ಬೆಂಗಳೂರು: ಶಾಸಕರಿಗೆ ಗನ್‌ಮ್ಯಾನ್ ಯಾಕೆ ಬೇಕು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದ್ದು, ತತ್‌ಕ್ಷಣದಿಂದಲೇ ಶಾಸಕರಿಗೆ ಗನ್‌ಮ್ಯಾನ್ ನೀಡಿರುವುದನ್ನು ರದ್ದುಪಡಿಸಿ ಎಂದು ಸರಕಾರವನ್ನು ಒತ್ತಾಯಿಸಿದರು.
ಮಾಜಿ ಸೈನಿಕರು ಪೊಲೀಸ್ ಸೇವೆಗೆ ಸೇರಿದರೆ ಅವರ ವರ್ಗಾವಣೆ ಅವಧಿ ವಿಚಾರದ ಕುರಿತ ಚರ್ಚೆ ವೇಳೆ ಮಾತನಾಡಿದ ಆಯನೂರು ಮಂಜುನಾಥ್, ಪೊಲೀಸರನ್ನು ಅನಾಗರಿಕವಾಗಿ, ಅನುಪಯುಕ್ತವಾಗಿ ನಡೆಸಿಕೊಳ್ಳುವ ವ್ಯವಸ್ಥೆಗೆ ಕಡಿವಾಣ ಬೀಳಬೇಕು. ಇದು ಗುಲಾಮರ ದೇಶ ಅಲ್ಲ, ಸ್ವತಂತ್ರ ದೇಶ ಎಂದರು.
ಶಾಸಕರಿಗೆ ಗನ್‌ಮ್ಯಾನ್ ನೀಡಲಾಗಿದೆ. ಕೆಲವು ಶಾಸಕರಿಗೆ ಇಬ್ಬರು, ಮೂವರು ಗನ್‌ಮ್ಯಾನ್‌ಗಳಿದ್ದಾರೆ. ಈ ಗನ್‌ಮ್ಯಾನ್‌ಗಳು ಯಾಕೆ ಬೇಕು? ಶಾಸಕರಿಗೆ ಅಷ್ಟೊಂದು ಜೀವಭಯ ಇದೆಯಾ? ಅಷ್ಟಕ್ಕೂ ಅದ್ಯಾವ ಘನಾಂದಾರಿ ಕೆಲಸ ಮಾಡುತ್ತೇವೆ ಎಂದು ಗನ್‌ಮ್ಯಾನ್‌ಗಳು ಬೇಕು. ಹಿಂದೆ-ಮುಂದೆ ಗನ್‌ಮ್ಯಾನ್‌ಗಳು ಇರುವುದು ಒಂದು ರೀತಿಯ ಗತ್ತು ಪ್ರದರ್ಶನ ಆಗುತ್ತದೆ. ಶಾಸಕರಾದರೆ ರಾಜ ಮಹಾರಾಜರ ಅಪರಾವತಾರ ಎಂಬ ಭಾವನೆ ಬಂದು ಬಿಡುತ್ತದೆ. ಜೀವಭಯ ಇದೆ ಎಂದು ಲಿಖಿತ ಮನವಿ ಕೊಟ್ಟವರಿಗೆ ಗನ್‌ಮ್ಯಾನ್‌ಗಳನ್ನು ಕೊಡಿ, ಉಳಿದವರಿಗೆ ನಾಳೆಯಿಂದಲೇ ರದ್ದುಪಡಿಸಿ ಎಂದವರು ಆಗ್ರಹಿಸಿದರು.
ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ಜತೆ ನಾನು ಚರ್ಚಿಸುತ್ತೇನೆ ಎಂದರು.