Advertisement

ಪೂರ್ಣಾವಧಿಗೆ ಸಿಇಸಿ ಆಯ್ಕೆಯಾಗುತ್ತಿಲ್ಲ ಏಕೆ?

12:02 AM Nov 24, 2022 | Team Udayavani |

ದೇಶದ ಸಾಂವಿಧಾನಿಕ ಸಂಸ್ಥೆಗಳಿಗೆ ಹೇಗೆ ನೇಮಕವಾಗಬೇಕು? ಇದು ಇಂದಿನ ಪ್ರಶ್ನೆಯಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇಂಥದ್ದೊಂದು ಪ್ರಶ್ನೆ ಮೂಡುತ್ತಲೇ ಇದೆ. ಇದು ತನಿಖಾ ಸಂಸ್ಥೆಗಳು, ಚುನಾವಣ ಆಯೋಗ, ವಿಚಕ್ಷಣ ಆಯೋಗ, ಸಿಬಿಐ, ಜಾರಿ ನಿರ್ದೇಶನಾಲಯಗಳಷ್ಟೇ ಅಲ್ಲ, ಸುಪ್ರೀಂ ಕೋರ್ಟ್‌ಗೂ ಜಡ್ಜ್  ಗಳ ನೇಮಕ ಹೇಗೆ ಆಗಬೇಕು ಎಂಬ ಬಗ್ಗೆ ಚರ್ಚೆ ಇದೆ. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣ ಆಯುಕ್ತರ ನೇಮಕ ಹೇಗೆ ಆಗಬೇಕು ಎಂಬ ವಾದ-ಪ್ರತಿವಾದ ನಡೆಯುತ್ತಿದೆ. ಹಾಗಾದರೆ ಏನಿದು ವಿವಾದ? ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

Advertisement

ಸದ್ಯ ನೇಮಕ ವ್ಯವಸ್ಥೆ ಹೇಗಿದೆ?
ಸಂವಿಧಾನದಲ್ಲಿ ಕೇಂದ್ರ ಚುನಾವಣ ಆಯೋಗಕ್ಕೆ ಇದೇ ರೀತಿ ಆಯುಕ್ತರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ನಿರ್ದಿಷ್ಟ ಸೂಚನೆಗಳಿಲ್ಲ. ಸದ್ಯ ಇರುವ ನಿಯಮಗಳ ಪ್ರಕಾರ, ಮುಖ್ಯ ಚುನಾವಣ ಆಯುಕ್ತರು ಮತ್ತು ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಇವರಿಗೆ ಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಂಡು ಪ್ರಧಾನ ಮಂತ್ರಿಗಳು ಹೆಸರನ್ನು ಶಿಫಾರಸು ಮಾಡುತ್ತಾರೆ.

ಹಾಗೆಯೇ, ಮುಖ್ಯ ಚುನಾವಣ ಆಯುಕ್ತರು ಅಥವಾ ಆಯುಕ್ತರನ್ನು ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ಪಾರ್ಲಿಮೆಂಟ್‌ಗೆ ಇದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ
2018ರ ಅಕ್ಟೋಬರ್‌ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣ ಆಯುಕ್ತರ ನೇಮಕ ಸಂಬಂಧ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಸ್ವೀಕೃತವಾಗಿದ್ದು, ವಿಚಾರಣೆಗಾಗಿ ಸಾಂವಿಧಾನಿಕ ಪೀಠವನ್ನು ರಚಿಸಲಾಗಿದೆ.

ಅರ್ಜಿದಾರರು ಹೇಳುವ ಪ್ರಕಾರ, ಲೋಕಪಾಲ ಅಥವಾ ಸಿಬಿಐ ನಿರ್ದೇಶಕರನ್ನು ಪ್ರಧಾನಮಂತ್ರಿ, ವಿಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಗಳನ್ನು ಒಳಗೊಂಡ ಒಂದು ಸಮಿತಿ ನೇಮಕ ಮಾಡುತ್ತದೆ. ಅದೇ ರೀತಿ ಚುನಾವಣ ಆಯೋಗಕ್ಕೂ ಈ ಮೂವರನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು. ಈ ಮೂಲಕವೇ ಆಯ್ಕೆ ಮಾಡಬೇಕು.

