Advertisement

ಬೌದ್ದ ಭಿಕ್ಷುವಾಗಲು ಏಕೆ ಹಿಂದೇಟು: ಭಂತೇಜಿ

11:05 AM Nov 08, 2021 | Team Udayavani |

ವಾಡಿ: ಬುದ್ಧನನ್ನು ಆರಾಧಿಸುವ ಅಂಬೇಡ್ಕರ್‌ ಉತ್ತರಾಧಿಕಾರಿಗಳಲ್ಲಿ ಒಬ್ಬರೂ ಬೌದ್ಧ ಭಿಕ್ಷುವಾಗಲು ಮುಂದೆ ಬರುತ್ತಿಲ್ಲ. ಹೀಗಾದರೆ ಭಾರತ ಬೌದ್ಧಮಯ ಮಾಡುವುದಾದರೂ ಹೇಗೆ ಎಂದು ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ಮಹಾಥೇರೋ ಭಂತೆ ಸಕ್ಕು ಬೋದಿಧಮ್ಮ ಜಪಾನ್‌ ಕಳವಳ ವ್ಯಕ್ತಪಡಿಸಿದರು.

Advertisement

ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಡಾ| ಬಿ.ಆರ್‌.ಅಂಬೇಡ್ಕರ್‌ ತರುಣ ಸಂಘದ ವತಿಯಿಂದ ನಗರದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಏಳು ದಿನಗಳ ಜೆನ್‌ ಧ್ಯಾನ ಶಿಬಿರದ ಸಮಾರೋಪ ಸಮಾರಂಭ ಉದ್ಧೇಶಿಸಿ ಅವರು ಮಾತನಾಡಿದರು.

ಬುದ್ಧನ ಚಿಂತನೆಗಳನ್ನು ಗೌರವಿಸುವ ಬಾಬಾಸಾಹೇಬರ ಅನುಯಾಯಿಗಳು ತಮ್ಮ ಮಕ್ಕಳನ್ನು ಬೌದ್ಧ ಭಿಕ್ಷುವಾಗಲು ಬಿಡದಿದ್ದರೇ ಬೌದ್ಧ ಧಮ್ಮ ಉಳಿಯುವುದಾದರೂ ಹೇಗೆ? ಭಂತೇಜಿಯಾದರೆ ಮದುವೆಯಿಂದ ವಂಚಿತರಾಗುವ ಆತಂಕ ಎಲ್ಲರನ್ನು ಕಾಡುತ್ತಿದೆ. ಬುದ್ಧ ಮತ್ತು ಅಂಬೇಡ್ಕರರು ನಮಗಾಗಿ ಬದುಕೇ ತ್ಯಾಗ ಮಾಡಿದ್ದಾರೆ. ಧಮ್ಮಕ್ಕಾಗಿ ಬುದ್ಧನ ವೈಚಾರಿಕ ಚಿಂತನೆಗಳನ್ನು ಸಮಾಜದ ಜನಕ್ಕೆ ತಲುಪಿಸಲು ಧಮ್ಮ ಪ್ರಚಾರಕರಾಗಲಾದರೂ ಮುಂದೆ ಬನ್ನಿ ಎಂದು ಕೋರಿಕೊಂಡರು.

ಹೊಟ್ಟೆಪಾಡಿಗಾಗಿ ಚೀವರ್‌ ಧರಿಸಿ ಬೌದ್ಧ ಸನ್ಯಾಸಿಗಳಂತೆ ಬರುವವರೆಲ್ಲರೂ ಭಂತೇಜಿಗಳಾಗಿರುವುದಿಲ್ಲ. ಅವರು ಅಂಬೇಡ್ಕರ್‌ ತೋರಿಸಿಕೊಟ್ಟ ಧಮ್ಮ ಹೇಳುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಗುರುತಿಸಬೇಕು ಎಂದರು.

ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಸಾಮ್ರಾಟ್‌ ಅಶೋಕನ ಶಿಲಾ ಶಾಸನಗಳು ದೊರೆತಿವೆ. ಆ ಪರಿಸರದಲ್ಲಿ ಬೌದ್ಧ ಶಿಕ್ಷಣ ಕೇಂದ್ರ ತೆರೆದರೆ ಮಕ್ಕಳಿಗೆ ಧಮ್ಮ ಬೋಧನೆ ನೀಡಬಹುದು. ಈ ನಿಟ್ಟಿನಲ್ಲಿ ಹಿರಿಯರು ಯೋಚಿಸಬೇಕು ಎಂದು ಹೇಳಿದರು.

Advertisement

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಅಂಬೇಡ್ಕರ್‌ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಬೌದ್ಧ ಉಪಾಸಕರಾದ ಮಲ್ಲಿಕಾರ್ಜುನ ಕಟ್ಟಿ, ಶರಣಬಸು ಶಿರೂರಕರ, ರಾಹುಲ್‌ ಮೇನಗಾರ, ಬಸವರಾಜ ಜೋಗೂರ, ಪ್ರದೀಪ ಸಿಂಗೆ, ಚಂದ್ರಶೇಖರ ವಾಡೇಕರ, ಕಿಶೋರ ಮಂಗಳೂರಕರ ಹಾಗೂ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಂತೋಷ ಜೋಗೂರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next