ವಿಮಾನ ನಿಲ್ದಾಣ ಗಿಜಿಗುಡುತ್ತಿತ್ತು. ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಿದ್ದ ಕಾರುಗಳೆಲ್ಲ ಒತ್ತೂತ್ತಾಗಿ ಸಿಕ್ಕಿಬಿದ್ದಿದ್ದವು. ತಾವು ಮುಂಗಡ ಕಾಯ್ದಿರಿಸಿದ್ದ ಕಾರುಗಳು ಬರುತ್ತಲೇ ಪ್ರಯಾಣಿಕರು ಜೋರು ಬಾಯಿ ಮಾಡುತ್ತಾ, ಡ್ರೈವರ್‌ಗಳ ಬಳಿ ಬೇಗ ಲಗ್ಗೇಜನ್ನು ಡಿಕ್ಕಿಯಲ್ಲಿ ಹಾಕುವಂತೆ ಆದೇಶಿಸುತ್ತಿದ್ದರು. ಅಂಥ ಪ್ರಯಾಣಿಕರ ಮಧ್ಯದಲ್ಲಿ ಎತ್ತರದ ವ್ಯಕ್ತಿಯೊಬ್ಬರು ತಮ್ಮ ಲಗ್ಗೇಜು, ಬ್ಯಾಗುಗಳನ್ನು ಹಿಡಿದು ತಾನೂ ಮುಂಗಡ ಕಾಯ್ದಿರಿಸಿದ ಕಾರಿಗಾಗಿ ಕಾಯುತ್ತಿದ್ದರು. ಅವರನ್ನು ದೂರದಿಂದಲೇ ನೋಡಿದ್ದ ಕಾರು ಚಾಲಕ ತನ್ನ ಕಾರನ್ನು ಅವರ ಮುಂದೆ ನಿಲ್ಲಿಸುತ್ತಲೇ ಗಡಿಬಿಡಿಯಿಂದ ಓಡಿ ಬಂದು, “ಕ್ಷಮಿಸಿ ಸಾರ್… ಜ್ಯಾಮ್ ಆಗಿದ್ದುದರಿಂದ ತಡ ಆಯ್ತು. ಬನ್ನಿ, ಹೀಗೆ ಬನ್ನಿ’ ಎಂದು ತಡಬಡಾಯಿಸುತ್ತ ಅವರ ಲಗ್ಗೇಜ್ ಎತ್ತಿಕೊಳ್ಳಲು ಕೈ ಹಾಕಿದ. ಆಗ ಆ ವ್ಯಕ್ತಿ, “ನಿಮಗೆ ನಾನು ದುಡ್ಡು ಕೊಡುತ್ತಿರುವುದು ನನ್ನನ್ನು ಕಾರಿನಲ್ಲಿ ಮನೆ ತಲುಪಿಸುವುದಕ್ಕಾಗಿ. ನೀವ್ಯಾಕೆ ನನ್ನ ಲಗ್ಗೇಜ್ ಎತ್ತಿಕೊಳ್ಳುತ್ತೀರಿ?’ ಎಂದು ಹೇಳಿ ತಾನೇ ಲಗ್ಗೇಜನ್ನು ಕಾರಿನೊಳಗೆ ಹಾಕಿದರು.
ಸಣ್ಣ ಘಟನೆಯಲ್ಲಿ ಹಾಗೆ ದೊಡ್ಡ ಪಾಠ ಕಲಿಸಿದ ವ್ಯಕ್ತಿ ಟಾಟಾ ಸಂಸ್ಥೆಗಳ ಮಾಲೀಕ ರತನ್ ಟಾಟಾ.
– ರೋಹಿತ್ ಚಕ್ರತೀರ್ಥ