Advertisement
ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು. ಹಿಮ ಅವುಗಳ ಅಸ್ತಿತ್ವಕ್ಕೆ ಬೇಕೇ ಬೇಕು. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉತ್ತರಧೃವದಲ್ಲಿನ ಹಿಮ ಕರಗುತ್ತಾ ಇರುವುದು ಈಗಾಗಲೇ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಹಿಮ ಕರಗುವುದರಿಂದ ಪ್ರಕೃತಿಯಲ್ಲಿನ ಸಮತೋಲನ ಏರುಪೇರಾಗಿ ವಿಕೋಪಗಳು ಜರುಗುವವು. ಅದಕ್ಕಿಂತ ಹೆಚ್ಚಾಗಿ ಹಿಮಕರಡಿಗಳಿಗೆ ನೆಲೆಯೇ ಇಲ್ಲವಾಗುವುದು. ಹಿಮ ಇಲ್ಲದೇ ಹೋದರೆ ಅವುಗಳು ಭೂಮಿಯಿಂದಲೇ ನಿರ್ನಾಮವಾಗುವವು. ಹಿಮ ಕರಡಿ ಹಿಮವನ್ನು ಹೇಗೆ ಅವಲಂಬಿಸಿವೆ ಎಂಬುದನ್ನು ತಿಳಿಯೋಣ.
ಅವುಗಳ ಕಾಲುಗಳು ಹಿಮದ ಮೇಲೆ ನಡೆದಾಡಲು ಹೇಳಿಮಾಡಿಸಿದಂತಿವೆ. ಅವುಗಳ ಪಾದ ಸುಮಾರು ಒಂದು ಅಡಿಯಷ್ಟು ಅಗಲವಾಗಿದ್ದು, ಏನಿಲ್ಲವೆಂದರೂ 2 ಇಂಚುಗಳಷ್ಟು ಉದ್ದದ ಉಗುರನ್ನು ಹೊಂದಿವೆ. ಹಿಮದಲ್ಲಿ ಪಾದವನ್ನು ಭದ್ರವಾಗಿ ಊರಲು ಉಗುರು ಸಹಕರಿಸುತ್ತವೆ. ನೀರಿನಲ್ಲಿ ಈಜುವುದಕ್ಕಿಂತ ಹಿಮದ ಮೇಲೆ ನಡೆದಾಡುವುದೇ ಅವುಗಳಿಗೆ ಸುಲಭ. ಈಜಲು ತುಂಬಾ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ ಅವು ಅಗತ್ಯ ಬಿದ್ದಾಗಲಷ್ಟೇ ನೀರಿಗೆ ಇಳಿಯುತ್ತವೆ. ಅದಕ್ಕಿಂತ ಹೆಚ್ಚಾಗಿ ನಡೆದಾಡುವ ಪ್ರಕ್ರಿಯೆಯಿಂದ ಅವುಗಳ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇಂಥ ಅನೇಕ ಕಾರಣಗಳಿಂದ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ಹಿಮ ಅಗತ್ಯವಾಗಿ ಬೇಕು. ನಿದ್ರಿಸಲು
ಹಿಮಕರಡಿಗಳು ಹಿಮದಲ್ಲಿ ಗುಂಡಿ ತೋಡಿ ಅದರಲ್ಲಿ ನಿದ್ರಿಸುತ್ತವೆ. ನಿದ್ರಿಸುವ ಮುನ್ನ ತಮ್ಮ ಮುಂಗಾಲುಗಳನ್ನು ತಲೆದಿಂಬಿನಂತೆ ಬಳಸಿಕೊಳ್ಳುತ್ತವೆ. ಮುಂಗಾಲುಗಳ ಮೇಲೆ ಮುಖವಿಟ್ಟು ಬೆಚ್ಚಗೆ ಮಲಗುತ್ತದೆ. ಅವುಗಳ ದೇಹ ಅತೀವ ಶಾಖವನ್ನು ಉತ್ಪಾದಿಸುತ್ತಲೇ ಇರುತ್ತದೆ. ಬೇಸಗೆಯ ದಿನಗಳಲ್ಲಿ ದೇಹದ ಉಷ್ಣಾಂಶವನ್ನು ಕಳೆದುಕೊಳ್ಳಲು ಹಿಮದ ಮೇಲೆ ಮಲಗುವುದನ್ನು ನೋಡಬಹುದು. ಇದರಿಂದ ದೇಹ ತಂಪಾಗುತ್ತದೆ. ಅಂದರೆ ಹಿಮಕರಡಿಗಳ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು, ತಮಗೆ ಬೇಕಾದ ಹಾಗೆ ನಿಯಂತ್ರಿಸಲು ಹಿಮ ಮುಖ್ಯ ಪಾತ್ರ ವಹಿಸುತ್ತದೆ.
