Advertisement

ಬದುಕಿಗೆ ವಿವೇಚನೆ ಏಕೆ ಬೇಕು?

07:14 PM Jul 26, 2019 | mahesh |

ನಾವು ಭಗವಂತನ ಅನುಗ್ರಹವನ್ನು ಸಂಪಾದಿಸಬೇಕೆಂದರೆ, ಅವನನ್ನು ಸಂತೋಷಪಡಿಸಬೇಕೆಂದಿದ್ದರೆ, ಅವನು ವಿಧಿಸಿರುವ ಧರ್ಮವನ್ನು ಪಾಲಿಸಬೇಕು. ಭಗವಂತ ನಮಗೆ ವಿವೇಚನಾ ಶಕ್ತಿಯನ್ನು ಕೊಟ್ಟಿದ್ದಾನೆ. ಇದನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ, ತಪ್ಪು ನಮ್ಮದಾಗುತ್ತದೆ. ಪ್ರಾಚೀನ ಋಷಿಗಳು ಇದನ್ನು ಹೀಗೆ ಉದಾಹರಣೆಯಿಂದ ವಿಶದೀಕರಿಸಿದ್ದಾರೆ…

Advertisement

ತಂದೆಯೊಬ್ಬ, “ಯುದ್ಧ ಬಂದರೆ ಇದನ್ನು ಉಪಯೋಗಿಸು’ ಎಂದು, ಮಗನಿಗೊಂದು ಕತ್ತಿಯನ್ನು ಕೊಟ್ಟನು. ಆ ಯುವಕ, ಕತ್ತಿಯನ್ನು ಕೊಟ್ಟ ಕೆಲಸಕ್ಕೆ ಬಳಸದೆ, ಅದರಿಂದ ತನ್ನ ತಲೆ ಕತ್ತರಿಸಿಕೊಂಡ. ಅದು ಯಾರ ತಪ್ಪು? ತಂದೆಯಧ್ದೋ, ಮಗನಧ್ದೋ? ಮಗನದ್ದೇ ತಪ್ಪು! ಆತ ಆ ಕತ್ತಿಯನ್ನು ಸರಿಯಾದ ಉದ್ದೇಶಕ್ಕಾಗಿ ಬಳಸಲಿಲ್ಲ. ಅದನ್ನು ಅನರ್ಥ ಕೆಲಸಕ್ಕೆ ಬಳಸಿ, ತನಗೇ ನಾಶ ತಂದುಕೊಂಡ. ಇದು ವಿವೇಕವಿಲ್ಲದವರು ಮಾಡುವ ಕೆಲಸ.

ಧರ್ಮವನ್ನು ಅನುಸರಿಸಬೇಕಾದ ನಾವು, ನಮಗಿರುವ ವಿವೇಚನಾ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದೆ, ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲೂ ಯತ್ನಿಸದೇ ಹೋದರೆ, ನಮಗೆ ಏನಾದರೂ ಕಷ್ಟ ಬಂದರೆ, ಅದು ಯಾರ ತಪ್ಪು? ಧರ್ಮ ಮಾರ್ಗವನ್ನು ಅನುಸರಿಸುವ ಬದಲು, ನಮ್ಮನ್ನು ಯಾರೂ ನೋಡುವುದಿಲ್ಲವೆಂಬ ಬ್ರಾಂತಿಯಿಂದ ಜೀವಿಸಿರುವಷ್ಟು ಕಾಲ ಸುಖವಾಗಿ ಜೀವಿಸು. “ಸಾಲ ಮಾಡಿಯಾದರೂ ತುಪ್ಪವನ್ನು ತಿಂದು ಬಾಳು’ ಅನ್ನುವ ಪದ್ಧತಿಯನ್ನು ಅನುಸರಿಸುತ್ತಾ, ನಮಗೆ ನಾವೇ ಎಷ್ಟೋ ಕಷ್ಟಗಳನ್ನು ತಂದುಕೊಂಡರೆ, ಇದಕ್ಕೆ ನಮ್ಮನ್ನು ಬಿಟ್ಟರೆ ಬೇರ್ಯಾರು ಹೊಣೆಯಾಗುತ್ತಾರೆ?

ನಮ್ಮ ವಿವೇಚನಾ ಶಕ್ತಿಯನ್ನು ಧರ್ಮಾಚರಣೆಗೆ ವಿನಿಯೋಗಿಸಬೇಕು. ಹಿರಿಯರು ಈ ಧರ್ಮವನ್ನು ನಮ್ಮ ಒಳಿತಿಗಾಗಿ ಹೇಳಿದ್ದಾರೆ. ಅವರು ಉಪದೇಶಿಸಿದಂತೆ ಮಾಡಬೇಕು. ಯಾರ ನಿರ್ಣಯವು ಪಕ್ಷಪಾತದಿಂದ ಆದುದಲ್ಲವೋ, ಯಾರು ಧರ್ಮಕಾಮರೋ, ಯಾರು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಸರಿಯಾಗಿ ನಿರ್ಣಯಿಸಬಲ್ಲರೋ- ಅಂಥ ಹಿರಿಯರ ಉಪದೇಶವನ್ನು ಅನುಸರಿಸಬೇಕು. ಈ ವಿಷಯವನ್ನು ಉಪನಿಷತ್ತುಗಳು ಹೇಳುತ್ತವೆ. ಅಂಥ ಮಾರ್ಗವನ್ನು ಅನುಸರಿಸಿದರೆ ಶ್ರೇಯಸ್ಸು ದಕ್ಕುತ್ತದೆ.

ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ಶಾರದಾಪೀಠಂ, ಶೃಂಗೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next