Advertisement

ಅಪ್ಪ-ಅಮ್ಮನೆಂಬ ಪ್ರೀತಿಯ ಜೀವಗಳ ನೋಯಿಸುವಿರೇಕೆ?

10:21 AM Mar 02, 2020 | mahesh |

ನಮ್ಮ ದೇಶದ ಸಂಸ್ಕೃತಿ ಮಾತೃ ದೇವೋಭವ, ಪಿತೃ ದೇವೋಭವ ಎಂದು ಹೇಳುತ್ತದೆ. ಶ್ರೀರಾಮ, ತಂದೆ-ತಾಯಿಯ ಆಜ್ಞೆ ಪಾಲಿಸಲು 14 ವರ್ಷ ವನವಾಸಕ್ಕೆ ಹೋದರು. ಪವಿತ್ರ ಕುರಾನ್‌ (46-15) ಕೂಡ, ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಹೇಳುತ್ತದೆ. “”ತಾಯಿಯ ಪಾದದ ಕೆಳಗೆ ಸ್ವರ್ಗವಿದೆ” ಎಂದು ಪ್ರವಾದಿ ಮೊಹಮ್ಮದ(ಸ) ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯ ತನ್ನ ತಂದೆ ತಾಯಿಯನ್ನು ಗೌರವಿಸಬೇಕು ಎಂದು ಬೈಬಲ್‌ ಹೇಳುತ್ತದೆ. ಯಾವುದೇ ಯುದ್ಧಕ್ಕೆ ಹೊರಡುವ ಮೊದಲು ಶಿವಾಜಿ ಮಹರಾಜರು ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿದ್ದರು. ಯುವ ಜನಾಂಗ ಇವುಗಳಿಂದ ಪಾಠ ಕಲಿಯಬೇಕಾಗಿದೆ.

Advertisement

ಬದುಕು ದಯಪಾಲಿಸಿದ ತಂದೆ-ತಾಯಿಯನ್ನು ಗೌರವಿಸಿಕೊಂಡೇ ಬಂದ ಸಂಸ್ಕೃತಿ ನಮ್ಮದು. ಒಬ್ಬ ವ್ಯಕ್ತಿಗೆ ಬದುಕಲ್ಲಿ ಅನೇಕ ಬಾಂಧವ್ಯಗಳಿದ್ದರೂ ತಂದೆ-ತಾಯಿಗಿಂತ ಅಮೂಲ್ಯವಾದ, ಮಿಗಿಲಾದ ಸಂಬಂಧ ಮತ್ತೂಂದಿಲ್ಲ. ಒಂಬತ್ತು ತಿಂಗಳು ಹೊತ್ತು ಹೆತ್ತು, ಸಾಕಿ ಸಲಹಿ, ಮುತ್ತಿಟ್ಟು ಮುದ್ದಿಸಿ ಮಾರ್ಗದರ್ಶನ ನೀಡಿ ಮಾಂಸದ ಮುದ್ದೆಯನ್ನು ಮಾನವನನ್ನಾಗಿ ರೂಪಿಸುವಲ್ಲಿ ಅಪ್ಪ-ಅಮ್ಮನ ಪಾತ್ರ, ಶ್ರಮ ಅವರ್ಣನೀಯವಾದದ್ದು. ಮಕ್ಕಳು ಕೊಡುವ ತೊಂದರೆಗಳನ್ನು ಸಹನೆಯಿಂದ ತಾಳಿಕೊಂಡು, ಅವು ಬೆಳೆಯುವಾಗ ಮಾಡುವ ತಪ್ಪುಗಳನ್ನು ಮನ್ನಿಸಿ, ತಿದ್ದಿ ತಿಳಿಹೇಳಿ, ತಮ್ಮ ಪ್ರೇಮ-ಔದಾರ್ಯ, ಸಹನೆ, ತ್ಯಾಗಗಳಿಂದ ಮಗುವನ್ನು ವ್ಯಕ್ತಿಯನ್ನಾಗಿ ರೂಪಿಸುತ್ತವೆ ಈ ಎರಡು ಮಹಾ ಜೀವಗಳು. ಆದರೆ, ಇಂದು ಅನೇಕರು ತಂದೆ ತಾಯಿಯನ್ನು ಕಡೆಗಣಿಸುತ್ತಾರೆ. ಅವರನ್ನು ಹೊರೆ ಎಂಬಂತೆ ಭಾವಿಸುತ್ತಾರೆ. ಅವರಿಗೆಲ್ಲ ನೋವು ಕೊಟ್ಟು ಎಷ್ಟು ಬಾರಿ ದೇವರ ಪ್ರಾರ್ಥನೆ ಮಾಡಿದರೆ ಫ‌ಲವೇನು? ಇಂದು ನಾವು ಯಾವುದೇ ಉನ್ನತ ಸ್ಥಾನಮಾನದಲ್ಲಿದ್ದರೂ ಅದಕ್ಕೆ ಮೂಲ ಕಾರಣ ಅಂದು ಅಪ್ಪ ಅಮ್ಮ ಮಾಡಿದ ತ್ಯಾಗ.