Related Articles
ಹಿಮಕರಡಿಗಳ ದೇಹ ಗಾತ್ರ ಅಗಾಧವಾದುದು ಎಂಬುದು ನಿಮಗೆ ಗೊತ್ತಿರುತ್ತದೆ. ಅದರಿಂದಾಗಿ ಬಹಳ ವೇಗವಾಗಿ ಚಲಿಸಿ ತಮ್ಮ ಆಹಾರವನ್ನು ಬೇಟೆಯಾಡುವುದು ಅವುಗಳಿಗೆ ಕಷ್ಟದ ಕೆಲಸ. ಅದರಲ್ಲೂ ಸಮುದ್ದಕ್ಕಿಳಿದು ಈಜುತ್ತಾ ಬೇಟೆಯಾಡುವುದು ತುಂಬಾ ತ್ರಾಸದಾಯಕ ಕೆಲಸ ಮತ್ತು ಬೇಟೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಿ ಅವುಗಳು ಒಂದು ಸುಲಭ ವಿಧಾನವನ್ನು ಹುಡುಕಿವೆ. ಅವುಗಳ ಮುಖ್ಯ ಆಹಾರ ಸೀಲ್‌ಗಳು. ಅವು ನೀರಿನ ಮೇಲೆ ತೇಲುವ ಹಿಮದ ಹಾಳೆಯನ್ನು ಬೇಧಿಸಿಕೊಂಡು ಬರುತ್ತವೆ. ಅವು ಮೇಲಕ್ಕೆ ಬರುವುದನ್ನೇ ಹಿಮಕರಡಿಗಳು ಹೊಂಚು ಹಾಕಿ ಕಾಯುತ್ತವೆ. ತಲೆಯೆತ್ತಿ ಮೇಲಕ್ಕೆ ಬರುತ್ತಿದ್ದಂತೆ ಹಿಮಕರಡಿಗಳು ಬೇಟೆಯಾಡುತ್ತವೆ.
Advertisement
ಸಂತಾನೋತ್ಪತ್ತಿಹಿಮಕರಡಿಗಳು ತಮ್ಮ ಜೀವನದ ಹೆಚ್ಚಿನ ಪಾಲನ್ನು ಒಬ್ಬಂಟಿಯಾಗಿ ಕಳೆಯುವವು. ಸಂತಾನೋತ್ಪತ್ತಿ ಸಂದರ್ಭದಲ್ಲಿ ಗಂಡು ಹಿಮಕರಡಿಗಳು ಹೆಣ್ಣನ್ನು ಅರಸುತ್ತಾ ಹೋಗುತ್ತವೆ. ವಾಸನೆಯನ್ನು ಗ್ರಹಿಸುವ ಮೂಲಕ ಹೆಣ್ಣು ಹಿಮಕರಡಿಗಳಿಗಾಗಿ ತುಂಬಾ ದೂರವನ್ನು ಕ್ರಮಿಸುತ್ತವೆ. ಈಗೀಗ ತಾಪಮಾನ ಏರಿಕೆಯಿಂದಾಗಿ ಹಿಮಗಳು ಬಿರುಕು ಬಿಡುತ್ತಿರುವುದರಿಂದ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸುವುದೇ ದುಸ್ತರವಾಗಿಬಿಟ್ಟಿದೆ. ಇದರಿಂದಾಗಿ ಹಿಮಕರಡಿಗಳು ಒಂದನ್ನೊಂದು ಸಂಧಿಸುವುದೇ ಕಷ್ಟವಾಗುವ ಪರಿಸ್ಥಿತಿ ಬಂದಿದೆ.