Advertisement
ಹೆಸರಿನಲ್ಲೊಂದು ಸ್ವಾರಸ್ಯವಿದೆ. ಅದು ಮೂಲದಿಂದ ತೊಡಗಿ ಹೇಗೆ ಪಯಣಿಸಿತು ಎಂಬುದನ್ನು ಅವಲೋಕಿಸುವುದೇ ಒಂದು ಚೆಂದ. ಹುಟ್ಟುವ ಮೊದಲೇ ಕೆಲವರು ಹೆಸರು ಇಡಬಹುದು. ಹುಟ್ಟಿದ ಬಳಿಕ ಸಾಮಾನ್ಯವಾಗಿ ಎಲ್ಲರ ಹೆಸರು ಪುಟ್ಟ/ಪುಟ್ಟಿ ಆಗಿರುತ್ತದೆ. ಮಗುವಾಗಿರುವಾಗ ಕರೆದದ್ದೇ ಹೆಸರು. ಬೇಕು, ಬೇಕಾದ ಹೆಸರು ಇಟ್ಟುಕೊಳ್ಳುವ ಸ್ವಾತಂತ್ರ್ಯವೂ ಇದೆ. ಕರೆದ ಹೆಸರೇ ಚೆಂದ. ಮುದ್ದು ಮಾಡಲು ಬೇಕಾಗಿ ಅನಿಸಿದ ಹೆಸರುಗಳನ್ನೆಲ್ಲ ಬಳಸಿ ಕರೆದರೂ ಅಸಂಗತವೆನ್ನಿಸುವುದಿಲ್ಲ. ಇಲ್ಲೆಲ್ಲ ಹೆಸರು ಗೌಣ, ಭಾವ ಮಾತ್ರ ಮುಖ್ಯ. ಹಾಗೆ ನೋಡಿದರೆ, ನಮಗೇಕೆ ಹೆಸರು? ಉತ್ತರ ಸರಳ : ಒಂದು ವ್ಯಕ್ತಿ ಆತನೇ ಎಂದು ಗುರುತಿಸಲು ಅದರ ಆವಶ್ಯಕತೆ ಇದೆ. ಚಿಕ್ಕವರಿದ್ದಾಗ ನಮಗೆಲ್ಲ ಮನೆಯ ಮುದ್ದಿನ ಹೆಸರುಗಳೆಂದರೆ ತುಂಬ ಅಭಿಮಾನ. ಬೆಳೆಯುತ್ತ ಅವೇ ಹೆಸರುಗಳು, ಬೇರೆಯವರ ಬಾಯಿಯಲ್ಲಿಯೂ ಕೇಳಿಸಿದರೆ ಮುಜುಗರ ತರುತ್ತವೆ. ಅಡ್ಡ ಹೆಸರುಗಳನ್ನು ಸ್ನೇಹವಲಯದಲ್ಲಿ ಮಾತ್ರ ಕರೆಯಿಸಿಕೊಳ್ಳಲು ಆಸೆ. ಉಳಿದ ಕಡೆಯಲ್ಲಿ ತನ್ನದೇ ವ್ಯಕ್ತಿತ್ವದ ಛಾಪು ಒತ್ತುವ ತನ್ನದಾದ “ರೆಕಾರ್ಡಿ’ನ ಹೆಸರೇ ಬೇಕು! ಆರಂಭದಲ್ಲಿ ಕೇವಲ ಗುರುತಿಸುವ ಉದ್ದೇಶಕ್ಕೆಂದು ಇಟ್ಟ ಹೆಸರು, ಮುಂದೆ ತನ್ನತನದ ಛಾಪು ಒತ್ತುವಲ್ಲಿವರೆಗೆ ಸಾಗುವುದು ಸುಲಭದ ಪಯಣವೇನಲ್ಲ. “ಹೆಸರು ಮಾಡು ಮಗು’, “ಅಪ್ಪ, ಅಮ್ಮನ ಹೆಸರು ಉಳಿಸು ಮಗು’ ಅನ್ನುವಲ್ಲೆಲ್ಲ ನಾವು, ತನ್ನತನದ ಛಾಪನ್ನು ಹೆಸರಿಗೆ ಗಂಟು ಹಾಕಿಯೇ ಮಾತಾಡಿರುತ್ತೇವೆ.