Advertisement

ಬದಲಾಗಬೇಕು ವ್ಯವಸ್ಥೆ
ಇದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಅಭಿ ಪ್ರಾಯ. ಸದ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌, ಹೃಷಿ ಕೇಶ್‌ ರಾಯ್‌ ಮತ್ತು ಸಿ.ಟಿ.ರವಿಕುಮಾರ್‌ ಇದ್ದಾರೆ. ಇಡೀ ನೇಮಕ ವ್ಯವಸ್ಥೆ ರಾಜಕೀಯ ಹಿಡಿತದಿಂದ ಹೊರಗಿರಬೇಕು, ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಆಯ್ಕೆಯಾಗಬೇಕು ಎಂಬ ಅಭಿಪ್ರಾಯವನ್ನೂ ಪೀಠ ಹೇಳಿದೆ. ಸಂವಿಧಾನದ ಪರಿಚ್ಛೇದ 324(2) ಮುಖ್ಯ ಚುನಾವಣ ಆಯುಕ್ತರು ಮತ್ತು ಆಯುಕ್ತರ ಆಯ್ಕೆಗಾಗಿ ಒಂದು ವ್ಯವಸ್ಥೆ ರೂಪಿಸು  ವಂತೆ ಹೇಳಿದೆ. ಆದರೆ ಕಳೆದ 70 ವರ್ಷಗಳಿಂದಲೂ ಈ ಬಗ್ಗೆ ಕೇಂದ್ರದಲ್ಲಿರುವ ಯಾವುದೇ ಸರಕಾರ ನಿರ್ಧಾರವನ್ನೇ ತೆಗೆದುಕೊಂಡಿಲ್ಲ. ಈಗ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೋರ್ಟ್‌ ಹೇಳುತ್ತಿದೆ. ಅಲ್ಲದೆ ಪ್ರತಿಯೊಂದು ಸರಕಾರವೂ ತನ್ನ ಮೂಗಿನ ನೇರಕ್ಕೇ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದೂ ಹೇಳಿದೆ.

ಕೇಂದ್ರ ಸರಕಾರದ ವಾದವೇನು?
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಬಾರದು ಎಂಬುದು ಕೇಂದ್ರ ಸರಕಾರದವಾದ. ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರೇ ಈ ಬಗ್ಗೆ ಸಾಂವಿಧಾನಿಕ ಪೀಠದ ಮುಂದೆ ವಾದಿಸಿದ್ದಾರೆ.

ಸೇವಾವಧಿಯದ್ದೇ ದೊಡ್ಡ ಸಮಸ್ಯೆ
ಸದ್ಯ ಚುನಾವಣ ಆಯುಕ್ತರ ನೇಮಕದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ಆಯುಕ್ತರ ಸೇವಾವಧಿ ಬಗ್ಗೆ. ಏಕೆಂದರೆ ಕೇಂದ್ರ ಚುನಾವಣ ಆಯೋಗದಲ್ಲಿ ಪೂರ್ಣಾವಧಿಗೆ ಕೆಲಸ ಮಾಡಿದ ಕಟ್ಟ ಕಡೆಯ ವ್ಯಕ್ತಿ ಟಿ.ಎನ್‌.ಶೇಷನ್‌. ಇವರ ಬಳಿಕ ಯಾರೊಬ್ಬರೂ ಸೇವಾವಧಿ ಪೂರ್ಣಗೊಳಿಸಿಲ್ಲ.

1950ರಿಂದ 1996ರ ವರೆಗೆ, ಅಂದರೆ 46 ವರ್ಷಗಳ ಕಾಲ ಕೇಂದ್ರ ಚುನಾವಣ ಆಯುಕ್ತರಾಗಿ ಕೆಲಸ ಮಾಡಿದವರ ಸಂಖ್ಯೆ ಕೇವಲ 10. ಆದರೆ, 1996ರಿಂದ ಇಲ್ಲಿವರೆಗೆ 15 ಮಂದಿ ಸಿಇಸಿಗಳು ನೇಮಕಗೊಂಡಿದ್ದಾರೆ.

2004ರಿಂದ 2015ರ ವರೆಗೆ ಆರು ಸಿಇಸಿಗಳು, 2015ರಿಂದ ಇಲ್ಲಿವರೆಗೆ ಎಂಟು ಸಿಇಸಿಗಳನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಯಾರೊಬ್ಬರು ಆರು ವರ್ಷಗಳ ಪೂರ್ಣಾವಧಿ ಪೂರೈಸಿಲ್ಲ. 2007ರಿಂದ ಇಲ್ಲಿವರೆಗಿನ ಸಿಇಸಿಗಳಲ್ಲಿ ಬಹಳಷ್ಟು ಮಂದಿ ಕೇವಲ 2 ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಕೆಲಸ ಮಾಡಿದ್ದಾರೆ.