ಇವತ್ತು ಮನೆಯಲ್ಲಿರುವ ಎಲ್ಲರೂ ನೌಕರಿಗೆ ಹೋಗಬೇಕು. ವಯಸ್ಸಾದವರ ಚಾಕರಿ ಮಾಡಲು ನಮಗೆ ಪುರುಸೊತ್ತೆಲ್ಲಿದೆ? ಎಂದೂ ಕೆಲವರು ವಾದ ಮಂಡಿಸುತ್ತಾರೆ. ಈ ಕಾರಣಕ್ಕಾಗಿ ಕೆಲವರಂತೂ ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ದೂಡಿ ತಿಂಗಳಗಿಷ್ಟೆಂದು ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ! ಈ ಹಣವೇನು ಅವರು ನಮ್ಮನ್ನು ಸಾಕಿ ಸಲಹಿ, ಬೆಳೆಸಿದ್ದಕ್ಕೆ ನಾವು ಕೊಡುವ ಕೂಲಿಯೇ?

ಇಂದಿನ ಯುವ ಸಮೂಹ ಈ ವಿಚಾರದ ಬಗ್ಗೆ ದೀರ್ಘ‌ವಾಗಿ ಚಿಂತಿಸುವ ಅವಶ್ಯಕತೆ ಇದೆ. ಇಂದಿನ ಯುವಕ ಯುವತಿಯರು ಮಾತು ಮಾತಿಗೆ ಸಿಡುಕುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮದೇ ಗ್ಯಾಜೆಟ್‌ ಲೋಕದಲ್ಲಿ ಮುಳುಗಿ ಅಪ್ಪ-ಅಮ್ಮನನ್ನು ಮರೆಯುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಮಾತೃ ದೇವೋಭವ, ಪಿತೃ ದೇವೋಭವ ಎಂದು ಹೇಳುತ್ತದೆ ಎಂಬುದನ್ನು ಮರೆಯಬಾರದು. ಶ್ರೀರಾಮ ತನ್ನ ಮಲತಾಯಿಯ ಆದೇಶವನ್ನು ಶಿರಸಾವಹಿಸಿ ಪಾಲಿಸಿದರು ಮತ್ತು ಅಯೋಧ್ಯೆ ಸಾಮ್ರಾಜ್ಯವನ್ನು ತಮ್ಮ ಕಿರಿಯ ಸಹೋದರ ಭರತರಿಗೆ ಹಸ್ತಾಂತರಿಸಿ 14 ವರುಷಗಳ ಕಾಲ ವನವಾಸಕ್ಕೆ ಹೋದರು. ತಮ್ಮ ವಿಚಾರದಲ್ಲಿ ತಂದೆ ತಾಯಿ ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದರೂ ಅವರ ಆಜ್ಞೆಯನ್ನು ಪಾಲಿಸಿದರು.

