Advertisement
ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಹೆಸರಿನಲ್ಲಿ ಬಿಟ್ಟಿರುವ 40 ಎತ್ತುಗಳಿಗೆ ಈಗ ನೀರು ಹಾಗೂ ಮೇವಿನ ಅಭಾವ ಉಂಟಾಗಿದೆ. ದೇವರ ಎಲ್ಲಾ ಎತ್ತುಗಳು ಎರಡು ಹೊತ್ತು ಮೇವು ಸಿಗದೆ ನಿತ್ರಾಣಗೊಂಡಿದ್ದು, ಸಾಯುವ ಸ್ಥಿತಿ ತಲುಪಿವೆ.
Related Articles
Advertisement
40 ಜಾನುವಾರುಗಳನ್ನು ರಕ್ಷಿಸಲು ಕಾಡುಗೊಲ್ಲ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೇವು ಒದಗಿಸುವಂತೆ ಮನವಿ ಮಾಡಿದ್ದೇವು. ಆದರೆ, ಇದುವರೆಗೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ದೇವರ ಎತ್ತುಗಳ ಸಂರಕ್ಷಿಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಈಚೆಗೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬೋಸೇದೇವರಹಟ್ಟಿ, ಕುರುಡಿಹಳ್ಳಿ ಲಂಬಾಣಿಹಟ್ಟಿಯಲ್ಲಿನ ದೇವರ ಎತ್ತುಗಳಿಗೆ ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಮೂಲಕ ಮೇವು ಪೂರೈಸಿದ್ದು, ನಮ್ಮ ದೇವರ ಎತ್ತುಗಳಿಗೂ ಸಹ ಸ್ವಾಮೀಜಿ ಇನ್ಫೋಸಿಸ್ ಫೌಂಡೇಷನ್ ಮೂಲಕ ಉಚಿತವಾಗಿ ಮೇವು ಸರಬರಾಜು ಮಾಡಿ ಜಾನುವಾರುಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಭಾಗದಲ್ಲಿ ಉತ್ತಮ ಮಳೆಯಾಗದ ಕಾರಣ ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರವೇ ನಮಗೆ ಉಚಿತವಾಗಿ ಮೇವು ವಿತರಿಸಬೇಕು. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಾಮರ್ಶಿಸಿ ಉಚಿತ ಮೇವನ್ನು ಸರಬರಾಜು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭೌಗೋಳಿಕವಾಗಿ ಚಳ್ಳಕೆರೆ ತಾಲೂಕು ಹೆಚ್ಚು ವಿಸ್ತರಣೆ ಹೊಂದಿದ್ದು, ವಿಶಾಲವಾದ ಅರಣ್ಯ ಪ್ರದೇಶವಿದ್ದರೂ ಸಹ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಮಳೆ ವೈಫಲ್ಯದ ಜೊತೆಗೆ ಸಾವಿರಾರು ಎಕರೆ ಭೂಮಿಯನ್ನು ಸಹ ಸರ್ಕಾರ ಪ್ರತಿಷ್ಠಿತ ಸಂಸ್ಥೆಗಳಿಗೆ ದೇಶದ ಹಿತರಕ್ಷಣೆ ದೃಷ್ಠಿಯಿಂದ ನೀಡಿದ್ದು, ಎಲ್ಲಿಯೂ ಮೇವು ಸಿಗುತ್ತಿಲ್ಲ. ಈ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯ ನಂಬಿಕೆ ಮತ್ತು ವಿಶ್ವಾಸದಿಂದ ಈ ದೇವರ ಎತ್ತುಗಳ ಮೇಲೆ ಅಪಾರವಾದ ಭಕ್ತಿ-ಶ್ರದ್ಧೆಯಿಂದ ಅವುಗಳನ್ನು ಕಾಯುತ್ತಿದ್ದಾರೆ. ನಿತ್ಯವೂ ಅವುಗಳಿಗೆ ಮೇವು, ನೀರು ಒದಗಿಸುವುದು ಸವಾಲಿನ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ತುರ್ತು ಗಮನ ಹರಿಸಬೇಕು.•ಸಿ.ಪಿ. ಮಹೇಶ್‌ಕುಮಾರ್,
ಗೋ ಸಂರಕ್ಷಣಾ ಸಮಿತಿ ಸದಸ್ಯ.