ಹೆಣ್ಣು ಅಲಂಕಾರಕ್ಕೆಂದು ಕನ್ನಡಿ ಮುಂದೆ ನಿಂತಾಗ ನೂರಾರು ಸಲ ಕಣ್ಣು ಪಿಳಿಗುಟ್ಟಿಸುತ್ತಾಳೆ. ಪ್ರತಿಸಲ ಪಿಳಿ ಪಿಳಿ ಮುಗಿದ ಮೇಲೂ ತನ್ನ ಅಂದಚೆಂದ ಮತ್ತಷ್ಟು ಇಮ್ಮಡಿ ಆಯಿತೇ ಎಂಬ ಪುಟ್ಟ ಆಸೆಯೊಂದು ಆಕೆಯೊಳಗೆ ಪುಟಿಯುತ್ತಲೇ ಇರುತ್ತೆ. ಆದರೆ, ಮಸ್ಕರಾ ಅಥವಾ ಕಾಜಲ್ ಹಚ್ಚಿಕೊಳ್ಳುವಾಗ ಆಕೆ ಯಾವತ್ತೂ ಕಣ್ಣು ಪಿಳಿಗುಟ್ಟಿಸುವುದೇ ಇಲ್ಲ; ತೆರೆದ ಬಾಯಿಯನ್ನೂ ಆಕೆ ಮುಚ್ಚುವುದಿಲ್ಲ.
ಅಲ್ವಾ? ಈ ಅನುಭವ ನಿಮಗೂ ಆಗಿರುತ್ತೆ. ಕಾಡಿಗೆ ಹಚ್ಚುವಾಗ ಕಣ್ಮುಚ್ಚಿ ಬಿಟ್ಟರೆ, ಅಲಂಕಾರದ ಕತೆ ಮುಗಿದಂತೆ. ಕಣ್ಣೊಳಗೆ ಕಾಡಿಗೆ ಸೇರಿಬಿಡುತ್ತೆ ಅನ್ನೋ šಭಯ ಇರುವ ಕಾರಣದಿಂದಲೂ ರೆಪ್ಪೆಗಳನ್ನು ಮುಚ್ಚಲು ಹೋಗುವುದಿಲ್ಲ. ರೆಪ್ಪೆಗಳಿಗೆ ಕಾಡಿಗೆ ಚೆನ್ನಾಗಿ ಅಂಟಿಕೊಳ್ಳಲಿಯೆಂಬ ಕಾಳಜಿಯೂ ಅದರ ಹಿಂದೆ ಇದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ, ಈ ಅಲಂಕಾರಕ್ಕೆ ವಿಜ್ಞಾನದ ಒಂದು ವ್ಯಾಖ್ಯಾನವೂ ಜತೆಯಾಗುತ್ತದೆ ಎಂಬುದು ನಿಮಗೆ ಗೊತ್ತೇ?
ಸಾಮಾನ್ಯವಾಗಿ ನಾವು ಬಾಯಿ ಮುಚ್ಚುವುದು, ತೆರೆಯುವ ಪ್ರಕ್ರಿಯೆಗೆ “ಲ್ಯಾಟೆರಲ್ ಟೆರಿಗಾಯ್ಡ’ ಎಂದು ಹೆಸರು. ಇದನ್ನು ನಿಯಂತ್ರಿಸುವ ನರವ್ಯೂಹವೇ “ಟ್ರಿಗೆಮಿನಲ್’. ಪಂಚೇಂದ್ರಿಯಗಳಿಗೆ ಸಂವೇದನೆಯನ್ನು ತುಂಬುವ ನರವ್ಯೂಹವಿದು. ಕೈತುತ್ತು ಬಾಯಿ ಬಳಿ ಬಂದಾಗ, ಬಾಯಿ ತೆರೆಯುವ ಕ್ರಿಯೆ, ಯಾವುದಾದರೂ ವಸ್ತು ಕಣ್ಣಿಗೆ ಅಪಾಯ ತಂದೊಡ್ಡುವಾಗ, ತಕ್ಷಣ ಕಣ್ಮುಚ್ಚುವ ಕ್ರಿಯೆ… ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ “ಟ್ರಿಗೆಮಿನಲ್ ನರವ್ಯೂಹ’ ಎಚ್ಚರ ವಹಿಸುವ ಕೆಲಸ ಮಾಡುತ್ತದೆ. ಈ ಟ್ರಿಗೆಮಿನಲ್ ನರವ್ಯೂಹಕ್ಕೆ ಹೊಂದಿಕೊಂಡಂತೆ ಇರುವುದು ಅಕ್ಯುಲೋಮೊಟರ್ ಎಂಬ ನರಕೋಶ. ಇದು ಕಣ್ಣಿನ ರೆಪ್ಪೆಗಳ ಬಳಿಯಿಂದ ಹಾದು ಹೋಗಿ, ಮೆದುಳಿನ ಕೋಶಗಳನ್ನು ತಲುಪುವಂಥ ನರ.
ನಾವು ಕಾಡಿಗೆ ಹಚ್ಚಿಕೊಳ್ಳುವಾಗ ರೆಪ್ಪೆ ಮೇಲೆ ಬೆರಳಿಡುತ್ತೇವೆ. ಆಗ ಅಕ್ಯುಲೋಮೊಟರ್ ನರದ ಮೇಲೆ ಒತ್ತಡ ಬೀಳುತ್ತೆ. ಅದರ ಸಂವೇದನೆಗಳು ಟ್ರಿಗೆಮಿನಲ್ ನರವ್ಯೂಹವನ್ನು ಎಚ್ಚರಿಸುತ್ತದೆ. ಆಗ ತನ್ನಿಂತಾನೇ ಬಾಯಿಯನ್ನೂ ನಾವು ತೆರೆಯುತ್ತೇವೆ. ಕಣ್ಣಿನ ನರವ್ಯವಸ್ಥೆಯನ್ನು ವಿಸ್ತರಿಸುವ ಕಾರಣದಿಂದ, ರೆಪ್ಪೆಗಳನ್ನೂ ನಮ್ಮಿಂದ ಮುಚ್ಚಲು ಸಾಧ್ಯವಾಗುವುದಿಲ್ಲ.