ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆ 109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳನ್ನು ಓಡಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಇಂಡಿಯನ್ ರೈಲ್ವೆ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಮಾಲೀಕತ್ವದ ತೇಜಸ್ ಎಕ್ಸ್‌ಪ್ರೆಸ್ ಅನ್ನು ಜನರ ಕೊರತೆ ಹಿನ್ನೆಲೆಯಲ್ಲಿ ನ.24ರಿಂದ ಪ್ರಯಾಣ ರದ್ದುಗೊಳಿಸಲು ಚಿಂತನೆ ನಡೆಸಿದೆ. ತೇಜಸ್ ಎಕ್ಸ್‌ಪ್ರೆಸ್ ಖಾಸಗಿ ರೈಲುಗಳ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಹೊಸದಿಲ್ಲಿ-ಲಕ್ನೋ ಮತ್ತು ಅಹಮದಾಬಾದ್-ಮುಂಬಯಿ ನಡುವಿನ ರೈಲು ಸಂಚಾರವನ್ನು ಕ್ರಮವಾಗಿ ನ.23 ಮತ್ತು ನ.24ರಿಂದ ರದ್ದುಗೊಳಿಸಲು ಐಆರ್‌ಸಿಟಿಸಿ ತೀರ್ಮಾನಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಜನರ ಪ್ರಯಾಣ ಕಡಿಮೆಯಾಗಿದೆ. ಶೇ.70ರಷ್ಟು ಪ್ರಯಾಣಿಕರು ಇದ್ದರೆ ಮಾತ್ರ ಅದಕ್ಕೆ ಲಾಭವಾಗಿ ಪರಿಣಮಿಸುತ್ತದೆ. ಹೀಗಾಗಿ, ಖಾಸಗಿ ರೈಲುಗಳನ್ನು ಓಡಿಸಬೇಕು ಎಂಬ ರೈಲ್ವೆ ಇಲಾಖೆಯ ಯೋಜನೆಗೆ ಈ ಬೆಳವಣಿಗೆ ಹಿನ್ನಡೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಐಆರ್‌ಸಿಟಿಸಿ ಪ್ರತಿ ಟ್ರಿಪ್‌ಗೆ 15 ಲಕ್ಷ ಮತ್ತು ಲೀಸ್ ವೆಚ್ಚ ಭರಿಸಬೇಕು. ಆ ಮೊತ್ತ ಬರಬೇಕೆಂದರೆ ಶೇ.70ರಷ್ಟು ಪ್ರಯಾಣಿಕರು ಪ್ರಯಾಣಿಸಬೇಕು.
ಬೆಂಗಳೂರು, ಚೆನ್ನೈ, ಸಿಕಂದರಾಬಾದ್, ಜೈಪುರ ಸೇರಿದಂತೆ 109 ಮಾರ್ಗಗಳಲ್ಲಿ ಖಾಸಗಿ ಸಂಸ್ಥೆಗಳು ರೈಲು ಓಡಿಸಲು ಆಸಕ್ತಿ ವ್ಯಕ್ತಪಡಿಸಿವೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆದಿದೆ. ತೇಜಸ್ ಎಕ್ಸ್‌ಪ್ರೆಸ್ ರದ್ದು ತಾತ್ಕಾಲಿಕ ಹಿನ್ನಡೆ. ಅದು ದೂರಗಾಮಿ ಪರಿಣಾಮ ಬೀರದು ಎನ್ನುವುದು ಸಂಸ್ಥೆಯ ಅಧಿಕಾರಿಯೊಬ್ಬರ ಅಂಬೋಣ. 2023-24ರಿಂದ ಖಾಸಗಿ ರೈಲುಗಳು ಓಡುವ ಬಗ್ಗೆ ಯೋಚನೆ ಇದೆ. ಆ ವೇಳೆಗೆ ಪರಿಸ್ಥಿತಿ ಯಥಾ ಸ್ಥಿತಿಗೆ ಬರಲಿದೆ ಎನ್ನುವುದು ಕ್ರೈಸಿಲ್‌ನ ಸಾರಿಗೆ ವಿಭಾಗದ ತಜ್ಞ ಜಗನ್ನಾರಾಯಣನ್ ಪದ್ಮನಾಭನ್.