ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿರುವ ಬಿಳಿಗಡ್ಡ ಅವರ ವ್ಯಕ್ತಿತ್ವಕ್ಕೊಂದು ವಿಶೇಷವಾಗಿರುವ ಘನತೆಯನ್ನು ತಂದುಕೊಟ್ಟಿದೆ. ಇದಕ್ಕೆ ಹೊರತಾಗಿ ಮೋದಿ ಅವರ ಮುಖವನ್ನು ಆಸ್ಥೆಯಿಂದ ಗಮನಿಸಿರುವವರಿಗೆ ಅವರ ಮುಖದಲ್ಲೊಂದು ಹೊಳಪಿರುವುದು ಕಾಣಿಸುತ್ತದೆ. ಈ ಪ್ರಶ್ನೆ ಕೆಲವು ಚಿಣ್ಣರನ್ನೂ ಸಹ ಕಾಡಿದೆ ಮತ್ತು ಅವರು ತಮ್ಮ ಮನಸ್ಸಿನಲ್ಲಿ ಕೊರೆಯುತ್ತಿದ್ದ ಈ ಪ್ರಶ್ನೆಗೆ ಉತ್ತರವನ್ನು ಸ್ವತಃ ಪ್ರಧಾನಿಯವರಲ್ಲೇ ಕೇಳಿದ್ದಾರೆ.
ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತ ಮಕ್ಕಳೊಂದಿಗೆ ಇಂದು ಪ್ರಧಾನಿಯವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಗೊಂಡಿದೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಪ್ರಧಾನಿ ಮೋದಿ ಅವರು ತಮ್ಮ ಮುಖದಲ್ಲಿನ ಹೊಳಪಿನ ಕುರಿತಾಗಿ ಮಕ್ಕಳಿಗೆ ಉತ್ತರಿಸಿದ್ದು ಹೀಗೆ,
‘ನಿಮ್ಮ ಹೊಳೆಯುವ ಮುಖದ ರಹಸ್ಯ ಏನು ಎಂಬುದಾಗಿ ಹಲವು ವರ್ಷಗಳ ಹಿಂದೆ ನನ್ನನ್ನು ಒಬ್ಬರು ಕೇಳಿದ್ದರು. ಅವರಿಗೆ ನಾನು ಕೊಟ್ಟ ಉತ್ತರ ತುಂಬಾ ಸರಳವಾಗಿತ್ತು, ನಾನು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತೇನೆ ಮತ್ತು ಈ ರೀತಿ ಶ್ರಮಪಟ್ಟು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮುಖದಲ್ಲಿ ಕಾಣಿಸಿಕೊಳ್ಳುವ ಬೆವರಿನ ಹನಿಗಳನ್ನು ನಾನು ಒರೆಸಿಕೊಳ್ಳುತ್ತಿರುತ್ತೇನೆ, ಈ ರೀತಿ ನನ್ನ ಮುಖದಲ್ಲಿ ಮೂಡುವ ಬೆವರ ಹನಿಗಳಿಂದಲೇ ನನ್ನ ಮುಖಕ್ಕೆ ವಿಶೇಷವಾಗಿರುವ ಕಾಂತಿ ಬಂದಿದೆ ಎಂದು ನಾನು ಅವರಿಗೆ ಉತ್ತರಿಸಿದೆ’ ಎಂದು ಪ್ರಧಾನಿ ಮೋದಿ ಅವರು ತಮ್ಮ ಹೊಳೆಯುವ ಮುಖದ ರಹಸ್ಯವನ್ನು ಬಾಲ ಪುರಸ್ಕಾರ ವಿಜೇತ ಮಕ್ಕಳ ಮುಂದೆ ಹೇಳಿಕೊಂಡಿರುವುದನ್ನು ಎನ್.ಡಿ.ಟಿ.ವಿ. ವರದಿ ಮಾಡಿದೆ.
ನೀವು ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಪಡಿ ಮತ್ತು ಚೆನ್ನಾಗಿ ಬೆವರು ಹರಿಸಿ ಎಂಬ ಸಲಹೆಯನ್ನೂ ಸಹ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದ್ದಾರೆ. ದಿನದಲ್ಲಿ ಕನಿಷ್ಟ ನಾಲ್ಕು ಸಲವಾದರೂ ನಮ್ಮ ಮೈ ಬೆವರಬೆಕು ಎಂಬ ಸಲಹೆಯನ್ನೂ ಸಹ ಪ್ರಧಾನಿಯವರು ಚಿಣ್ಣರಿಗೆ ನೀಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದುಕೊಂಡಿರುವ ಮಕ್ಕಳ ಸಾಧನೆಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿಯವರು ಪ್ರಶಂಸಿದ್ದಾರೆ. ಮತ್ತು ಇಂತಹ ಸಾಧಕ ಮಕ್ಕಳಿಂದಲೇ ನಾನು ಸ್ಪೂರ್ತಿ ಹಾಗೂ ಶಕ್ತಿಯನ್ನು ಪಡೆದುಕೊಳ್ಳುತ್ತೇನೆ ಎಂಬ ವಿಚಾರವನ್ನೂ ಸಹ ನಮೋ ಹೇಳಿಕೊಂಡಿದ್ದಾರೆ.
Related Articles
‘ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಳೊಂದಿಗೆ ಸಂವಾದ ನಡೆಸಿರುವುದು ನನಗೆ ತುಂಬಾ ಖುಷಿ ನೀಡಿದೆ. ವಿವಿಧ ವಿಷಯಗಳ ಕುರಿತಾಗಿ ಅವರೊಂದಿಗೆ ಚರ್ಚಿಸಿದೆ ಮತ್ತು ಇವರೆಲ್ಲರೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.’ ಎಂದು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.