Advertisement

ದೇಹ ಕಾಯೋ ಸೈನಿಕ!

10:25 AM Sep 27, 2019 | mahesh |

ನಮ್ಮ ಸುತ್ತಲೂ ಖಾಯಿಲೆ ಹರಡುವ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿ ಜೀವಿಗಳು ಬೇಕಾದಷ್ಟಿವೆ. ಹಾಗಿದ್ದೂ ನಾವ್ಯಾಕೆ ಪದೇ ಪದೆ ಕಾಯಿಲೆ ಬೀಳುವುದಿಲ್ಲ ಗೊತ್ತಾ? ನಮ್ಮೊಳಗೂ ಸೈನಿಕರಿದ್ದಾರೆ!

Advertisement

ಇಂದು ಬಹುತೇಕ ರಾಷ್ಟ್ರಗಳು ಸೇನೆಯನ್ನು ಹೊಂದಿವೆ. ನೆರೆಹೊರೆಯ ರಾಷ್ಟ್ರಗಳಿಂದ ಅದೆಂಥದ್ದೇ ತೊಂದರೆ ಎದುರಾದರೂ ಸೇನೆ ರಕ್ಷಣೆ ಒದಗಿಸುತ್ತದೆ. ದೇಶಕ್ಕೆ, ಸೇನಾ ವ್ಯವಸ್ಥೆ ಯಾವ ರೀತಿ ಬಲವನ್ನು ನೀಡುತ್ತದೆಯೋ ಅದೇ ರೀತಿ ನಮ್ಮ ದೇಹದಲ್ಲೂ ಒಂದು ರಕ್ಷಣಾ ವ್ಯವಸ್ಥೆ ಇದೆ ಎನ್ನುವುದು ಸೋಜಿಗದ ಸಂಗತಿ. ನಮ್ಮ ದೇಹದೊಳಗಿರುವ ರಕ್ಷಣಾ ವ್ಯವಸ್ಥೆ, ರೋಗ ರುಜಿನಗಳು ಮತ್ತು ಬಾಹ್ಯ ಪರಿಸರದಲ್ಲಿನ ಕಲ್ಮಶಗಳಿಂದ ನಮಗೆ ರಕ್ಷಣೆಯನ್ನು ಒದಗಿಸುತ್ತದೆ.

ಭದ್ರವಾದ ರಕ್ಷಣಾ ವ್ಯವಸ್ಥೆ
ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಸದೃಢವಾಗಿದ್ದಾಗ ವೈರಸ್‌ಗಳ ಕಾಟ, ಆಟ ನಡೆಯುವುದಿಲ್ಲ. ಅವುಗಳು ಶಕ್ತಿ ಕಳೆದುಕೊಂಡು ದುರ್ಬಲವಾಗಿಬಿಡುತ್ತವೆ. ಅದಕ್ಕೆ ಮುಖ್ಯ ಕಾರಣ- ನಮ್ಮ ರಕ್ತದಲ್ಲಿರುವ ಕಣಗಳು. ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೊಂದುವಲ್ಲಿ ಟಿ ಕೋಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಳೆಯ ವಯಸ್ಸಿನಲ್ಲಿ ಮನುಷ್ಯನ ದೇಹ ಅತಿ ಹೆಚ್ಚು ಟಿ ಕೋಶಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ರೋಗ ಹರಡುವ ವೈರಸ್‌ ಪ್ರವೇಶಿಸಿದಾಗ, ಒಂದೋ ದೇಹದ ರಕ್ಷಣಾ ವ್ಯವಸ್ಥೆ ಅದನ್ನು ಹೊಡೆದೋಡಿಸುತ್ತದೆ, ಇಲ್ಲವೇ ಕಾಯಿಲೆಗೆ ತುತ್ತಾದರೂ ದೇಹ ಬಹಳ ಬೇಗ ಚೇತರಿಸಿಕೊಂಡುಬಿಡುತ್ತದೆ. ವಯಸ್ಸಾಗುತ್ತಿದ್ದಂತೆ ರಕ್ತದಲ್ಲಿ ಟಿ ಕೋಶಗಳ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿಯೇ ಮುಪ್ಪಿನಲ್ಲಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಜೊತೆಗೆ ಖಾಯಿಲೆಗೆ ತುತ್ತಾದಾಗ ಅದರಿಂದ ಚೇತರಿಕೆಯೂ ನಿಧಾನ. ಟಿ ಕೋಶಗಳಂತೆಯೇ ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಹಲವು ಬಗೆಯ ಸೈನಿಕ ಕೋಶಗಳಿವೆ. ಅವೆಲ್ಲಾ, ನಮಗೆ ರಕ್ಷಣೆ ನೀಡುವ ಕೆಲಸದಲ್ಲಿ ನಿರತವಾಗಿರುತ್ತವೆ.

