ಕೆಲವು ಸಾಮ್ರಾಜ್ಯಗಳೇ ಹಾಗೆ, ಮೇರು ಶಿಖರವನ್ನೇರಿ ಕೆಲವೇ ಸಮಯದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ. ಬಹುಬೇಗನೇ ಚಕ್ರಾಧಿಪತ್ಯವನ್ನು ಪಡೆದು ಮೆರೆದ ಚಕ್ರವರ್ತಿಯೊಬ್ಬ ಕೆಲವೇ ವರ್ಷಗಳಲ್ಲಿಯೇ ಸಾಮ್ರಾಜ್ಯವನ್ನು ಕಳೆದುಕೊಂಡ ಹಾಗಾಗಿದೆ ಐಪಿಎಲ್ ನ (IPL) ಗುಜರಾತ್ ಟೈಟಾನ್ಸ್ (Gujarat Titans) ಪರಿಸ್ಥಿತಿ.
ಹೌದು, ಮೂರು ವರ್ಷಗಳ ಹಿಂದೆ ಐಪಿಎಲ್ ಪ್ರಪಂಚಕ್ಕೆ ಕಾಲಿಟ್ಟು ಮೊದಲ ವರ್ಷವೇ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಇದೀಗ ಮಾರಾಟಕ್ಕಿದೆ. ಇಂತಹ ಸುದ್ದಿಯೊಂದು ಹಲವರ ಹುಬ್ಬೇರುವಂತೆ ಮಾಡಿದೆ.
ಮೊದಲ ವರ್ಷ ಚಾಂಪಿಯನ್ ಆಗಿ, ಮುಂದಿನ ವರ್ಷ ರನ್ನರ್ ಅಪ್ ಆಗಿದ್ದ ತಂಡದಿಂದ ನಾಯಕ ಮೂರನೇ ವರ್ಷ ಹೊರಬಂದಿದ್ದರು. ಗುಜರಾತ್ ನ ಯಶಸ್ವಿ ನಾಯಕ ಹಾರ್ದಿಕ್ ಪಾಂಡ್ಯ ತಂಡ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿ ಅಲ್ಲಿ ಚುಕ್ಕಾಣಿ ಹಿಡಿದಿದ್ದರು. ಇದೀಗ ಫ್ರಾಂಚೈಸಿಯ ಮಾಲಕತ್ವವೇ ಬದಲಾಗುವ ಸಾಧ್ಯತೆಯಿದೆ.
ಯೂರೋಪ್ ನಾಡಿನ ಲುಕ್ಸೆಂಬರ್ಗ್ ನ ಸಿವಿಸಿ ಕ್ಯಾಪಿಟಲ್ಸ್ (CVC Capitals) ಎಂಬ ಸಂಸ್ಥೆಯು 2021ರಲ್ಲಿ ಬಿಡ್ಡಿಂಗ್ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ ಫ್ರಾಂಚೈಸಿಯನ್ನು ಖರೀದಿ ಮಾಡಿತ್ತು. ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯು ಅಂತಾರಾಷ್ಟ್ರೀಯ ರಗ್ಬಿ ಯೂನಿಯನ್, ವುಮೆನ್ಸ್ ಟೆನ್ನಿಸ್ ಅಸೋಸಿಯೇಶನ್, ಫಾರ್ಮುಲಾ 1 ಮತ್ತು ಸ್ಪೇನ್‌ನ ಲಾ ಲಿಗಾದಂತಹ ಉನ್ನತ ಫುಟ್‌ಬಾಲ್ ಕೂಟದಲ್ಲಿಯೂ ತನ್ನ ತಂಡಗಳನ್ನು ಹೊಂದಿದೆ.
ಕ್ರೀಡಾ ಲೋಕದಲ್ಲಿ ದೊಡ್ಡ ಹೆಸರು ಹೊಂದಿರುವ ಸಿವಿಸಿ ಕ್ಯಾಪಿಟಲ್ಸ್ 2021ರಲ್ಲಿ ಬಿಸಿಸಿಐ ಐಪಿಎಲ್ ನ ಫ್ರಾಂಚೈಸಿಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಹೆಚ್ಚು ಮಾಡುವ ನಿರ್ಧಾರ ಮಾಡಿದಾಗ ಕ್ರಿಕೆಟ್ ಗೆ ಹೆಜ್ಜೆ ಹಾಕಿತ್ತು. ಅದಾನಿ, ಟೊರೆಂಟ್ ಗಳನ್ನು ಹಿಂದಿಕ್ಕಿದ್ದ ಸಿವಿಸಿ ಕ್ಯಾಪಿಟಲ್ಸ್ ಗುಜರಾತ್ ಮೂಲದ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ಅದಾನಿ ಮತ್ತು ಟೊರೆಂಟ್ ಎರಡೂ ಸಂಸ್ಥೆಗಳೂ ಈ ಹಿಂದೆ 2021 ರಲ್ಲಿ ಅಹಮದಾಬಾದ್ ಮೂಲದ ಟೈಟಾನ್ಸ್‌ನ ಮಾಲೀಕತ್ವಕ್ಕಾಗಿ ಬಿಡ್ ಹಾಕಿದ್ದರು. ಅಂದು ಅದಾನಿಯು ಐಪಿಎಲ್ ತಂಡಕ್ಕಾಗಿ ₹5,100 ಕೋಟಿ (US$610 ಮಿಲಿಯನ್) ಮತ್ತು ಟೊರೆಂಟ್ ₹4,653 ಕೋಟಿ (US$556 ಮಿಲಿಯನ್) ಬಿಡ್ ಮಾಡಿತ್ತು. ಆದರೆ ಇವೆರಡನ್ನೂ ಮೀರಿಸಿ ಬಿಡ್ ಮಾಡಿದ್ದ ಸಿವಿಸಿ ಕ್ಯಾಪಿಟಲ್ಸ್ ಅಂದು ತಂಡ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಅಂದ ಹಾಗೆ 2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್ 2021 ರಲ್ಲಿ ಮಾಡಿದ ಬಿಡ್ ಹಣ ಬರೋಬ್ಬರಿ ₹5,625 ಕೋಟಿ (US$745 ಮಿಲಿಯನ್).
