ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿಕೊಳ್ಳಲು ಸೂಚನೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ:
2023ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ ಬಿ.ಎನ್.ಬಚ್ಚೇಗೌಡ
ಚುನಾವಣಾ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವವರಿಗೆ ಮುಖಕ್ಕೆ ಮಾಸ್ಕ್ ಯಾಕೆ ಮುಖ್ಯವಲ್ಲ, ಈ ಬಗ್ಗೆ ಉತ್ತರ ನೀಡುವಂತೆ ಸೂಚಿಸಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ಜಸ್ಟೀಸ್ ಜಸ್ಮೀತ್ ಸಿಂಗ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ಹೇಳಿದೆ.
ಕೋವಿಡ್ ಸೋಂಕು ತಡೆಗಟ್ಟಲು ಆಯೋಗ ಬಿಡುಗಡೆಗೊಳಿಸಿದ್ದ ಮಾರ್ಗಸೂಚಿಯನ್ನು ವಿಧಾನಸಭಾ ಚುನಾವಣೆಯ ಪ್ರಚಾರ ಸಭೆ, ಸಮಾರಂಭಗಳಲ್ಲಿ ಉಲ್ಲಂಘಿಸಿದ್ದಾರೆ. ಈ ಕುರಿತು ಸಲ್ಲಿಸಲಾಗಿರುವ ಇತರ ಮೇಲ್ಮನವಿಗಳನ್ನು ಏಪ್ರಿಲ್ 30ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಪೀಠ ತಿಳಿಸಿದೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಚುನಾವಣಾ ಆಯೋಗ ಡಿಜಿಟಲ್, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅರಿವು ಮೂಡಿಸಬೇಕು ಎಂದು ಸಿಂಗ್ ಪರ ವಕೀಲರಾದ ವಿರಾಗ್ ಗುಪ್ತಾ ಹೈಕೋರ್ಟ್ ಪೀಠದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಮಾರ್ಗಸೂಚಿ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವವರಿಗೆ ಈ ಆದೇಶ ಯಾಕೆ ಅನ್ವಯವಾಗುವುದಿಲ್ಲ ಎಂದು ಗುಪ್ತ ಪೀಠ ಮುಂದೆ ವಾದ ಮಂಡಿಸಿರುವುದಾಗಿ ವರದಿ ತಿಳಿಸಿದೆ.