ಪವಿತ್ರ ಕುರಾನ್‌ (46-15) ಕೂಡ, ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಹೇಳುತ್ತದೆ. “”ತಾಯಿಯ ಪಾದದ ಕೆಳಗೆ ಸ್ವರ್ಗವಿದೆ” ಎಂದು ಪ್ರವಾದಿ ಮೊಹಮ್ಮದ(ಸ) ಹೇಳಿದ್ದಾರೆ. ತಂದೆ ತಾಯಿ ಮಕ್ಕಳಿಂದ ನಿರೀಕ್ಷಿಸುವುದು ಸಿರಿಸಂಪತ್ತನ್ನಲ್ಲ. ಬದಲಾಗಿ ಪ್ರೀತಿ-ಮಮತೆಯನ್ನು. ಇವತ್ತು ನಾವು ದಿನದ ಬಹುಪಾಲು ಸಮಯವನ್ನು ಅನವಶ್ಯಕ ಸಂಗತಿಗಳಿಗೆ ಪೋಲು ಮಾಡುತ್ತಿದ್ದೇವೆ. ಅಪ್ಪ-ಅಮ್ಮನ ಜೊತೆಗೆ ಪ್ರೀತಿಯಿಂದ ಮಾತನಾಡಿಸಲು ನಮಗೆ ಸಮಯವಿಲ್ಲ. ಮೊಬೈಲ್‌ ಇಂಟರ್ನೆಟ್‌ನಲ್ಲಿ ಮುಳುಗಿರುವ ನಮಗೆ ತಲೆಯೆತ್ತಿ ಅವರ ಕಡೆ ಪ್ರೀತಿಯಿಂದ ನೋಡಲಿಕ್ಕೂ ಸಮಯವಿಲ್ಲ! ಪ್ರತಿಯೊಬ್ಬ ಮನುಷ್ಯ ತನ್ನ ತಂದೆ ತಾಯಿಯನ್ನು ಗೌರವಿಸಬೇಕು ಎಂದು ಬೈಬಲ್‌ ಹೇಳುತ್ತದೆ.

Advertisement

ಶ್ರವಣಕುಮಾರ ತಮ್ಮ ಅಂಧ ಪೋಷಕರಿಗೆ ನಿರಂತರವಾಗಿ ಮತ್ತು ದಣಿವರಿಯದೇ ಸೇವೆ ಸಲ್ಲಿಸಿದ್ದರು. ಅವರ ಪೋಷಕರು ತೀರ್ಥಯಾತ್ರೆ ಮಾಡಲು ಬಯಸಿದಾಗ ಅವರು ತಕ್ಷಣ ಪ್ರಯಾಣಕ್ಕೆ ಸಿದ್ಧತೆ ಆರಂಭಿಸುತ್ತಾರೆ. ಅಪ್ಪ-ಅಮ್ಮನನ್ನು ಕಾಲ್ನಡಿಗೆಯಿಂದ ಹೊತ್ತುಕೊಂಡು ಸಾಗುತ್ತಾರೆ. ಯಾವುದೇ ಯುದ್ಧಕ್ಕೆ ಹೊರಡುವ ಮೊದಲು ಶಿವಾಜಿ ಮಹಾರಾಜರು ತಮ್ಮ ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿದ್ದರು. ಯುವ ಜನಾಂಗ ಇವುಗಳಿಂದ ಪಾಠ ಕಲಿಯಬೇಕಾಗಿದೆ.

ಒಂದು ಸಂಗತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವಿಂದು ನಮ್ಮ ತಂದೆ ತಾಯಿಗೆ, ಅತ್ತೆ ಮಾವಂದಿರ ಜತೆಗೆ ಯಾವ ರೀತಿ ವರ್ತಿಸುತ್ತಿದ್ದೇವೆ ಎನ್ನುವುದನ್ನೆಲ್ಲ ನಮ್ಮ ಮಕ್ಕಳು ಗಮನಿಸುತ್ತಿರುತ್ತಾರೆ. ಅವುಗಳನ್ನೇ ಮಕ್ಕಳು ನಕಲು ಮಾಡುತ್ತಾರೆ. ಸೊಸೆಗೆ, “ತನ್ನ ತಾಯಿಗೆ ವಯಸ್ಸಾಗಿದೆ’ ಎಂದರಿವಾಗುತ್ತದೆ. ಆದರೆ “ತನ್ನ ಅತ್ತೆಗೂ ವಯಸ್ಸಾಗಿದೆ’ ಎಂಬ ಭಾವನೆ ಬರುವುದೇ ಇಲ್ಲ. ಹಾಗಾಗಿ ಸಾಕಷ್ಟು ಸೊಸೆಯಂದರು ಅತ್ತೆಯನ್ನು “ಮುದಕಿ’ ಎಂದು ಹಂಗಿಸುತ್ತಾ, ತಮ್ಮ ತಾಯಿಯನ್ನು ಪ್ರೀತಿಯಿಂದ “ಅಮ್ಮಾ’ ಎಂದೂ ಕರೆಯುತ್ತಾರೆ.