ಇದೀಗ ಸಿವಿಸಿ ಕ್ಯಾಪಿಟಲ್ಸ್ ತನ್ನ ಕ್ರಿಕೆಟ್ ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಹೆಚ್ಚಿನ ಪ್ರಮಾಣದ ಶೇರುಗಳನ್ನು ಮಾರಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸಹಭಾಗಿತ್ವ ಹೊಂದಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ನಲ್ಲಿ ಬಹುಪಾಲು ಶೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಗಳೂ ಸಿವಿಸಿ ಕ್ಯಾಪಿಟಲ್ ನೊಂದಿಗೆ ಮಾತುಕತೆ ನಡೆಸುತ್ತಿವೆ. 2021 ರಲ್ಲಿ ಫ್ರ್ಯಾಂಚೈಸಿ ಖರೀದಿಸಲು ಪ್ರಯತ್ನಿಸಿ ಸೋತಿದ್ದ ಅದಾನಿ ಮತ್ತು ಟೊರೆಂಟ್ ಗ್ರೂಪ್ ಇದೀಗ ಮತ್ತೆ ಉತ್ಸುಕವಾಗಿದೆ ಎನ್ನಲಾಗಿದೆ.
2021ರಲ್ಲಿ US$745 ಮಿಲಿಯನ್ ಗೆ ಖರೀದಿಯಾಗಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಪ್ರಸ್ತುತ ನಿವ್ವಳ ಮೌಲ್ಯವು $1 ಬಿಲಿಯನ್ ಮತ್ತು $1.5 ಬಿಲಿಯನ್ ನಡುವೆ ಇದೆ.
ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಗುಜರಾತ್ ಟೈಟಾನ್ಸ್ ಅದಾನಿ ಪಾಲಾಗುವ ಲಕ್ಷಣಗಳು ಹೆಚ್ಚಿದೆ. 2021ರಲ್ಲಿ ಐಪಿಎಲ್ ತಂಡ ಖರೀದಿ ಮಾಡಲು ವಿಫಲರಾದ ಅದಾನಿ ಬಳಿಕ ಕ್ರಿಕೆಟ್ ಲೋಕಕ್ಕೆ ಎಂಟ್ರಿ ನೀಡಿದ್ದರು. ಇಂಟರ್ನ್ಯಾಷನಲ್ ಲೀಗ್ T20 ನಲ್ಲಿ ಆಡುವ ಗಲ್ಫ್ ಜೈಂಟ್ಸ್ ತಂಡವನ್ನು ಹೊಂದಿರುವ ಅದಾನಿ ಸಂಸ್ಥೆ, ಕಳೆದ ವರ್ಷ ಪ್ರಾರಂಭವಾದ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಅಹಮದಾಬಾದ್ ಮೂಲದ ಫ್ರಾಂಚೈಸಿಗಾಗಿ ₹1,289 ಕೋಟಿ (US$158 ಮಿಲಿಯನ್) ಬಿಡ್ ಮಾಡಿ ಯಶಸ್ವಿಯಾಗಿತ್ತು.
ಕೋಚ್ ಆಗ್ತಾರಾ ಸಿಕ್ಸರ್ ಕಿಂಗ್
2007 ಟಿ20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಐಪಿಎಲ್ ತಂಡದ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಐಪಿಎಲ್ ನಲ್ಲಿ ಆಟಗಾರನಾಗಿ ಹಲವು ತಂಡಗಳನ್ನು ಪ್ರತಿನಿಧಿಸಿರುವ ಯುವಿ ಇದೀಗ ಗುಜರಾತ್ ಟೈಟಾನ್ಸ್ ಕೋಚ್ ಆಗುವ ಸಾಧ್ಯತೆಯಿದೆ.
ಕಳೆದ ಮೂರು ಸೀಸನ್ ನಲ್ಲಿ ಗುಜರಾತ್ ಕೋಚ್ ಆಗಿದ್ದ ಆಶಿಶ್ ನೆಹ್ರಾ ಮತ್ತು ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರೆ ಎನ್ನುತ್ತಿದೆ ವರದಿ. “ಬಹಳಷ್ಟು ಬದಲಾವಣೆಗಳು ನಡೆಯುತ್ತಿದೆ. ಆಶಿಶ್ ನೆಹ್ರಾ ಮತ್ತು ವಿಕ್ರಮ್ ಸೋಲಂಕಿ ಮುಂದುವರಿಯುವ ಸಾಧ್ಯತೆಯಿಲ್ಲ. ಯುವರಾಜ್ ಸಿಂಗ್ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಇದೀಗ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಆದರೆ ಗುಜರಾತ್ ಟೈಟಾನ್ಸ್ ನ ಕೋಚಿಂಗ್ ಸಿಬ್ಬಂದಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಬಹುದು” ಎಂದು ಮೂಲಗಳು ಹೇಳುತ್ತವೆ.
ಕೀರ್ತನ್ ಶೆಟ್ಟಿ ಬೋಳ