಆಲಿಸಿ, ತೀರ್ಪು ನೀಡುವಲ್ಲಿ,  ಪುರಾವೆ ಸಾಕ್ಷಿಗಳನ್ನು ಗಳಿಸುವಲ್ಲಿ ಮತ್ತು ಆಧಾರ ಕಲ್ಪನೆಗಳನ್ನು ರಚಿಸುವಲ್ಲಿ ಪರಿಣಾಮಕಾರಿ ಕಥೆಗಳನ್ನು ಹೇಳುವಲ್ಲಿ ಉತ್ತಮಗೊಳ್ಳುವರು.

ಆದ್ದರಿಂದ ನಮ್ಮ ಸಂಶೋಧನೆ ಅಥವಾ ಪುರಾವೆಗಳು ಸಾರುವುದೇನೆಂದರೆ, ಎಲ್ಲಿಯವರೆಗೆ ನಮ್ಮ ಶಿಕ್ಷಕರು ಮಾಹಿತಿ ವರ್ಗಾಯಿಸುವ ಅಥವಾ ಮಕ್ಕಳು ಆಲಿಸಲು ಮಾತ್ರ ಇರುವವರು ಎಂದು ಭಾವಿಸುವರೋ ಅಲ್ಲಿಯವರೆಗೆ ಶಿಕ್ಷಣ ಮೂಲ ಉದ್ದೇಶ ತಲುಪಿಸುವಲ್ಲಿ ಸೋಲನ್ನೇ ಕಾಣುವರು. ಆದ ಕಾರಣ ಗುಂಪು ಕಾರ್ಯ ಅಥವಾ ಸಹಯೋಗಿ ಗುಂಪು ಕಾರ್ಯ ತಂತ್ರಗಳನ್ನು ಬಳಸಲು ಮತ್ತು ಇದನ್ನು ಬೋಧನೆಯ ಕಾರ್ಯತಂತ್ರ ಅಥವಾ ಪದ್ಧತಿಯಾಗಿ ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಳ್ಳುವ ಮನಸ್ಥಿತಿ ರೂಡಿಸಿಕೊಳ್ಳುವ ಅವಶ್ಯಕತೆಯಿದೆ ಅಲ್ಲದೆ, ಈ ತಂತ್ರಗಳನ್ನು  ಬೋಧನೆಯ ಭಾಗವಾಗಿ ಯೋಜಿಸುವ  ಅಗತ್ಯತೆ ಇದೆ.

ಸಹಯೋಗಿ ಗುಂಪು ತಂತ್ರಗಳನ್ನು ತರಗತಿಯಲ್ಲಿ ಬಳಸುವುದರಿಂದ ಮಕ್ಕಳು ಇನ್ನಿತರರೊಂದಿಗೆ ಸಹಯೋಗಿಗಳಾಗುತ್ತಾರೆ ಅಥವಾ ಸಾಮಾಜಿಕವಾಗಿ ಬೆರೆಯುತ್ತಾರೆ. ಮತ್ತು ಅವರು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವರು. ತರಗತಿಯಲ್ಲಿ ಲವಲವಿಕೆಯ ವಾತಾವರಣ ಕಂಡು ಬಂದು ಮಕ್ಕಳು ಸಹಜವಾಗಿ ಕಲಿಕೆಯ ಭಾಗವಾಗುತ್ತಾರೆ.

