ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇದೀಗ ಸಾರ್ವತ್ರಿಕ ಚುನಾವಣೆ ಅಧಿಕೃತವಾಗಿ ಘೋಷಣೆಯಾಗಿದ್ದು, ಏಪ್ರಿಲ್ 11ರಿಂದ 7 ಹಂತಗಳಲ್ಲಿ ಮೇ 19ರವರೆಗೆ ಚುನಾವಣೆ ನಡೆಯಲಿದ್ದು, ಇದು ಜಗತ್ತಿನ ಅತ್ಯಂತ ದುಬಾರಿ ಚುನಾವಣೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹಿಮಾಲಯ ಪ್ರಾಂತ್ಯದ ಉತ್ತರದ ಭಾಗ, ಅರಬ್ಬಿ ಸಮುದ್ರ ಭಾಗದ ದಕ್ಷಿಣ ಭಾಗ, ಥಾರ್ ಮರುಭೂಮಿಯ ಪಶ್ಚಿಮ ಭಾಗ ಹಾಗೂ ಉಷ್ಣವಲಯ ಹೊಂದಿರುವ ಪೂರ್ವ ಭಾಗ ಸೇರಿದಂತೆ ದೇಶಾದ್ಯಂತ ಆರು ವಾರಗಳ ದೀರ್ಘ ಕಾಲದವರೆಗೆ ಮತದಾನ ನಡೆಯಲಿದೆ.
ದೇಶದಲ್ಲಿ ನಡೆಯಲಿರುವ ಚುನಾವಣೆಗೆ ವ್ಯಯಿಸುವ ಹಣ ಬರೋಬ್ಬರಿ 7 ಸಾವಿರ ಬಿಲಿಯನ್ ಡಾಲರ್ ನಷ್ಟು (ಅಂದಾಜು 44ಸಾವಿರ ಕೋಟಿ ರೂಪಾಯಿ) ಎಂಬುದಾಗಿ ನವದೆಹಲಿ ಮೂಲದ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ತಿಳಿಸಿದೆ.
ವರದಿ ಪ್ರಕಾರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ತಗುಲಿದ ವೆಚ್ಚ 6.5 ಬಿಲಿಯನ್ ಡಾಲರ್ ಎಂಬುದಾಗಿ ಓಪನ್ ಸೀಕ್ರೆಟ್ ಡಾಟ್ ಆರ್ಗನೈಜೇಶನ್ ನ ಮಾಹಿತಿಯನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ. 2014ರಲ್ಲಿ ನಡೆದ ಸಂಸತ್ ಚುನಾವಣೆಯ ಮತದಾನಕ್ಕಿಂತ ಈ ಬಾರಿಯ ವೆಚ್ಚ ಶೇ.40ರಷ್ಟು ಅಧಿಕವಾಗಲಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ವಿವರಿಸಿದೆ.
ಇದರಲ್ಲಿ ಹೆಚ್ಚಿನ ಹಣವನ್ನು ಸಾಮಾಜಿಕ ಜಾಲತಾಣ, ಸಂಚಾರ ಹಾಗೂ ಜಾಹೀರಾತಿಗೆ ಉಪಯೋಗಿಸುವ ಮೂಲಕ ಹಣದ ಖರ್ಚು ಹೆಚ್ಚಾಗಲು ಕಾರಣವಾಗಲಿದೆ. 2014ರಲ್ಲಿ ಸಾರ್ವತ್ರಿಕ ಚುನಾವಣೆಗೆ ಸಾಮಾಜಿಕ ಜಾಲತಾಣಕ್ಕೆ ವ್ಯಯಿಸಿದ ಹಣದ ಮೊತ್ತ 2.5 ಬಿಲಿಯನ್ ಡಾಲರ್ ಅದು ಈ ಬಾರಿ 50 ಬಿಲಿಯನ್ ಗೆ ಏರಲಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಅಧ್ಯಕ್ಷ ಎನ್.ಭಾಸ್ಕರ ರಾವ್ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ತಂಡ ಸಂದರ್ಶನಗಳ ಮೂಲಕ, ಸರ್ಕಾರಿ ಅಂಕಿ ಅಂಶ, ಹೆಲಿಕಾಪ್ಟರ್ ಗಳ ಬಳಕೆ, ಬಸ್, ವಿಮಾನ ಬಳಕೆ ಮಾಡುವ ಅಭ್ಯರ್ಥಿಗಳ, ಪಕ್ಷದ ಕಾರ್ಯಕರ್ತರ ಮಾಹಿತಿಯನ್ನು ಕಲೆ ಹಾಕುವ ಮೂಲಕ ಖರ್ಚು-ವೆಚ್ಚದ ಮಾಹಿತಿ ನೀಡಲಾಗಿದೆ ಎಂದು ರಾವ್ ವಿವರಿಸಿದ್ದಾರೆ.
ದೇಶದ 545 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸುಮಾರು 8 ಸಾವಿರಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯುತ್ತಾರೆ. ಈ ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಮತದಾರನ ಒಲೈಕೆಗೆ ವಿವಿಧ ರೀತಿಯಲ್ಲಿ ಮುಂದಾಗುತ್ತಾರೆ. ಹೀಗಾಗಿ ಅಭ್ಯರ್ಥಿಗಳು ಇತ್ತೀಚೆಗೆ ದುಬಾರಿ ಗಿಫ್ಟ್ ಗಳ ಮೂಲಕ ಮತದಾರನ ಮೇಲೆ ಪ್ರಭಾವ ಬೀರಲು ಹೆಚ್ಚು ಮುಂದಾಗುತ್ತಿದ್ದಾರೆ ಎಂದು ವರದಿ ಹೇಳಿದೆ.