ಸೇವಾವಧಿ ಬಗ್ಗೆ ಇರುವುದೇನು?
ಸಂವಿಧಾನದ ಪ್ರಕಾರ, ಕೇಂದ್ರ ಚುನಾವಣ ಆಯುಕ್ತರ ಅಧಿಕಾರಾವಧಿ 6 ವರ್ಷ ಅಥವಾ ಸಿಇಸಿಗೆ 65 ವರ್ಷ ವಯಸ್ಸು ಆಗುವವರೆಗೆ ಇರುತ್ತದೆ. ಇಲ್ಲಿರುವ ಆಕ್ಷೇಪವೇನೆಂದರೆ ಕೇಂದ್ರ ಸರಕಾರ, ಪೂರ್ಣಾವಧಿವರೆಗೆ ಸೇವೆ ಸಲ್ಲಿಸಬಹುದಾದ ಅಧಿಕಾರಿಗಳನ್ನು ಸಿಇಸಿ ಹುದ್ದೆಗೆ ನೇಮಕ ಮಾಡುವುದೇ ಇಲ್ಲ. ಅವರ ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇದೆ ಅನ್ನುವಾಗ ನೇಮಕ ಮಾಡುತ್ತದೆ. ಹೀಗಾಗಿ, ಆರು ವರ್ಷ ಪೂರ್ಣಗೊಳಿಸುವುದಿಲ್ಲ.
ಇದೊಂದು ಆಘಾತಕಾರಿ ವಿಷಯವಾಗಿದ್ದು, ಕೇಂದ್ರ ಚುನಾವಣ ಆಯೋಗದ ಸ್ವಾಯತ್ತತೆಗೆ ಭಂಗ ತರುವಂತದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕಾನೂನು ಸಚಿವರಿಗೆ ತಿರುಗೇಟು
ಇತ್ತೀಚೆಗಷ್ಟೇ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ಭಾರತದಲ್ಲಿ ಮಾತ್ರ ಜಡ್ಜ್ಗಳನ್ನು ಜಡ್ಜ್ಗಳೇ ನೇಮಕ ಮಾಡಿಕೊಳ್ಳುತ್ತಾರೆ. ಈ ವ್ಯವಸ್ಥೆ ಸರಿಯಾಗಿಲ್ಲ. ಪಾರದರ್ಶಕ  ವಾಗಿಲ್ಲ ಎಂದಿದ್ದರು. ಅಲ್ಲದೆ ಕೊಲಿಜಿಯಂನಲ್ಲಿರುವವರಿಗೆ ಪರಿಚಯವಿರುವವರನ್ನು ಮಾತ್ರ ಆಯ್ಕೆ ಮಾಡಿ ಕೊಳ್ಳಲಾಗುತ್ತಿದೆ ಎಂದೂ ಹೇಳಿದ್ದರು.

ಇಂಥವೇ ಮಾತುಗಳನ್ನು ಪೀಠ ಪರೋಕ್ಷವಾಗಿ ಹೇಳುವ ಮೂಲಕ ಕಿರಣ್‌ ರಿಜಿಜು ಅವರಿಗೆ ತಿರುಗೇಟು ನೀಡಿದೆ. ಅಂದರೆ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ನೇಪಾಲದಲ್ಲಿ ಪಾರದರ್ಶಕವಾಗಿ ಚುನಾವಣ ಆಯುಕ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪಾರದರ್ಶಕತೆಗೆ ಅಲ್ಲಿನ ಕಾನೂನು ಬಲವಿದೆ ಎಂದಿದೆ.

ಕಾನೂನು ಆಯೋಗದ ವರದಿ
2015ರಲ್ಲಿ ಕಾನೂನು ಆಯೋಗ ಸಿಇಸಿಗಳ ನೇಮಕ ಸಂಬಂಧ ಒಂದು ಶಿಫಾರಸು ಮಾಡಿತ್ತು. ಕೊಲಿಜಿಯಂ ಮಾದರಿಯಲ್ಲೇ ಒಂದು ಸಮಿತಿ ಇರಬೇಕು. ಇದರಲ್ಲಿ ಪ್ರಧಾನ ಮಂತ್ರಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿರಬೇಕು ಎಂದಿತ್ತು. ಆದರೆ ಇದನ್ನು ಕೇಂದ್ರ ಸರಕಾರ ಒಪ್ಪಿಕೊಂಡಿಲ್ಲ.

-ಸೋಮಶೇಖರ ಸಿ.ಜೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next