ಗುಂಪು ಚರ್ಚೆಗೆ ಮಕ್ಕಳನ್ನು ತೊಡಗಿಸುವಾಗ ಹಲವಾರು ಗುಂಪು ತಂತ್ರ ಅಥವಾ ವಿಧಾನಗಳನ್ನು ಅನುಸರಿಸಬಹುದು. ಉದಾ: ಜೋಡಿ ಕಾರ್ಯ, 4 ಜನರ ಗುಂಪು, 5 ಜನರ ಗುಂಪು ಇತ್ಯಾದಿ,  ಆದರೆ ಶಿಕ್ಷಕರು ಗುಂಪು ತಂತ್ರಗಳನ್ನು ಬಳಸುವಾಗ ತಮ್ಮ ತರಗತಿಯ ಮಕ್ಕಳ ಸಂಖ್ಯೆ  ಮತ್ತು ಪರಿಕಲ್ಪನೆಯ ಚರ್ಚೆಗಾಗಿ ಎಷ್ಟು ಗುಂಪು ರಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವಿರಬೇಕು. ಗುಂಪು ರಚಿಸುವಾಗ ಸಂಖ್ಯೆಗಳನ್ನು ಎಣಿಸಿ (ಉದಾ: 5 ಗುಂಪು ಬೇಕಾದಲ್ಲಿ, 1, 2, 3, 4, 5 ಎಂದು ಮಕ್ಕಳ ಮೂಲಕ ಹೇಳಿಸಿ) , 1 ಹೇಳಿರುವವರು ಒಂದು ಕಡೆ, 2 ಹೇಳಿರುವವರು ಒಂದು ಕಡೆ…… ಹೀಗೆ ಎಲ್ಲರನ್ನು ಗುಂಪಿನಲ್ಲಿ ಕೂಡಿಸಿ ಅಥವಾ ಬಣ್ಣಗಳನ್ನು ನೀಡಿ(ಉದಾ: 3 ಗುಂಪು ಬೇಕಾದಲ್ಲಿ ಕೇಸರಿ, ಬಿಳಿ, ಹಸಿರು ಎಂದು ಹೇಳಿಸಿ), ಒಂದೊಂದು ಬಣ್ಣದ ಹೆಸರು ಹೇಳಿದವರನ್ನು  ಒಂದೊಂದು ಗುಂಪು ರಚಿಸಿ, ಅವರಿಗೆ ಚರ್ಚೆಗಾಗಿ ವಿಷಯ ನೀಡಿ.  ಪಾಠದ ಪುನರಾವರ್ತನೆ ಮಾಡುವಾಗ ಇಡೀ ತರಗತಿ ಮಕ್ಕಳನ್ನು ವೃತ್ತಾಕಾರವಾಗಿ ಕೂಡಿಸಿ, ಇಲ್ಲಿಯವರೆಗೆ ನಮಗಾದ ಕಲಿಕೆ ಏನು? ಯಾವುದು ಸ್ಷಷ್ಟವಾಯಿತು? ಯಾವುದು ಸ್ಪಷ್ಟವಾಗಿಲ್ಲ? ಎಂಬುದರ ಬಗ್ಗೆ ಕೇಳಬಹುದು. ಇಡೀ ತರಗತಿಯ ಮಕ್ಕಳನ್ನು ವೃತ್ತಾಕಾರವಾಗಿ ಕೂಡಿಸುವುದು ಒಂದು ಗುಂಪು ಕಲಿಕೆಯ ನಮೂನೆ.

ಒಟ್ಟಾರೆ 4 ಜನರ ಗುಂಪು ಆದರ್ಶಪ್ರಾಯವಾಗಿದೆ. ಈ ಗುಂಪು ಅತೀ ದೊಡ್ಡದೂ ಅಲ್ಲ, ಚಿಕ್ಕದೂ ಅಲ್ಲ ಮತ್ತು ಮೇಲ್ವಿಚಾರಣೆ ಮಾಡಲು, ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸೂಕ್ತವಾದುದಾಗಿದೆ.   ಆದಾಗ್ಯೂ, ಮಕ್ಕಳನ್ನು ಗುಂಪುಗಳನ್ನಾಗಿ ಮಾಡುವಾಗ ಲಿಂಗ, ವ್ಯಕ್ತಿತ್ವ, ಸಾಮರ್ಥ್ಯದಂತಹ ವಿಚಾರಗಳನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ ಎಂಬುದನ್ನು ಶಿಕ್ಷಕರು ಮರೆಯಬಾರದು.

ನಾನಾ. ಮದರಕಲ್ಲ

ಸಂಯೋಜಕರು ಹಾಗೂ ಶಿಕ್ಷಕ ತರಬೇತಿದಾರರು,

ದಿ ಟೀಚರ್ ಫೌಂಡೇಶನ್, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next