ವಿದ್ಯಾವಂತ ಸೊಸೆಯಾದರೂ ಸಹ ಅತ್ತೆ-ಸೊಸೆ ಸಂಬಂಧದ ವಿಷಯಕ್ಕೆ ಬಂದಾಗ ಮಾತ್ರ ಅವರವರ ವಿದ್ಯೆ ಸಂಸ್ಕಾರಗಳನ್ನೆಲ್ಲ ಗಾಳಿಗೆ ತೂರಿ ಬಿಡುತ್ತಾರೆ. ಎಂತಹ ವಿಪರ್ಯಾಸ! ಇಂದಲ್ಲ ನಾಳೆ ನಾವೂ ಮುದುಕರಾಗುತ್ತೇವೆ ಎಂಬ ಕಿಂಚಿತ್‌ ಅರಿವೂ ನಮಗಿಲ್ಲದಾಯಿತೇ?

ತಂದೆ ತಾಯಿಯನ್ನು ಪ್ರೀತಿಯಿಂದ ಮಾತನಾಡಿಸಿ. ಸಮಯ ಕಳೆಯಿರಿ. ಅವರು ನಿಮ್ಮ ಶ್ರೇಯೋಭಿವೃದ್ಧಿ, ಸುಖಸಂತೋಷವನ್ನು ಬಯಸುವ ಪವಿತ್ರ ಹೃದಯಗಳು. ಅವರ ವಿಷಯದಲ್ಲಿ ಖರ್ಚುವೆಚ್ಚಕ್ಕೆ ಜಿಪುಣತನ ಮಾಡಬೇಡಿ. ಅಪ್ಪ-ಅಮ್ಮ ಪ್ರೀತಿ, ಮಮತೆ, ಸಹನೆಗೆ ಪರ್ಯಾಯ ಪದಗಳು.

ತಮ್ಮ ಮಕ್ಕಳು ಯಾವಾಗಲೂ ಸಂತೋಷವಾಗಿ ಇರಬೇಕು, ತಾವು ಅನುಭವಿಸಿದ ಕಷ್ಟದ ನೆರಳೂ ಮಕ್ಕಳ ಮೇಲೆ ಬೀಳಬಾರದು ಎಂಬ ಕಾರಣಕ್ಕಾಗಿ ಯಾವ ತ್ಯಾಗಕ್ಕಾದರೂ ಅವರು ಸಿದ್ಧರಿರುತ್ತಾರೆ. ಅವರಿಗೆ ಎಷ್ಟು ಸೇವೆ ಮಾಡಿದರೂ ಕಡಿಮೆಯೇ. ಇನ್ನು ಮಕ್ಕಳಲ್ಲಿ ಸದ್ಗುಣಗಳನ್ನು ತುಂಬುವ ಜವಾಬ್ದಾರಿಯೂ ತಂದೆ-ತಾಯಿಯ ಮೇಲಿರುತ್ತದೆ. ತಂದೆ ತಾಯಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸುವುದು, ಸಿರಿವಂತರನ್ನಾಗಿಸುವುದು ಮುಖ್ಯವಲ್ಲ, ಆದರೆ ಅವರ ಚಾರಿತ್ರÂವನ್ನು ಬೆಳೆಸುವದು ಅತ್ಯುನ್ನತ ಕರ್ತವ್ಯವಾಗಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆಧುನಿಕತೆಯ ಬದುಕಿಗೆ ಮಾರುಹೋದ ಯುವ ಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರಾಗುತ್ತಿರುವುದು ವಿಪರ್ಯಾಸ.

ತಂದೆ ತಾಯಿ ಮಕ್ಕಳಿಂದ ನಿರೀಕ್ಷಿಸುವುದು ಸಿರಿಸಂಪತ್ತನ್ನಲ್ಲ. ಬದಲಾಗಿ ಪ್ರೀತಿ-ಮಮತೆಯನ್ನು. ಇವತ್ತು ನಾವು ದಿನದ ಬಹುಪಾಲು ಸಮಯವನ್ನು ಅನವಶ್ಯಕ ಸಂಗತಿಗಳಿಗೆ ಪೋಲು ಮಾಡುತ್ತಿದ್ದೇವೆ.

ಸೊಸೆಗೆ, “ತನ್ನ ತಾಯಿಗೆ ವಯಸ್ಸಾಗಿದೆ’ ಎಂದರಿವಾಗುತ್ತದೆ. ಆದರೆ “ತನ್ನ ಅತ್ತೆಗೂ ವಯಸ್ಸಾಗಿದೆ’ ಎಂಬ ಭಾವನೆ ಬರುವುದೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next