ವಯಸ್ಸಾದಾಗ ಏನಾಗುತ್ತದೆ?
ಮನುಷ್ಯನ ದೇಹಕ್ಕೆ ಆಯಸ್ಸು ಎಂಬುದಿರುವಂತೆಯೇ ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿರುವ ಕೋಶಗಳಿಗೂ ಆಯಸ್ಸು ಇರುತ್ತದೆ. ಅದು ಮುಗಿದಾಗ ಮತ್ತೆ ಅದರ ಸ್ಥಾನವನ್ನು ತುಂಬಲು ಹೊಸ ಟಿ ಕೋಶಗಳು ಹುಟ್ಟಿಕೊಳ್ಳುತ್ತವೆ. ಇದು ನಿರಂತರ ಪ್ರಕ್ರಿಯೆ. ಮೊದಲೇ ಹೇಳಿದಂತೆ, ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಟಿ ಕೋಶಗಳ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಮುದಿ ಟಿ ಕೋಶಗಳು ಅವಸಾನಗೊಳ್ಳುತ್ತವೆ, ಹೊಸ ಟಿ ಕೋಶಗಳ ಉತ್ಪಾದನೆ ನಿಲ್ಲುತ್ತದೆ. ಅಯ್ಯಯ್ಯೋ, ಹಾಗಾದರೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲವಾಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲೇ ಇರುವುದು ಸ್ವಾರಸ್ಯ. ವಯಸ್ಸಾಗುತ್ತಿದ್ದಂತೆಯೇ ಹೊಸ ಕೋಶಗಳ ಉತ್ಪಾದನೆ ನಿಲ್ಲುತ್ತದೆ ನಿಜ, ಆದರೆ ಅದೇ ಸಮಯಕ್ಕೆ ದೇಹದಲ್ಲಿ ಮೊದಲೇ ಇರುವ ಟಿ ಕೋಶಗಳ ಆಯಸ್ಸು ಹೆಚ್ಚುತ್ತಾ ಹೋಗುತ್ತದೆ. ಅಂದರೆ, ಅವು ಬಹಳ ಬೇಗ ಅವಸಾನಗೊಳ್ಳುವುದಿಲ್ಲ. ಅವು ದೇಹದ ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಭದ್ರವಾಗಿ ನೆಲೆಯೂರಿಬಿಡುತ್ತವೆ. ಹೀಗಾಗಿ, ಕಡೆಯವರೆಗೂ ದೇಹದಲ್ಲಿ ಆರೋಗ್ಯಕರ ಸಂಖ್ಯೆಯ ಟಿ ಕೋಶಗಳು ಇದ್ದೇ ಇರುತ್ತವೆ.

ನಮ್ಮ ದೇಹದ ರಕ್ಷಣಾ ವ್ಯವಸ್ಥೆ ವಯಸ್ಸಾದ ಮೇಲೂ ಚೆನ್ನಾಗಿ ಇರಬೇಕೆಂದರೆ, ನಾವು ಕೆಲ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
– ಒಳ್ಳೆಯ ನಿದ್ದೆ
– ಹಣ್ಣು, ತರಕಾರಿ ಸೇವನೆ
– ನೀರು ಸೇವನೆ
– ವ್ಯಾಯಾಮ

Advertisement

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next