ಹೆಣ್ಣಿನ ಹೆಸರಿನ ಗೊಂದಲ
ಆದರೆ, ಈ ಹೆಸರು ಕೆಲವೊಮ್ಮೆ ಹೆಣ್ಣಿಗೆ ವಿನಾಕಾರಣ ಗೊಂದಲ ಉಂಟುಮಾಡುತ್ತದೆ. ಹೆಸರಿನ ಗೊಂದಲ ಹೆಣ್ಣಿಗೆ ಏಕೆಂದರೆ, ನಮ್ಮ ಸಮಾಜದಲ್ಲಿ ಆಕೆ ಇರಬೇಕಾದ್ದು ತಂದೆ ಇಲ್ಲವೆ ಗಂಡನ ನೆರಳಿನಲ್ಲಿ. ಕೆಲವೊಮ್ಮೆ ಸಮಾಜ ಸಂಪ್ರದಾಯಗಳು ಇನ್ನೂ ಮುಂದುವರಿದು, ಮದುವೆಯನ್ನು ಮರುಹುಟ್ಟಾಗಿಸುತ್ತದೆ. ಹಾಗೆ ಮಾಡಿದರೆ, ಅವಳ ಆವತ್ತಿನವರೆಗಿನ “ಅಸ್ತಿತ್ವವನ್ನೇ ಇಲ್ಲ’ವಾಗಿಸುವ ಪ್ರಯತ್ನ ಮಾಡಿದಂತಾಗುವುದಿಲ್ಲವೆ? ಹೀಗೆ ಮರುಜನ್ಮ ಪಡೆಯುವ ಅಗತ್ಯವಾದರೂ ಏನು? ಅಂತೂ ಹೆಣ್ಣು ಅಲ್ಲಿಯವರೆಗೆ ತನ್ನದಾಗಿಸಿಕೊಂಡಿದ್ದ ಹೆಸರಿಗೇ ಬಂತು ಸಂಚಕಾರ. ಕೆಲವರು, ಪೂರ್ಣ ಹೆಸರನ್ನೇ ಬದಲಾಯಿಸುವ ಪೂರ್ಣ ಅಸ್ತಿತ್ವವನ್ನೇ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಹೆಚ್ಚಿನವರಿಗೆ ಪೂರ್ಣ ಹೆಸರನ್ನು ಅಲ್ಲದಿದ್ದರೂ ಎರಡನೆಯ ಹೆಸರನ್ನಂತೂ ಬದಲಾವಣೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.
ಒಂದೊಮ್ಮೆ ಹಿಂತಿರುಗಿ ನೋಡಿದರೆ, ಹೆಸರಿಗೆ ಸಂಬಂಧಿಸಿದ ಸಂಗತಿಗಳು ಪುರಾಣಕಾಲದಲ್ಲಿಯೇ ಇದ್ದವು. ವಂಶದ ಹೆಸರು ಅದನ್ನು ಮುಂದುವರಿಸಬೇಕಾದ ಸಂಪ್ರದಾಯ ತ್ರೇತಾಯುಗದಲ್ಲಿ ಗಂಡಿಗೆ ಮೀಸಲಾಗಿತ್ತು. ದ್ವಾಪರಯುಗದ ಬೆಳವಣಿಗೆ ಕುತೂಹಲಕಾರಿಯಾಗಿದೆ. ಒಂದು ಜನಾಂಗ ಅಥವಾ ರಾಜ್ಯದ ಹೆಸರಿನ ಮೂಲಕ ಗುರುತಿಸಿಕೊಳ್ಳುವಿಕೆ ಇತ್ತು. ಉದಾಹರಣೆಗೆ, ಕುಂತಲ ದೇಶದ ರಾಜಕುಮಾರಿ ಪೃಥೆ, ಕುಂತಿಯಾದಂತೆ, ಗಾಂಧಾರದ ರಾಜಕುಮಾರಿ ಗಾಂಧಾರಿಯಾದಳು. ಅದೇ ಯುಗದ ಮುಂದಿನ ಜನಾಂಗ ತಂದೆಯ ಹೆಸರನ್ನೇ ಮಗಳಲ್ಲಿ ಕಾಣಲಾರಂಭಿಸಿತ್ತು. ದ್ರುಪದನ ಮಗಳು ದ್ರೌಪದಿಯಾಗಲಿಲ್ಲವೆ?
ಹುಟ್ಟಿದಾಗಲೇ ಆಕೆಯ ಮೇಲೆ ತನ್ನ ವ್ಯಕ್ತಿತ್ವದ ಛಾಪನ್ನು ತಂದೆ ಸ್ಥಾಪಿಸಿ ಬಿಡುತ್ತಾನೆ. ಹಾಗಾಗಿಯೇ ಮದುವೆಯಾಗುವವನು ತನ್ನ ಪತ್ನಿಯ ಮೇಲಿರುವ ಬೇರೊಬ್ಬ ವ್ಯಕ್ತಿಯ ಛಾಪನ್ನ ಬದಲಿಸಿ ತನ್ನದು ಮಾಡಿಕೊಳ್ಳುತ್ತಾನೆ! ವ್ಯಕ್ತಿತ್ವದ ಛಾಪು ಹೆಸರಿನ ಮೊಹರಿಗಿಂತ ಹೆಚ್ಚು ಬೆಲೆಯುಳ್ಳದ್ದಲ್ಲವೆ? ಮಕ್ಕಳ ವ್ಯಕ್ತಿತ್ವದಲ್ಲಿ ತಮ್ಮತನ, ತಮ್ಮ ಉತ್ತಮ ಧ್ಯೇಯಗಳನ್ನು ಅಚ್ಚುಕಟ್ಟಾಗಿ ಬೆಳೆಸಿ, ಅವರ ಹೆಸರಿನಲ್ಲಿ ಯಾರ ಛಾಪೂ ಮೂಡಿಸದೆ, ಅವರನ್ನು ಅವರನ್ನಾಗಿ ಬೆಳೆಸಿದರೆ ಈ ಹೆಸರು ಬದಲಾವಣೆಯ ಗೊಂದಲ ನಿಂತು, ಪ್ರತಿಯೊಬ್ಬರ ಹೆಸರು ಕೇವಲ ಅವರವರದೇ ಆಗಿ ಉಳಿಯಬಹುದೇನೋ!
Related Articles
Advertisement
ರಶ್ಮಿ ಕುಂದಾಪುರ